
ಹೆಚ್ಚುತ್ತಿರು ಅಪಘಾತಗಳು ; ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 28 – ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಹಿಸಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಎಸ್. ವಂಟಗೋಡಿ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದರು.
ಶುಕ್ರವಾರ ರಾತ್ರಿ ತಾಲ್ಲೂಕಿನ ಮುನಿರಾಬಾದ್ ಠಾಣಾ ವ್ಯಾಪ್ತಿಯ ಪೊಲೀಸ್ ಇಲಾಖೆ ಅಧಿಕಾರಿಗಳು ಟೋಲ್ ಗೇಟ್ ಬಳಿ ಅಪಘಾತ ವಲಯಗಳನ್ನು ಪರಿಶೀಲನೆ ಮಾಡಿದರು.
ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಕಿರ್ಲೋಸ್ಕರ್ ಕ್ರಾಸ್, ಹುಲಿಗಿ ಕ್ರಾಸ್, ಮತ್ತು ಶಹಪುರ ಟೋಲ್ ಗೇಟ್ ಹತ್ತಿರ ಇರುವ ಅಪಘಾತ ವಲಯಗಳ ಸ್ಥಳ ಪರಿಶೀಲನೆ ನಡೆಸಿದರು.
ಬ್ಲ್ಯಾಕ್ ಸ್ಪಾಟ್ ಪರಿಶೀಲಿಸಿ ಜೊತೆಯಲ್ಲಿಯೇ ಇದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹೆದ್ದಾರಿಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಸಾರ್ವಜನಿಕರು ಮತ್ತು ವಿಶೇಷವಾಗಿ ಮಹಿಳೆಯರಿಗೆ ತೊಂದರೆಯಾಗದಂತೆ ಜಾಗೃತಿ ವಹಿಸಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚುತ್ತಿರುವ ಕಾರಣ ಈ ಪರಿಶೀಲನೆ ನಡೆದಿದ್ದು, ಇದೇ ವೇಳೆ ಆರ್‌ಟಿಒ ಇಲಾಖೆ ಅಧಿಕಾರಿಗಳು ಕೂಡ ಇದ್ದರು.
‘ ಜಿಲ್ಲೆಗೆ ಕೆಲ ದಿನಗಳಲ್ಲಿ ಜಿಲ್ಲೆಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಎಲ್ಲ ಕಡೆ ಎಸ್‌ಪಿ ಭೇಟಿ ನೀಡುತ್ತಿದ್ದಾರೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಮಹಿಳೆ ಫೋಟೊ ಬಳಸಿ ಅಶ್ಲೀಲ ವಿಡಿಯೊ: ನಗರದ ಮಹಿಳೆಯೊಬ್ಬರ ಫೋಟೊಗಳು ಮತ್ತು ಹೆಸರು ಬಳಸಿಕೊಂಡು ಮನಬಂದಂತೆ ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಇಲ್ಲಿನ ಕೊಪ್ಪಳದಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು ನನ್ನ ವೈಯಕ್ತಿಕ ಫೋಟೊಗಳನ್ನು ಅಪ್‌ಲೋಡ್ ಮಾಡಲಾಗಿದೆ.
ಫೋಟೊಗಳನ್ನು ಬಳಸಿಕೊಂಡು ವಿಡಿಯೊ ಎಡಿಟ್ ಮಾಡಿ ಅಶ್ಲೀಲ ಧ್ವನಿ ಜೋಡಿಸಿ ನನ್ನ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ ಎನ್ನಲಾಗಿದೆ.