
ಜಿಲ್ಲಾಡಳಿತದಿಂದ ಬಸವೇಶ್ವರ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 10- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬಸವೇಶ್ವರ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಲೋಕಸಭೆ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿ ಇರುವುದರಿಂದ ಸರಳವಾಗಿ ಆಚರಿಸಲಾಯಿತು.
ನಗರದ ಹೆಚ್.ಆರ್.ಗವಿಯಪ್ಪ ವೃತ್ತ(ಮೋತಿ ವೃತ್ತ)ದ ಬಳಿಯಿರುವ ಬಸವೇಶ್ವರರ ಪ್ರತಿಮೆಗೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿಯ ಶುಭಾಶಯ ಕೋರಿದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ : ನಗರದ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವುದರ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.