
ಅನ್ನಪೂರ್ಣ ಪದ್ಮಸಾಲಿಯವರ ‘ಗುರುತಿನ ಕೊರತೆಗಳು’ ಕೃತಿ ಅವಲೋಕನ
ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
(ದಿನಾಂಕ ೨೯-೦೩-೨೦೨೪ರಂದು ಶ್ರೀಮತಿ ಅನ್ನಪೂರ್ಣ ಪದ್ಮಸಾಲಿಯವರ ‘ಗುರುತಿನ ಕೊರತೆಗಳು’ ಕವನ ಸಂಕಲನ ಬಿಡುಗಡೆ ನಿಮಿತ್ಯ ಕೃತಿ ಪರಿಚಯ)
ಕರುನಾಡ ಬೆಳಗು
“ತಲೆ ಪಕ್ಕಕ್ಕಿಟ್ಟು ಹೃದಯ ವೈಶಾಲ್ಯತೆಯಲ್ಲಿ ಕಿವಿಗೊಡುತ ಬದುಕಿನ ಆಳದಲ್ಲಿ ಹೊರಟ ದನಿಗೂ, ಕಣ್ಣೀರಿಟ್ಟ ಕರುಳು ರೆಕ್ಕೆಗಳು ಸೋತರೂ, ಹಾರಾಟ ನಿಲ್ಲದ ಹಕ್ಕಿಗೆ ಗುರುತಿನ ಕೊರತೆಗಳು”!! ಇಲ್ಲಿ ಕವಿಯತ್ರಿ ಅನ್ನಪೂರ್ಣರವರು ಕೇವಲ ಮೂಕ ಹಕ್ಕಿಗೆ ಸಾಂಕೇತಿಕವಾಗಿ ಸೂಚಿಸಿದ್ದರೂ, ಅದು ಮನುಷ್ಯ ಬದುಕಿಗೂ ಅನ್ವಯಿಸುತ್ತದೆ. ಬದುಕು ಸೋತು ನಿಶ್ಯಕ್ತಿಯಾದಾಗಲೂ, ಕಣ್ಣೀರಿಟ್ಟರೂ, ರೆಕ್ಕೆಗಳು ಹಾರಾಡಿ ಸೋತರೂ ಸಹ ಬದುಕಿಗಾಗಿ ಮನುಷ್ಯ ಹೋರಾಟ, ಹಾರಾಟಗಳನ್ನು ಮಾಡಲೇಬೇಕು. ಸಾಕಾಯಿತೆಂದು ಅಥವಾ ಸೋಲಾಯಿತೆಂದು ನಿಂತರೆ ಬದುಕು ಸಾಗದು; ಮುಂದೆ ಸಾಗಲೇಬೇಕು, ಯಾಕೆಂದರೆ ಬದುಕು ಇನ್ನೂ ಮುಂದಿದೆ.
ಇದು ಕೊಪ್ಪಳದ ಕವಿಯಿತ್ರಿ ಶ್ರೀಮತಿ ಅನ್ನಪೂರ್ಣ ಪದ್ಮಸಾಲಿಯವರ ‘ಗುರುತಿನ ಕೊರತೆಗಳು’ ಎಂಬ ತಮ್ಮ ಪ್ರಥಮ ಕವನ ಸಂಕಲನದಲ್ಲಿ ಉಲ್ಲೇಖಿಸಿದ್ದಾರೆ. ಅನ್ನಪೂರ್ಣ ಪದ್ಮಸಾಲಿಯವರು ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಚಿಲಕವಾಡದವರು.
