
ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ಇಲ್ಲಿನ ಪ್ರಶಾಂತ ಕಾಲೊನಿಯಲ್ಲಿರುವ ವಿಠ್ಠಲಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರ ವಿವಿಧ ಕಾರ್ಯಕ್ರಮಗಳು ನಡೆದವು. ಭಕ್ತರು ಬೆಳಿಗ್ಗೆನಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದ ವತಿಯಿಂದ ವಿಠ್ಠಲಕೃಷ್ಣ, ಮುಖ್ಯಪ್ರಾಣದೇವರಿಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ಮಹಾಭಿಷೇಕ, ವಿಷ್ಣು ಸಹ್ರನಾಮ ಪಾರಾಯಣ, ಅಲಂಕಾರ, ಕೃಷ್ಣ ದೇವರ ಮೂರ್ತಿಗೆ ಬೆಣ್ಣೆ ಅಲಂಕಾರ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮಕ್ಕಳು ಕೃಷ್ಣ, ರಾಧೆ ಹೀಗೆ ವಿವಿಧ ವೇಷಭೂಷಣಗಳಿಂದ ಕಂಗೊಳಿಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾಯರ ಮಠದ ಪ್ರಧಾನ ಅರ್ಚಕರಾದ ಪಂಡಿತ್ ರಘುಪ್ರೇಮಾಚಾರ ಮುಳಗುಂದ ಅವರಿಂದ ಭಾಗವತ ಪ್ರವಚನ ಜರುಗಿತು. ವಿಠ್ಠಲಕೃಷ್ಣ ದೇವರಿಗೆ ಬೆಣ್ಣೆ ಅಲಂಕಾರ ಮಾಡಿದ ಚಿತ್ರಣ ವಿಶೇಷವಾಗಿತ್ತು.
ಕೃಷ್ಣ ಜನ್ಮಾಷ್ಟಮಿಯ ಎರಡನೇ ಹಾಗೂ ಕೊನೆಯ ದಿನವಾದ ಭಾನುವಾರ ವಿಠ್ಠಲ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರಿಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ತೊಟ್ಟಿಲು ಸೇವೆ, ಪಂಚಾಮೃತ ಅಭಿಷೇಕ, ಮಹಾಮಂಗಲಾರತಿ, ಪಾರಣಿ ತೀರ್ಥ ಪ್ರಸಾದ ಜರುಗಲಿದೆ. ಸಂಜೆ 4 ಗಂಟೆಗೆ ಪಂಡಿತರಿಂದ ಪ್ರವಚನ ಮಾಲಿಕೆ, ವಿಠ್ಠಲಕೃಷ್ಣ ದೇವರ ಗ್ರಾಮ ಪ್ರದಕ್ಷಿಣೆ, ಗೋಪಾಲಕಾವಲಿ, ಪಾಲ್ಕಿ ಸೇವೆ, ರಾತ್ರಿ ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿದೆ.