5f774d15-cf23-4331-82e6-dbfe9359970b

ಗರ್ಭಿಣಿ, ಬಾಣಂತಿಯರ ಮರಣ ಪ್ರಮಾಣ

ಕಡಿಮೆಗೊಳಿಸಲು ಶ್ರಮಿಸಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಕರುನಡ ಬೆಳಗು ಸುದ್ದಿ
ಬಳ್ಳಾರಿ, ೧೮- ಜಿಲ್ಲೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಲ್ಲಿ ನಾನಾ ರೀತಿಯ ಅಂಶಗಳಿಗೆ ಸಂಬಂಧಿಸಿದಂತೆ ಸಂಭವಿಸುವ ಮರಣ ಪ್ರಕರಣಗಳ ಪ್ರಮಾಣ ಕಡಿಮೆಗೊಳಿಸಲು ನಿರಂತರ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಸಮಿತಿ ಅಭಿಯಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಕಬ್ಬಿಣಾಂಶ ಕೊರತೆ, ಅಧಿಕ ರಕ್ತದೊತ್ತಡ, ಡಯಾಬಿಟಿಸ್, ತೂಕ ಪ್ರಮಾಣ ಸೇರಿದಂತೆ ಇತರೆ ಅಂಶಗಳು ಏರಿಳಿತಗೊಳ್ಳುತ್ತದೆ, ಇದಕ್ಕೆ ಸಕಾಲದಲ್ಲಿ ತಪಾಸಣೆ ಮಾಡಿಕೊಳ್ಳಲು ಸೂಚಿಸಬೇಕು ಮತ್ತು ಇದರ ಕುರಿತು ಜಾಗೃತಿ ಮೂಡಿಸಬೇಕು ಎಂದು ವೈದ್ಯಾಧಿಕಾರಿಗಳು, ಆಶಾಕಾರ್ಯಕರ್ತೆಯರಿಗೆ ತಿಳಿಸಿದರು.
ಗರ್ಭಿಣಿಯರು ತಪಾಸಣೆಗೆ ಆಗಮಿಸುವ ಸಮಯದಲ್ಲಿ ಇವರಿಗೆ ದೇಹದಲ್ಲಿ ಇಂತಹ ಅಂಶಗಳ ಪ್ರಮಾಣ ಕಡಿಮೆ ಅಥವಾ ಹೆಚ್ಚು ಇದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ವೈದ್ಯಾಧಿಕಾರಿಗಳು, ಗರ್ಭಿಣಿಯಾದ ಮೇಲೆ ಅವರಿಗೆ ನೀಡುವ ತಾಯಿಕಾರ್ಡ್‍ಗಳಲ್ಲಿ ನಮೂದಿಸಬೇಕು. ಅದೇರೀತಿಯಾಗಿ ಅಶಾಕಾರ್ಯಕರ್ತೆಯರು ಅವರ ಹೆಚ್ಚಿನ ಕಾಳಜಿ ವಹಿಸಬೇಕು. ಇದರಿಂದ ಹೆರಿಗೆಗಳು ಸುಗಮವಾಗಿ ನಡೆಯಲು ಅನುಕೂಲವಾಗುತ್ತದೆ ಎಂದರು.
ವಿವಿಧ ಭಾಗಗಳಿಂದ ಸಾರ್ವಜನಿಕರು ಚಿಕಿತ್ಸೆಗಾಗಿ ನಗರಕ್ಕೆ ಬರುತ್ತಾರೆ, ಆಸ್ಪತ್ರೆಗಳ ಮುಂಭಾಗ ಸಾಲುಗಟ್ಟಿ ನಿಲ್ಲುತ್ತಾರೆ, ಇದನ್ನು ನಾನೂ ಗಮನಿಸಿದ್ದೇನೆ; ವೈದ್ಯರು ನಿಗದಿತ ಸಮಯದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು. ಈ ಕುರಿತು ನಿಗಾವಹಿಸಬೇಕು ಎಂದು ಡಿಹೆಚ್‍ಓ ಅವರಿಗೆ ಸೂಚಿಸಿದರು.
ಜಿಲ್ಲೆಯ ಸಾರ್ವಜನಿಕ ಆಸ್ಪತೆಗಳಲ್ಲಿ ಹಣಪಡೆದುಕೊಂಡು ಚಿಕಿತ್ಸೆ ಸೇವೆ ನೀಡುತ್ತಿರುವುದು ಕಂಡುಬರುತ್ತಿದೆ ಮತ್ತು ಕರ್ತವ್ಯ ಲೋಪ ಎಸಗುತ್ತಿದ್ದರೆ, ಅಂತಹವರು ಖಾಸಗಿ ವಲಯಕ್ಕೆ ತೆರಳಿ ಕಾರ್ಯನಿರ್ವಹಿಸಬೇಕು; ಇಲ್ಲದಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳಿವೆ, ವೈದ್ಯರಿದ್ದಾರೆ, ಹಲವಾರು ಸೌಲಭ್ಯಗಳಿವೆ, ಅನುದಾನದ ಕೊರತೆಯಿಲ್ಲ, ಇವುಗಳನ್ನೆಲ್ಲಾ ಬಳಸಿಕೊಂಡು, ವೈದ್ಯರು ಪ್ರಾಮಾಣಿಕತೆಯಿಂದ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈರಮೇಶ್ ಬಾಬು ಅವರು, ಎರಡು ತಿಂಗಳಲ್ಲಿ ಸಂಭವಿಸಿದ ಗರ್ಭಿಣಿ, ಬಾಣಂತಿಯರ ಮರಣ ಪ್ರಕರಣಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು.
ಈಗಾಗಲೇ ಉಲ್ಭಣಗೊಳ್ಳುತ್ತಿರುವ ಕೋವಿಡ್-19 ಸೋಂಕನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯು ಬೆಡ್, ಆಕ್ಸಿಜನ್ ವೆಂಟಿಲೇಟರ್ ಹಾಗೂ ಇತರೆ ಅಗತ್ಯ ಕ್ರಮ ಸಜ್ಜುಮಾಡಿಕೊಳ್ಳಲಾಗಿದೆ ಎಂದು ಡಿಹೆಚ್‍ಓ ಡಾ.ವೈ.ರಮೇಶ್ ಬಾಬು ಅವರು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಡಿ.27ರಿಂದ ಜ.01ರವರೆಗೆ ಹಮ್ಮಿಕೊಂಡಿರುವ ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನ ಕಾರ್ಯಕ್ರಮದ ಭಿತ್ತಿಚಿತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಕುಟುಂಬ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಸೇರಿದಂತೆ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಶುಶುಷ್ರಕರು ಮತ್ತು ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!