ತಮ್ಮ ಶಿಕ್ಷಣವನ್ನು ಸ್ವ ಗ್ರಾಮವಾದ ಚಿಲಕವಾಡ, ನವಲಗುಂದ, ಚಿತ್ರದುರ್ಗದಲ್ಲಿ ಮುಗಿಸಿದ್ದಾರೆ. ಬಿ.ಎ, ಬಿ.ಎಡ್ ಪದವೀಧರೆಯಾದ ಇವರು ೨೦೦೬ರಿಂದ ಪ್ರೌಢ ಶಾಲಾ ಶಿಕ್ಷಕಿಯಾಗಿ ಬೊಮ್ಮನಹಳ್ಳಿ, ನೀರಲಗಿ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಕೊಪ್ಪಳದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಹವ್ಯಾಸವೆಂಬಂತೆ ಸಾಹಿತ್ಯಿಕ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಿಡಿ ಕವನ, ಕಥೆ, ವೈಚಾರಿಕ ಲೇಖನ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯದ ಕೃಷಿ ಮಾಡಿದ್ದಾರೆ. ‘ಗುರುತಿನ ಕೊರತೆಗಳು’ ಎಂಬ ಅವರ ಚೊಚ್ಚಲ ಕವನ ಸಂಕಲನದ ಮೂಲಕ ಅಧೀಕೃತವಾಗಿ ಸಾಹಿತ್ಯ ಲೋಕದಲ್ಲಿ ಹೆಸರು ನಮೂದಿಸಿದ್ದಾರೆ.
ಈ ಸಂಕಲನ ನಲವತ್ತು ಕವನಗಳ ಗುಚ್ಚ. ಇದು ಅನ್ನಪೂರ್ಣರವರ ಚೊಚ್ಚಲ ಕೃತಿಯಾದರೂ ಅಪಾರ ವಿದ್ವತ್‌ನಿಂದ ಕೂಡಿದೆ ಎಂದು ಭಾಸವಾಗುತ್ತಿದೆ. ಇದು ಒಂದರ್ಥದಲ್ಲಿ ಪ್ರತಿರೋಧದ ಮೂಸೆಯಲ್ಲಿ ಮೂಡಿ ಬಂದಂತೆ ಕಾಣುತ್ತಿದೆ. ಯಾಕೆಂದರೆ ಇದರಲ್ಲಿರುವ ಬಹುತೇಕ ಕವಿತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಅದು ನಿಜವೆನಿಸುತ್ತದೆ. ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆಗಳ ವಿರುದ್ಧ ಕವಿಯಿತ್ರಿ ಮೌನವಾಗಿಯೇ ಪ್ರತಿರೋಧವನ್ನು ಒಡ್ಡಿದಂತೆ ಕಾಣುತ್ತಿದೆ.
ರೈತನು ಈ ದೇಶದ ಬೆನ್ನೆಲುಬು ಎಂದು ಇಡೀ ವ್ಯವಸ್ಥೆಯೇ ಕೊಂಡಾಡುತ್ತಿದೆ. ಆದರೆ ಆತನಿಗೆ ಒದಗುವ ಆಪತ್ತುಗಳು ಮಾತ್ರ ನಿರಂತರ. ಅವನ ಅಳಲನು ಕೇಳುವರಾರು? ಅವನ ಬೆವರಿನ ಫಲವನ್ನು ಎಲ್ಲರೂ ಉಣ್ಣುತ್ತಾರೆ. “ಬಿತ್ತಿಹೆಯೋ ರೈತನು ನಿನ್ನ ಬೆಳೆಯೊಳು ನಿನ್ನ ಬೆವರನು ಹುಡುಕುತಿಹೆನು ನಾನು ನಶಿಸಿರುವ ಸ್ವಚ್ಛಂದದ ಹಸಿರನು” ಎನ್ನುವಲ್ಲಿ ಅವನ ಬೆವರಿನಲ್ಲಿ ಹಸಿರಿದೆ, ಅನ್ನವಿದೆ ಜೊತೆಗೆ ನಮ್ಮ ಉಸಿರೂ ಇದೆ.
ಒಂದು ವೇಳೆ ಅನ್ನದಾತ ಬೆವರು ಹರಿಸಿ ಕೃಷಿ ಮಾಡುವುದನ್ನು ನಿಲ್ಲಿಸಿದರೆ ನಮ್ಮ ಬದುಕೇ ಸ್ಥಬ್ಧವಾಗುತ್ತದೆ. “ಎದೆಗೆ ಒದ್ದ ಬೀದಿಯಲ್ಲಿ ಜೀವ ಲೋಕದ ಎಲ್ಲ ವ್ಯಾಧಿಯಲ್ಲಿ ಕೃಷಿಗೆ ಮಾಡಿರುವ ಸಾಲ ರೈತರ ಹಿಂಡಿ ಹಿಪ್ಪೆ ಮಾಡಿದ ಶೂಲ”ವಾಗಿದೆ ಎಂದು ಮನ ಕಲಕುವಂತೆ ಅನ್ನಪೂರ್ಣರವರು ಮಾತನಾಡಿದ್ದಾರೆ. “ಮಳೆ ಇಲ್ಲ ಬೆಳೆ ನಷ್ಟ, ಮೇವಿನ ಕೊರತೆ; ಅಸಹಾಯಕತೆಗೆ ಒಳಗಾದ ಕೃಷಿಕ” ಏನು ಮಾಡಲು ಸಾಧ್ಯ? ಕೊನೆಗೆ ಆತ್ಮಹತ್ಯೆಯೊಂದೇ ದಾರಿ. ಇಂತಹ ಮನಕಲುಕುವ ಅನೇಕ ಪ್ರಸಂಗಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ. ಈ ವ್ಯವಸ್ಥೆಯಲ್ಲಿ ಶೋಷಣೆ ಕೇವಲ ರೈತರಿಗಷ್ಟೇ ಸೀಮಿತವಾಗಿಲ್ಲಾ. ಅದು ಬಡವನನ್ನೂ ಕಾಡಿದೆ. ಇಂದು ಬಡವರು ಉಳ್ಳವರಿಂದ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ.
“ತುಳಿವ ಕಾಲುಗಳ ಮೇಳ ಕೊನೆಯಿಲ್ಲ, ಕೊಳೆತ ಮನಸುಗಳು ದೌರ್ಬಲ್ಯದ ಸೆರೆಯಾಳುಗಳು ತೀರದ ಮಾನಕ್ಕೆ ಹೂಬಿಟ್ಟಿದೆ ಪಾತಕ ಪ್ರಪಂಚ ಉಳ್ಳವರ ಬತ್ತಳಿಕೆಯಲ್ಲಿ ಬಡವರ ಜೀವ ಬಡಿದಾಟ ಬದುಕಿ”ಗಾಗಿ ಹೋರಾಡುತ್ತಿದ್ದಾರೆ. ಉಳ್ಳವರ ದೌರ್ಜನ್ಯದಲ್ಲಿ ಅವರ ಬದುಕು ತುಳಿತಕ್ಕೆ ಒಳಗಾಗಿ ಸೆರೆಯಾಗಿದೆ.
ಬದುಕಿನ ಬಗ್ಗೆ ಅನೇಕ ಚಿಂತನೆಗಳು, ತಕರಾರುಗಳು ಮನುಷ್ಯ ಹುಟ್ಟಿದಾಗಿನಿಂದಲೂ ಚರ್ಚೆಗಳು ನಡೆಯುತ್ತಲಿವೆ.
ಈ ಬದುಕು ನಶ್ವರ ಎಂದವರು ಒಂದೆಡೆಯಾದರೆ; ಮತ್ತೊಂದೆಡೆ ಸಮೃದ್ಧಿ ಎಂದವರೂ ಇದ್ದಾರೆ. “ಸಾವು ಸತ್ತಿದೆ, ಬದುಕು ಅತ್ತಿದೆ, ಹಗುರವಾಗಿ ಅಲದಾಡುವ ಅಗಣ್ಯರು ಗಟ್ಟಿ… ಕರಗಬಹುದೆ….? ಹೂ ಬಿಸಿಲ ಮಂಜಿನಂತೆ ನೀರ ಮೇಲಿನ ಗುಳ್ಳೆ!” ಎಂದು ಕವಿಯಿತ್ರಿ ಬದುಕಿನ ನಶ್ವರತೆ ಬಗ್ಗೆ ತಕರಾರು ತೆಗೆದಂತೆ ಕಾಣುತ್ತಿದೆ. “ಅಬ್ಬಾ…! ಬದುಕು ದುಸ್ತರ ದಾರಿದ್ರö್ಯ ಕುಟ್ಟಿ, ಕೆಡವಿ-ಕಟೆದು ಬದುಕು ಕಟ್ಟಿದರೂ ಅದೇಗೋ…. ಕಡುಕೋಪ ಘಾತಮನ ದುಃಖ ಉಡಿ ತುಂಬಿತ್ತು ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ” ಆಯ್ತೆಂಬ ವೇದನೆ ಇಲ್ಲಿ ವ್ಯಕ್ತವಾಗಿದೆ. ಜೊತೆಗೆ ಬದುಕಿನಲ್ಲಿ ಎಷ್ಟೋ ದೌರ್ಭಾಗ್ಯಗಳನ್ನು ಎದುರಿಸುತ್ತಿರುತ್ತೇವೆ.
“ಚಿಕ್ಕೆಗಳ ಬೆಳಕು ಕಣ್ಣಲ್ಲಿ ಮಿಸುಕುವ ಸಮಯ ಮನಮನದ ದಮನ ಹಸಿವು ಸುಡುತ್ತಾ ಒಡಲು ಬಾಯಾರಿಕೆ ಬಂದಾಡಲು ಹತ್ತಾರು ಬಡಿಗೆಗಳು ನೆತ್ತರದಲ್ಲಿ ಮುಳುಗೆದ್ದು ಕೊಲ್ಲುವ ಹದ್ದುಗಳ ನಡುವೆ ತನು ಕಾದ ಕುದಿ”ಯುತ್ತಿದೆ ಎಂದು ಈ ಬದುಕಿನ ಬಗ್ಗೆ ಆಧ್ಯಾತ್ಮದ ನೆಲೆಯಲ್ಲಿ ನೋಡಿದಂತೆ ಕಾಣುತ್ತಿದೆ. ಕೊನೆಗೆ “ಬದುಕೇ….!! ಒಡಲು ಸುಡಲು.. ನೀ ಬೆಂಕಿಯಾದರೆ ಬೆಳಕಾಗಲು ನಾ ದಾರಿಯಾಗುವೆ” ಎನ್ನುವಲ್ಲಿ ಬದುಕನ್ನು ಮೆಟ್ಟಿ ನಿಲ್ಲುವ ಛಲ ಹೊಂದಿದಂತೆ ಕಾಣುತ್ತಿದೆ. ವ್ಯವಸ್ಥೆಯೊಳಗೆ ಬೆಂಕಿಯ ಮಧ್ಯೆ ಬೆಳಕಾಗಿ ಲೋಕ ಬೆಳಗಬೇಕಿದೆ. ಅದು ಮಾತ್ರ ಸಾರ್ಥಕ ಬದುಕು ಎಂಬುದು ಕವಿಯಿತ್ರಿಯ ಆಶಯವಾಗಿದೆ.
ಬಹುಶಃ ಅನ್ನಪೂರ್ಣರವರಿಗೆ ಈ ವ್ಯವಸ್ಥೆಯ ಬಗ್ಗೆ ಕಡುಕೋಪವಿದ್ದಂತೆ ಕಾಣುತ್ತಿದೆ. ಅವರ ಇಡೀ ಕವನ ಸಂಕಲನವನ್ನೊಮ್ಮೆ ಓದಿದಾಗ ಅದು ನಿಜವೆನಿಸುತ್ತದೆ. ಕ್ಷಮೆಯ ಸಾಲಗಾರರು, ಕೇಡಿಗೂ ಕಡೆಗಾಲ, ದಹಿಸಲಾಗದ ದೌರ್ಭಾಗ್ಯ, ನೆಲದ ನೋವು, ಏನಾಯಿತು?, ಸಿಡುಲುಗಳ ಒಡವೆ, ಗೋರಿಯ ಮೇಲೆ ಚಿಗುರು, ಅಳಿಸಿದ ಅಂಗೈಗೆರೆ, ಒಡಲ ಚಡಪಡಿಕೆ, ಕ್ರೌರ್ಯ, ಅನ್ಯಾಯದ ಆಯಸ್ಸು ತೀರಿ, ಉಳ್ಳವರ ಬತ್ತಳಿಕೆ, ಸ್ತ್ರೀ-ಸ್ಥಿತಿ, ಬದುಕೇ, ಅನ್ನದಾತನ ಅಳಲು ಮುಂತಾದ ಕವಿತೆಗಳನ್ನು ನೋಡಿದಾಗ ಈ ವ್ಯವಸ್ಥೆಯ ಬಗ್ಗೆ ಅಪಾರ ಸಿಟ್ಟನ್ನು ಹೊರಹಾಕಿದಂತೆ ಕಾಣುತ್ತಿದೆ.
