IMG-20240629-WA0047

ಚರ್ಚೆಗೆ ಮಹತ್ವದ ವೇದಿಕೆಯಾದ ಜನಸ್ಪಂದನ ಕಾರ್ಯಕ್ರಮ

ಕರುನಾಡ ಬೆಳಗುಬ ಸುದ್ದಿ

ವಿಜಯನಗರ, 30- ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರ ಅಧ್ಯಕ್ಷತೆಯಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ಜೂನ್ 29ರಂದು ನಡೆದ ಜನಸ್ಪಂದನ ಕಾರ್ಯಕ್ರಮವು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದರೊಂದಿಗೆ ಸಾರ್ವಜನಿಕ ಅಹವಾಲುಗಳ ಚರ್ಚೆ ಮತ್ತು ಪರಿಹಾರಕ್ಕೆ ಮಹತ್ವದ ವೇದಿಕೆಯಾಯಿತು.

ಹಗರಿಬೊಮ್ಮನಹಳ್ಳಿಯ ತಾಲೂಕಾಡಳಿತದ ಸೌಧದ ಹೊರಾಂಗಣದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕಾಗಿ ವಿಶೇಷವಾದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಸಾರ್ವಜನಿಕರ ಮಾಹಿತಿಗಾಗಿ ಕೆಲವು ಇಲಾಖೆಗಳಿಂದ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಫಲಕಗಳನ್ನು ಅಳವಡಿಸಲಾಗಿತ್ತು.

ನಾನಾ ರೀತಿಯ ಸಮಸ್ಯೆಯನ್ನು ಹೊತ್ತು ಬರುವ ಸಾರ್ವಜನಿಕರಿಗೆ ಅರ್ಜಿ ಸಲ್ಲಿಕೆಗೆ ಅನುಕೂಲವಾಗುವಂತೆ ಇಲಾಖಾವಾರು ಟೇಬಲ್‌ಗಳನ್ನು ಹಾಕಲಾಗಿತ್ತು. ಆಯಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಸಾಲಾಗಿ ಕುಳಿತು ಸಾರ್ವಜನಿಕರ ಹೆಸರು ಮತ್ತು ಅವರ ಅರ್ಜಿಯ ವಿವರದ ಬಗ್ಗೆ ನೋಂದಾಯಿಸಿಕೊಂಡರು.

ಸೈಕಲ್ ಏರಿ ಸಂಚಾರ: ಜನಸ್ಪಂದನ ಕಾರ್ಯಕ್ರಮಕ್ಕಾಗಿ ಹಗರಿಬೊಮ್ಮನಹಳ್ಳಿಗೆ ತೆರಳಿದ್ದ ವೇಳೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಬೆಳಗ್ಗೆ ಸೈಕಲ್ ಏರಿ ನಗರ ಸಂಚಾರ ನಡೆಸಿದರು. ನಗರದ ವಿವಿಧೆಡೆ ಸಂಚರಿಸುವ ವೇಳೆಯಲ್ಲಿ ಸಾರ್ವಜನಿಕರೊಂದಿಗೆ ಆಪ್ತವಾಗಿ ಮಾತನಾಡಿ ಸ್ಪಂದನೆ ನೀಡಿದರು. ಜನರ ದೂರುಗಳ ಬಗ್ಗೆ ಯಾರು ಸಹ ಹಗುರವಾಗಿ ತೆಗೆದುಕೊಳ್ಳಬಾರದು. ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ನಿಯಮಿತವಾಗಿ ನಗರ ಸಂಚಾರ ನಡೆಸಿ ನಗರದೆಲ್ಲೆಡೆ ಶುಚಿತ್ವ ಕಾರ್ಯ ನಡೆಸಿ ಪಟ್ಟಣದ ಸೌಂದರ್ಯೀಕರಣದ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಶಾಸಕರ ಸಮ್ಮುಖದಲ್ಲಿ ಕಾರ್ಯಕ್ರಮ: ಶಾಸಕರಾದ ನೇಮಿರಾಜ್ ನಾಯಕ ಅವರ ಸಮ್ಮುಖದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಬೆಳಗ್ಗೆ ಚಾಲನೆ ಸಿಕ್ಕಿತು. ಸಾಲಾಗಿ ನಿಂತು ವೇದಿಕೆ ಏರಿ ಬಂದ ಸಾರ್ವಜನಿಕರ ಅಹವಾಲುಗಳನ್ನು ಜಿಲ್ಲಾಧಿಕಾರಿಗಳು ನಿರಂತರ 4 ಗಂಟೆಗು ಹೆಚ್ಚು ಸಮಯ ಸಾವಧಾನದಿಂದ ಆಲಿಸಿದರು. ವೇದಿಕೆಯ ಎದುರಿಗೆ ಆಸನರಾಗಿದ್ದ ಜಿಲ್ಲಾಮಟ್ಟದ ಹಾಗೂ ತಾಲೂಕುಮಟ್ಟದ ಅಧಿಕಾರಿಗಳನ್ನು ವೇದಿಕೆಗೆ ಕರೆದು ಕೆಲವು ಅರ್ಜಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವು ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು.

