
ಕೊಪ್ಪಳ ತಾ.ಪಂಚಾಯತಿಯಲ್ಲಿ ಸ್ವೀಪ್ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 6- ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮತದಾನ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಮುಖ್ಯ ಬರಹಗಾರರಿಗೆ ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವೀಪ್ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ತಾಲೂಕ ನರೇಗಾ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಮೇ-7 ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸಲು ಸಂಜೀವಿನಿ ಸಂಘದ ಎಲ್ಲಾ ಮುಖ್ಯ ಬರಹಗಾರರು, ಸಂಘದ ಮಹಿಳೆಯರು ಕೈಜೋಡಿಸಬೇಕೆಂದು ಕರೆ ನೀಡಿದರು.
ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೇ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. ಯಾವುದೇ ಆಸೆ ಆಮೀಷಗಳಿಗೆ ಹಾಗೂ ಮತವನ್ನು ಬೇರೆಯವರಿಗೆ ಮಾರಿಕೊಳ್ಳದೇ ಅರ್ಹರಿಗೆ ಮತ ಚಲಾಯಿಸಿರಿ ಇದರಿಂದ ಗ್ರಾಮದ ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಳದ ಬಗ್ಗೆ ಚುನಾವಣೆ ಆಯೋಗದ ಕ್ರಮಕ್ಕೆ ಬೆಂಬಲಿಸೊಣ ಎಂದರು.
85 ವರ್ಷ ಮೇಲ್ಪಟ್ಟವರು ಮನೆಯಿಂದಲೇ ಮತ ಚಲಾಯಿಸಲು ಆಯೋಗವು ಅವಕಾಶ ನೀಡಿರುವುದರಿಂದ ನಿಮ್ಮ ಮನೆಯಲ್ಲಿ, ನಿಮ್ಮ ಸಂಘದ ಸದಸ್ಯರಿಗೆ ಹಾಗೂ ನಿಮ್ಮ ಮನೆಯ ಸುತ್ತ-ಮುತ್ತಲಿನ ಕುಟುಂಬದವರಿಗೆ ಮಾಹಿತಿ ನೀಡಬೇಕೆಂದರು.
ಕ್ಲಸ್ಟರ್ ಸುಪರ್ವೈಸರ್ ವೆಂಕಟೇಶ್ ಶಿಗೇನಹಳ್ಳಿ ಮಾತನಾಡಿ, ಮತದಾನ ಪವಿತ್ರವಾದ ಕಾರ್ಯ. ಮತದಾನ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಸ್ವೀಪ್ ಕಾರ್ಯಕ್ರಮದಲ್ಲಿ ಸೇರಿರುವ ಸಂಜೀವಿನಿ ಮಹಿಳೆಯರು ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ದೇಶಕ್ಕೆ ಸುಭದ್ರ ಆಡಳಿತ ಒದಗಿಸಲು ಕೈ ಜೋಡಿಸೋಣ ಎಂದರು.
ನಂತರ ಮತದಾರರ ಪ್ರತಿಜ್ಞಾ ವಿಧಿಯನ್ನು ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಯೋಜನೆಯ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ(ಎಸ್ವಿಪಿ) ನವೀನ್, ಶರಣಪ್ಪ, ಕಾವ್ಯಶ್ರೀ ಹಾಗೂ ಸಂಜೀವಿನಿ ಸಂಘದ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ 55 ಮುಖ್ಯ ಬರಹಗಾರರು ಹಾಜರಿದ್ದರು.