ಈ ಸಂಕಲನದಲ್ಲಿರುವ ನಲವತ್ತು ಕವಿತೆಗಳಲ್ಲಿ ಸುಮಾರು ಅರ್ದದಷ್ಟು ಕವನಗಳು ಪ್ರತಿರೋಧದ ನೆಲೆಯಲ್ಲಿ ರಚನೆಯಾದಂತೆ ಕಾಣುತ್ತಿವೆ. ಬಹುಶಃ ಅವರು ಬದುಕಿನಲ್ಲಿ ಅನುಭವಿಸಿದ ಕಷ್ಟ-ಕಾರ್ಪಣ್ಯಗಳು, ನೋವುಗಳೇ ಅದಕ್ಕೆ ಕಾರಣವಿರಬಹುದೇನೋ. ಮುಖ್ಯವಾಗಿ ಅನ್ನಪೂರ್ಣರವರು ಶಿಕ್ಷಕರು, ಸಮಾಜದ ಎಲ್ಲಾ ಆಗು-ಹೋಗುಗಳನ್ನು ಬಲ್ಲವರು. ಹೀಗಾಗಿಯೇ ಸಮಸಮಾಜ ನಿಮಾರ್ಣಕ್ಕೆ ಬೇಕಾದ ಅಂಶಗಳನ್ನು ತಮ್ಮ ಮಾತಿನಲ್ಲಿ ಹೇಳುವುದರ ಜೊತೆಗೆ ಕೆಟ್ಟ ವ್ಯವಸ್ಥೆಗೆ ಚಾಟಿ ಏಟು ಬೀಸಿದ್ದಾರೆ.
ಮನುಷ್ಯನಿಗೆ ಬದುಕಿನಲ್ಲಿ ಪ್ರೀತಿ-ಪ್ರೇಮ ಬಹಳ ಮುಖ್ಯವಾಗುತ್ತದೆ. ಪ್ರೀತಿ ಇಲ್ಲದ ಮೇಲೆ ಏನನ್ನೂ ಪಡೆಯಲಾಗದು. ಅನ್ನಪೂರ್ಣರವರ ಈ ಸಂಕಲನದಲ್ಲಿ ಏನೇ ರೋಷ-ಆವೇಶಗಳಿಂದ ಕೂಡಿದ್ದರೂ ಪ್ರೇಮದ ಮಾತುಗಳನ್ನು ಆಡಿದ್ದಾರೆ. “ಕಣ್ಣುಗಳ ಮಿಲನ ಸುಖದಲಿ, ಬೆಳಕಿನೂಟ ಕಂಪಿಸುವ ತುಟಿಗಳಲಿ, ಮೌನಕೂಟ ನೋಟ ನೋಟದಾಟದಲಿ, ಜೀವ ರೋಮಾಂಚನ ಎದೆಯಲಿ, ಅಗಾಧ ಪ್ರೇಮ ತಲ್ಲಣ”ಗಳು ಇದ್ದೇ ಇರುತ್ತವೆ. “ಪ್ರೀತಿ ಝರಿ ಹಲವು ಪರಿ, ಜೀವನಕ್ಕೆ ಕಾಲದಡಿದಾವರೆಗಳಲ್ಲಿ ವಿರಮಿಸುವ ಛಲ, ಚಲುವಿನನುಭಾವ ಲೋಕಕ್ಕೆ ಒಲವು ಪಾದ ಬಲ, ಪ್ರೀತಿಸುವ ಹೃದಯಕ್ಕೆ ಕತ್ತಲೆ ಕೂಡಾ ಬೆಳದಿಂಗಳಾ”ಗುತ್ತದೆ. ಆ ಪ್ರೀತಿ ಮುಂದಿನ ಬದುಕಿನ ಬೆಳಕಾಗುತ್ತದೆ. ಆ ಪ್ರೇಮದ ಬೆಳಕಿನಲ್ಲೇ ಭವಿಷ್ಯವನ್ನು ಕಟ್ಟಿಕೊಳ್ಳಬಹುದು.