ಅರ್ಜಿಗಳ ಸಾರ: ನಮ್ಮ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಿಸಲು ಜಮೀನು ಮಂಜೂರು ಮಾಡಬೇಕು. ಜಮೀನಿಗೆ ಹೋಗಲು ಬಂಡಿ ದಾರಿ ನೀಡಬೇಕು. ಡಾ.ಅಂಬೇಡ್ಕರ್ ಭವನ, ಡಾ.ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ ಜಾಗ ನೀಡಬೇಕು. ಒತ್ತುವರಿಯಾದ ಜಮೀನನ್ನು ಬಿಡಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಬೇಕು, ಗ್ರಾಮಕ್ಕೆ ಸ್ಮಶಾನ ಭೂಮಿ ನೀಡಬೇಕು ಎನ್ನುವ ನಾನಾ ರೀತಿಯ ಅನೇಕ ಅರ್ಜಿಗಳು ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕಾರಗೊಂಡವು.

ಅರ್ಜಿಗಳ ವಿವರ: ಕಂದಾಯ ಇಲಾಖೆಗೆ ಅತಿ ಹೆಚ್ಚು 82, ಪುರಸಭೆಗೆ 50, ತಾಲೂಕು ಪಂಚಾಯಿತಿಗೆ 31, ಕೃಷಿ ಇಲಾಖೆಗೆ 7, ಜೆಸ್ಕಾಂ ಇಲಾಖೆಗೆ 6, ಸಾರಿಗೆ ಇಲಾಖೆಗೆ 5, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆಗೆ ತಲಾ 3, ಆರೋಗ್ಯ ಇಲಾಖೆಗೆ 4, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಗೆ 2 ಅರ್ಜಿಗಳು ಸೇರಿ ಒಟ್ಟು 197 ಅರ್ಜಿಗಳು ಸ್ವೀಕೃತಿಯಾದವು. ಈ ಪೈಕಿ ಸ್ಥಳದಲ್ಲೇ 24 ಅರ್ಜಿಗಳನ್ನು ವಿಲೇ ಮಾಡಲಾಯಿತು. ಇನ್ನುಳಿದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ವರ್ಗಾಯಿಸಲಾಯಿತು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ., ಸಹಾಯಕ ಆಯುಕ್ತರಾದ ಮಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಮ್ ಪಾಶಾ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರ ಚಂದ್ರಶೇಖರ ಗಾಳಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರಪ್ಪ, ಸಿಪಿಐ ವಿಕಾಸ ಪಿ.ಎಲ್., ಸಿಡಿಪಿಓ ಸಿಂಧೂ ಯಲಿಗಾರ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!