
೨.೦೫ ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ
ಶರಣಪ್ಪ ಮೇಲೆ ಲೋಕಾಯುಕ್ತ ದಾಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 05 – ಕಂಪ್ಲಿ ಪುರಸಭೆ ಪರಿಸರ ಅಭಿಯಂತರ ಶರಣಪ್ಪನ ಗಂಗಾವತಿಯ ಮನೆ, ಕಂಪ್ಲಿ ಪುರಸಭೆ ಕಚೇರಿ ಹಾಗೂ ಸಿರಗುಪ್ಪ ಬಳಿಯ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
ಶರಣಪ್ಪ ಅವರಿಂದ ೧ ಕೋಟಿ ೪೫ ಲಕ್ಷ ರೂ. ಮೌಲ್ಯದ ಸೈಟ್, ಮನೆ ಇನ್ನಿತರ ಸ್ಥಿರಾಸ್ತಿ ಮತ್ತು ೬೦.೩೫ ಲಕ್ಷ ರೂ. ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ನಗದು ಸೇರಿ ಒಟ್ಟು ೨.೦೫ ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಸಲಿಂ ಪಾಷಾ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ, ಅವರಿಗೆ ಸಂಬಂಧಿಸಿದ ಆಸ್ತಿಗಳ ಕಡತಗಳನ್ನು ಪರಿಶೀಲಿಸಿದರು.
ಮಾರುತಿ ಮೇಲೆಯೂ ದಾಳಿ: ಗಂಗಾವತಿ ರೇಜಿನ ಆನೆಗೊಂದಿ ವಿಭಾಗದ ಡೆಪಿಟ್ಯು ರೇಜ್ ಫಾರೆಸ್ಟ್ ಆಫೀಸರ್ ಬಿ.ಮಾರುತಿ ಲಿಂಗಪ್ಪಗೆ ಸಂಬಂಧಿಸಿದ ಮನೆ ಮತ್ತು ಕಚೇರಿಗಳ ಮೇಲೆಯೂ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿದ್ದಾರೆ.
ಇವರಿಂದ ೩.೫೦ ಲಕ್ಷ ರೂ. ನಗದು, ೧೧.೮೦ ಲಕ್ಷ ರೂ. ಮೌಲ್ಯದ ವಾಹನ, ೬.೧೫ ಲಕ್ಷ ರೂ. ಮೌಲ್ಯದ ೨೪೯.೩೯ ಗ್ರಾಂ ಬಂಗಾರ, ೭೩,೮೦೦ ರೂ. ಮೌಲ್ಯದ ೧೪೨೮ ಗ್ರಾಂ ಬೆಳ್ಳಿ ಹಾಗೂ ೨೦ ಸಾವಿರ ರೂ. ಮೌಲ್ಯದ ಮದ್ಯ ಸೇರಿ ೨೧.೩೯ ಲಕ್ಷ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.