ಸಮಸಮಾಜ ನಿರ್ಮಿಸಲು ಎಲ್ಲರೂ ಒಗ್ಗೂಡಬೇಕು ಎಂಬ ಸಿದ್ಧಾಂತ ಎಷ್ಟು ಮುಖ್ಯವೋ ಸ್ತ್ರೀಯರಿಗೆ ಸಮಾನತೆ ಕೊಡಬೇಕೆಂಬುದು ಸಹ ಅಷ್ಟೇ ಮುಖ್ಯವಾಗಿದೆ. ಅವಳು ಮನೆಯ ಒಳಗಿನ ಕೆಲಸಗಳಿಗೆ ಮಾತ್ರ ಸೀಮಿತ, ಭೋಗದ ವಸ್ತು, ಮಕ್ಕಳನ್ನು ಹೆರುವುದಕ್ಕಾಗಿ ಮಾತ್ರ ಎಂಬಂತೆಯೂ ಬಳಸಿಕೊಳ್ಳಲಾಗುತ್ತಿದೆ. ಹೆಣ್ಣನ್ನು ಇಷ್ಟೆಲ್ಲಾ ಕಡೆಗಣಿಸುವ ಸಮಾಜ ಒಂದು ವೇಳೆ ಅವಳಿಲ್ಲದಿದ್ರೆ ಹೇಗೆ ಎಂಬುದು ಊಹಿಸಲಸಾಧ್ಯ!. “ಅಬಲೆ ಅಲ್ಲ ಹೆಣ್ಣು….! ಸಬಲೆ ಅಂದರಷ್ಟೇ ಆಗದು, ಇನ್ನೂ ಇದೆ ಕತ್ತಲು ಕಾರ್ಗತ್ತಲು…” ಎಂಬ ಮಾತುಗಳನ್ನು ಗಮನಿಸಿದಾಗ ಹೆಣ್ಣಿಗಿರುವ ಮಹತ್ವ ತಿಳಿಯುತ್ತದೆ.
ಅವಳಿಲ್ಲದಿದ್ದರೆ ಪುರುಷ ಕುಲವಷ್ಟೇ ಅಲ್ಲ ಇಡೀ ಸಮಾಜವೇ ಅಂಧಾಕಾರದಲ್ಲಿ ಮುಳುಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಸ್ತ್ರೀಗೆ ಸಬಲೆ ಎಂದರಷ್ಟೇ ಸಾಲದು ಅವಳಿಗೆ ಕೊಡಬೇಕಾದ ಸ್ಥಾನ-ಮಾನಗಳನ್ನು ಕೊಡಲೇಬೇಕು ಎಂಬುದನ್ನು ಅನ್ನಪೂರ್ಣರವರು ಒತ್ತಿಹೇಳಿದ್ದಾರೆ.
