
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಗ್ಯಾರೆಂಟಿಗಳ ಪ್ರಚಾರ ಕಾರ್ಯಕ್ರಮ
ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಜನ ಸಂತೋಷವಾಗಿದ್ದಾರೆ
ಶಾಸಕ ಹೆಚ್ ಆರ್ ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ, 04-ರಾಜ್ಯದಲ್ಲಿ ಐದು ಗ್ಯಾರೆಂಟಿಗಳ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳು ಇಲ್ಲಿಯವರೆಗೆ ಯಾರಿಗೆ ಸಿಕ್ಕಿಲ್ಲ ಅವರು ಮತ್ತೆ ಪಡೆದುಕೊಳ್ಳಲು ಈ ರೀತಿ ಪ್ರಚಾರಗಳನ್ನು ಮಾಡುತ್ತಿದ್ದೇವೆ ಇದರ ಸದುಪಯೋಗವನ್ನು ಜನ ಪಡೆದುಕೊಳ್ಳಬೇಕು ಎಂದು ಹೆಚ್ ಆರ್ ಗವಿಯಪ್ಪ ಹೇಳಿದರು.
ಅವರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಗ್ಯಾರೆಂಟಿಗಳ ಪ್ರಚಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಚೇರಿಯಲ್ಲಿ ಅವರು ಮಾತನಾಡಿ ಇಂದು ಇಡೀ ರಾಜ್ಯದಲ್ಲಿ ಈ 5 ಗ್ಯಾರಂಟಿಗಳ ಯೋಜನೆಗಳು ಯಶಸ್ವಿಯಾಗಿ ಸಾಗುತ್ತಿವೆ.ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜನರ ಟ್ಯಾಕ್ಸ್ ಹಣ ಜನರಿಗೆ ಮುಟ್ಟುವ ಹಾಗೆ ಗ್ಯಾರೆಂಟಿಗಳನ್ನು ಜಾರಿ ಮಾಡಿದೆ. ಈಗಾಗಲೇ ಮಹಿಳೆಯರು ಒಂದು ಕೋಟಿ ಇಪ್ಪತ್ತು ಲಕ್ಷ ಜನ ಗೃಹಲಕ್ಷ್ಮಿಯ ಯೋಜನೆಯನ್ನು ಪಡೆದುಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಲ್ಲಿ ತಿಂಗಳಿಗೆ 8 ಲಕ್ಷ ಜನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಹೊಸಪೇಟೆಯಲ್ಲಿ 65 ಲಕ್ಷ ಜನ ಇಲ್ಲಿಯವರೆಗೆ ಬಸ್ಸಿನಲ್ಲಿ ಸಂಚರಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳಿಗೆ ಶಕ್ತಿ ಕೊಟ್ಟಂತಾಗಿದೆ. ಅವರು ರಾಜ್ಯದಲ್ಲಿ ಯಾವುದೇ ದೇವಸ್ಥಾನಗಳಿಗಾಗಲಿ ಅಥವಾ ತವರು ಮನೆಯಾಗಗಲಿ ಇನ್ನು ಯಾವುದೇ ಕೆಲಸ ಕಾರ್ಯಗಳಿಗೆ ಧೈರ್ಯದಿಂದ ಸಂಚರಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಇವತ್ತು ಸುಮಾರು 150 ಜನ ಮಹಿಳೆಯರು ನನ್ನ ಮನೆ ಮುಂದೆ ಬಂದಿದ್ದರು ಅವರನ್ನು ನಾನು ವಿಚಾರಿಸಿದೆ ಗ್ಯಾರಂಟಿಗಳಿಂದ ನಾವೆಲ್ಲರೂ ಸಂತೋಷವಾಗಿದ್ದೇವೆ ಆದರೆ ವಸತಿಗಳು ಬೇಕಾಗಿವೆ ಎಂದು ಮನವಿ ಮಾಡಿದರು. ವಸತಿಯ ಬಗ್ಗೆ ಮುಖ್ಯಮಂತ್ರಿಗಳು ಅತಿ ಶೀಘ್ರದಲ್ಲಿಯೇ ವಸತಿ ಯೋಜನೆ ಜಾರಿಗೆ ತರುವ ವಿಶ್ವಾಸವಿದೆ. ಸರ್ಕಾರ ಸದ್ಯದಲ್ಲಿ ಸ್ಲಂ ಬೋರ್ಡ್ ಗೆ ಕೊಟ್ಟಿರುವ 36,000 ಮನೆಗಳನ್ನು ಕಟ್ಟಿಕೊಳ್ಳಲು ಸೂಚಿಸಿದ್ದಾರೆ ಎಂದರು.
ಶಾಸಕ ಹೆಚ್ ಆರ್ ಗವಿಯಪ್ಪ ಮಾಧ್ಯಮ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈ ಬಾರಿ ಮಳೆಯ ಅಭಾವದಿಂದ ಬರ ಪರಿಸ್ಥಿತಿ ಎದುರಾಗಿ ರೈತರು ಮತ್ತು ನಾವುಗಳು ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿ ನಮ್ಮೆಲ್ಲರ ಮುಂದೆ ಸವಾಲಾಗಿ ನಿಂತಿದೆ. ನಾವಿದನ್ನು ಚಾಲೆಂಜ್ ಆಗಿ ತೆಗೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ನಾನು ಮತ್ತು ಜಿಲ್ಲಾಧಿಕಾರಿ ನಗರಸಭೆಗೆ ಬಂದು ಅಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಜೋಡಿಸುವುದರಿಂದಾಗಿ ಸ್ವಲ್ಪ ಒತ್ತಡದಲ್ಲಿ ಇರಬಹುದು ಮುಂದಿನ ವರ್ಷದಲ್ಲಿ ಅಭಿವೃದ್ಧಿ ಕೆಲಸಗಳನ್ನು ಖಂಡಿತ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ಜನರ ನಾಡಿಮಿಡಿತ ನೋಡಲು ನಾಯಕ ರಾಹುಲ್ ಗಾಂಧಿ ಕಾಲ್ನಡಿಗೆ ಜಾತ ಮಾಡಿದ್ದಾರೆ, ಇಂತಹ ಪ್ರಬುದ್ಧ ವ್ಯಕ್ತಿಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಕೈಜೋಡಿಸಿ ಯುವಕ ರಾಹುಲ್ ಗಾಂಧಿಯವರನ್ನು ಒಮ್ಮೆ ಪ್ರಧಾನ ಮಂತ್ರಿ ಮಾಡಲು ಮತದಾರರು ಆಶೀರ್ವಾದ ಮಾಡಬೇಕೆಂದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ,ಮತ್ತು ಪ್ರಥಮ ದರ್ಜೆ ಸಹಾಯಕ ಕೆ ರಾಮಾಂಜನೇಯ್ಯ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು,ನಗರಸಭೆ ಸದಸ್ಯರು,ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು,ಸಾರ್ವಜನಿಕರು ಇತರರು ಇದ್ದರು.