
ಗ್ರಾಮೀಣದಲ್ಲಿ ನಾಟಕ ವೀಕ್ಷಣೆಗೆ ಅತ್ಯುತ್ಸಾಹ ಕುಂದಿಲ್ಲ:ವೀರಭದ್ರಗೌಡ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, .07: ಟಿವಿ, ಮೊಬೈಲ್ ಏನೇ ಬಂದರು ಇನ್ನು ನಮ್ಮ ಗ್ರಾಮೀಣ ಪ್ರದೇಶದಲ್ಲಿ ನಾಟಕ, ಬಯಲಾಟ ವೀಕ್ಷಣೆಯ ಉತ್ಸಾಹ ಕುಂದಿಲ್ಲ. ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದು ನಗರ ಪ್ರದೇಶದಲ್ಲಿ ಕಡಿಮೆಯಾಗಿದೆಂದು ಸಂಜೆವಾಣಿ ಪತ್ರಿಕೆಯ ವರದಿಗಾರ ಎನ್.ವೀರಭದ್ರಗೌಡ ಹೇಳಿದ್ದಾರೆ.
ಅವರು ನಿನ್ನೆ ಸಂಜೆ ಕುರುಗೋಡು ತಾಲೂಕಿನ ಮದಿರೆ ಗ್ರಾಮದಲ್ಲಿ ಹಂದ್ಯಾಳಿನ ಶ್ರೀ ಮಹಾದೇವತಾತ ಕಲಾ ಸಂಘ ಹಮ್ಮಿಕೊಂಡಿದ್ದ ಗೀತಗಾಯನ, ಜನಪದ ನೃತ್ಯ, ನಾಟಕ ಪ್ರದರ್ಶನದ ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ 2023 ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಇದ್ದದ್ದನ್ನು ಇದ್ದಹಾಗೆ ಪ್ರದರ್ಶಿಸುವ ನಾಟಕ ಕಲೆಯ ಸೊಬಗಿನಿಂದ ಮನುಷ್ಯ ತನ್ನ ದಿನನಿತ್ಯದ ಬದುಕಿನ ಒಂದಿಷ್ಟು ಸಂತಸಪಡೆಯಬಲ್ಲ ಎಂಬುದಕ್ಕೆ ಇಲ್ಲಿ ನೆರೆದ ನೂರಾರು ಜನರೇ ಸಾಕ್ಷಿ ಎಂದು ದೇಶದ ಹಳ್ಳಿಗಳ ಅಭಿವೃದ್ಧಿ ಹೇಗೆ ಆಗಿದೆ ಎಂಬುದಕ್ಕೆ ಮದಿರೆ ಗ್ರಾಮವೂ ಸಾಕ್ಷಿಯಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದೇ ನಮ್ಮೆಲ್ಲರ ಮೊದಲ ಗುರಿ ಆಗಬೇಕೆಂದರು.
ಮಹದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮಹಂದ್ಯಾಳು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘ ಹಳ್ಳಿಗಳಲ್ಲಿ ಕಲಾ ಪ್ರದರ್ಶನದ ಮೂಲಕ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಎಂಬ ಮಾತನ್ನು ಅಲ್ಲಗೆಳೆಯುವಂತೆ ಮಾಡುವ ಉದ್ದೇಶ ಹೊಂದಿದೆ ಎಂದರು.
ಗ್ರಾಮ ಪಂಚಾಯ್ತಿ ಮುಖಂಡ ರಮೇಶ್ ಗ್ರಾಮದ ಸಮಸ್ಯೆಗಳಿಗೆ ಯಾವುದೇ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಿದರೆ ಶಾಸಕ ಗಣೇಶ ಅವರ ಸಹಕಾರದಿಂದ ಪರಿಹರಿಸಲಿದೆಂದು ಹೇಳಿದರು.ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಕೆಂಚ ಮಾಳಪ್ಪ, ಗ್ರಾ.ಪಂ. ಸದಸ್ಯರುಗಳಾದ ಲಕ್ಷ್ಮೀ ಮಲ್ಲಯ್ಯ, ನೀಲಮ್ಮ ಕಾಮಾರೆಪ್ಪ, ಕೊಳಗಲ್ಲು ಅಂಜಿನಿ, ಕೆಂಚಪ್ಪ, ಸುವರ್ಣ ಚಾನಲ್ ವರದಿಗಾರ ನರಸಿಂಹ ಮೂರ್ತಿ ಕುಲಕರ್ಣಿ, ಮೊದಲಾದವರು ಇದ್ದರು.
ಇದೇ ವೇಳೆ ಕುರುಬರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಸನ್ಮಾನ ಕಾರ್ಯ ರಮೇಶ್ ಪವಾಡಿ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.ನಂತರ ಕಾವೇರಿ ಮತ್ತು ತಂಡ ಹಾಗು ಕೀರ್ತನೆ ಮತ್ತು ತಂಡದಿಂದ ನೃತ್ಯ ಬಳಿಕ ಸಿರಿಗೇರಿಯ ಧಾತ್ರಿ ರಂಗಸಂಸ್ಥೆಯಿಂದ, ಪಂಡಿತಾರಾದ್ಯ ಸ್ವಾಮೀಜಿ ಸಾಣೆಹಳ್ಳಿ ಇವರು ರಚಿಸಿದ,ಜನದೀಶ್ ಆರ್. ಜಾಣೆ ನಿರ್ದೇಶನದ ಅಕ್ಕ ನಾಗಲಾಂಬಿಕೆ ನಾಟಕ ಪ್ರದರ್ಶನಗೊಂಡಿತು