ಇಂದಿನ ಆಧುನಿಕ ವಿಜ್ಞಾನ ಯುಗದಲ್ಲಿಯೂ ಮೌಢ್ಯಾಚರಣೆಗಳು ನಡೆಯುತ್ತಿವೆ. ಅದನ್ನು ಜಾಗೃತಿ ಮೂಡಿಸುವ ಮತ್ತು ವಿರೋಧಿಸುವ ಕ್ರಿಯೆಗಳು ವಿಚಾರವಂತರಿಂದ ನಡೆಯುತ್ತಿವೆ. ಇಂತಹ ಮೌಢ್ಯವನ್ನು ತಿಳಿಸಿ ಹೇಳುವ ಕೆಲಸ ಶಿಕ್ಷಕರ ಮೇಲೆ ಗುರುತರ ಜವಾಬ್ಧಾರಿ ಹೆಚ್ಚಿರುತ್ತದೆ. ಹೀಗಾಗಿ ಶಿಕ್ಷಕಿಯಾದ ಅನ್ನಪೂರ್ಣರವರು ಆ ಕೆಲಸವನ್ನು ಇಲ್ಲಿ ಮಾಡಿದ್ದಾರೆ. “ವಿಜ್ಞಾನ ಜಗತ್ತು ಜ್ಞಾನವಂತರ ಸೊತ್ತು, ಬಿಡು ನೀ ವಾಸ್ತು, ವಾಸ್ತು ವೈಜ್ಞಾನಿಕ ಮನೋಭಾವ ಅರಿತು!” ಬಾಳಿ ಎಂದು ತಿಳಿ ಹೇಳಿದ್ದಾರೆ. “ವಾಸ್ತು ತೊರೆದು ವಾಸ್ತವೀಕತೆಯನ್ನು” ಅರಿಯಬೇಕು, ಆಗ ಮಾತ್ರ ವೈಜ್ಞಾನಿಕ ಮನಸ್ಥಿತಿಯನ್ನು ಹೊಂದಲು ಸಾಧ್ಯವಿದೆ.
ಅನ್ನಪೂರ್ಣರವರು ಈ ಕೃತಿಯಲ್ಲಿ ಹಿರಿಯರ, ಮಹಾತ್ಮರ ನೆನಕೆಗಳನ್ನು ಮಾಡಿದ್ದಾರೆ. ”ಶಾಂತ ಮನದ ಅಲೆಗಳು ನೂರಾರು, ಬೇಂದ್ರೆ ಸಾಹಿತ್ಯ ಬೇರುಗಳು ಸಾವಿರಾರು, ಒಲವಿನ ಭಾವಗಳು ಬರೆದಿವೆ ಕರಗಳು, ಬೇಂದ್ರೆ ಭಾವ ನಾಡಿ ಮಿಡಿತಗಳು” ಎಂದು ವರಕವಿ ಬೇಂದ್ರೆಯವನ್ನು ನೆನೆಯಲಾಗಿದೆ. ಕವಿ ಮನಸುಗಳಿಗೆ ವರಕವಿ ಬೇಂದ್ರೆ ಅದಮ್ಯ ಚೈತನ್ಯ. ಎಲ್ಲರೂ ಸ್ಮರಿಸಿದಂತೆ ಇಲ್ಲಿ ಅನ್ನಪೂರ್ಣರವರೂ ಸಹ ಸ್ಮರಿಸಿದ್ದಾರೆ. “ಸಸಿಗಳನ್ನು ಮಕ್ಕಳಂತೆ ಬೆಳೆಸಿ, ಬೆವರು ಸುರಿಸಿ, ನೀರು ಹರಿಸಿ, ಮಮತೆಯನು ಚೆಂದ ಬೆರಸಿ, ಮರಗಳನ್ನು ಪ್ರೀತಿಯಲ್ಲಿ ಪೋಷಿಸಿ, ಸಾಕಿ ಸಲುಹಿದ ಮಹಾಮಾತೆ” ಸಾಲು ಮರದ ತಿಮ್ಮಕ್ಕ. ಒಬ್ಬರು ಪ್ರಕೃತಿ ಕವಿ, ಮತ್ತೊಬ್ಬರು ಪ್ರಕೃತಿ ಮಾತೆ. ಅವರನ್ನು ಸದಾ ಸ್ಮರಿಸುವುದು ಇಂದಿನ ಕಾಲಘಟ್ಟಕ್ಕೆ ತೀರಾ ಅವಶ್ಯವಾಗಿದೆ. ಮುಖ್ಯವಾಗಿ ಅವರ ಸಾಮಾಜಿಕ ಸೇವೆಯನ್ನು ಇಂದಿನ ಸಮಾಜಕ್ಕೆ ತಿಳಿಸುವುದು ತೀರಾ ಅವಶ್ಯವಾಗಿದೆ. ಆ ಪ್ರಯತ್ನವನ್ನು ಶಿಕ್ಷಕಿಯಾಗಿ ಅನ್ನಪೂರ್ಣರವರು ಮಾಡಿದ್ದಾರೆ.
ಇಂದು ಜಗತ್ತು ಯುದ್ಧದ ಉನ್ಮಾದದಲ್ಲಿ ತೇಲುತ್ತಿದೆ. ಗೆದ್ದೇ ಗೆಲ್ಲಬೇಕು ಎಂಬ ಹಠದಲ್ಲಿ ಹಾತೊರೆಯುತ್ತಿದೆ. ಇದರ ಮಧ್ಯೆ ಎಷ್ಟೋ ಅಮಾಯಕರ ಜೀವಗಳು ಬಲಿಯಾಗುತ್ತಿವೆ ಎಂಬುದು ಮಾತ್ರ ಅವರಿಗೆ ತಿಳಿಯುತ್ತಿಲ್ಲ. ಇದರ ಹೊರತಾಗಿಯೂ ಕವಿಮನಗಳು ಅದರ ನೋವನ್ನು ಅಕ್ಷರಗಳ ಮೂಲಕ ಹೇಳುತ್ತಿದ್ದಾರೆ. “ಕೋವಿಗಳ ತೋಟದಲ್ಲಿ ಮದ್ದು ಗುಂಡಿನ ಸದ್ದು, ಎದ್ದು ಮೆರೆದಿವೆ ನರಮೇಧ, ಮಧುರ ಸುಂದರ ಬೆಳದಿಂಗಳಲ್ಲಿ ಬಾಂಬುಗಳ ಮಳೆಗೆರೆತ”ದಲ್ಲಿ ಮಾನವೀಯತೆ ಮರೆತು ಹೋಗುತ್ತಿದೆ.
ಆ ಮನಸ್ಥಿತಿಯಿಂದ ಹೊರಬಂದು ಶಾಂತಿ-ಸೌಹಾರ್ದ ರಾಷ್ಟçಗಳು ನಿಮಾರ್ಣವಾಗಬೇಕೆಂಬ ಕವಿತ್ರಿಯ ಆಶಯಗಳನ್ನು ಎಲ್ಲರೂ ಅರಿಯಬೇಕಿದೆ.ಒಟ್ಟಿನಲ್ಲಿ ಶ್ರೀಮತಿ ಅನ್ನಪೂರ್ಣ ಪದ್ಮಸಾಲಿಯವರ ‘ಗುರುತಿನ ಕೊರತೆಗಳು’ ಈ ಸಂಕಲನದಲ್ಲಿ ವಿರೋಧ-ಪ್ರತಿರೋಧ ಏನೇ ಇದ್ದರೂ ಅನೇಕ ವೈಚಾರಿಕ ಸಂಗತಿಗಳಿವೆ. ಜ್ಞಾನ, ವಿಜ್ಞಾನ, ಜೀವ ಜಲ, ರೈತ, ಪ್ರಕೃತಿಯ ಕುರಿತು ಚಿತ್ರಿಸಿದ್ದಾರೆ.
ಈ ಕೃತಿಯಲ್ಲಿ ವಾಸ್ತು ಇದ್ದರೂ ವಿಜ್ಞಾನವಿದೆ, ನೆಲ-ಜಲದ ಕುರಿತಾದ ಮತ್ತು ಅವುಗಳ ಉಳಿಸುವ ಮತ್ತು ಬೆಳೆಸುವುದಕ್ಕಾಗಿ ಸಮಾಜದ ಗುರುತರ ಜವಾಬ್ಧಾರಿಯನ್ನು ತಿಳಿಸಿದ್ದಾರೆ. ರೈತರ ಬವಣೆಗಳು, ಜನಪರ ಕಾಳಜಿಗಳೂ ಸಹ ಈ ಸಂಕಲನದಲ್ಲಿ ಕಾಣಬಹುದಾಗಿದೆ.
ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊಬೈಲ್: ೯೪೪೮೫೭೦೩೪೦
E-mail:-skotnekal@gmail.com