
ಜೀತ ಪದ್ಧತಿ ನಿರ್ಮೂಲನೆ ಅಗತ್ಯ: ನ್ಯಾ.ರಾಜೇಶ್ ಎನ್.ಹೊಸಮನಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,9- ಜೀತಕ್ಕಾಗಿ ವ್ಯಕ್ತಿ ಹಾಗೂ ಮಕ್ಕಳನ್ನು ದುಡಿಸಿಕೊಳ್ಳುವುದು ಅಮಾನವೀಯ ಮತ್ತು ಕ್ರಿಮಿನಲ್ ಅಪರಾಧವಾಗಿದ್ದು, ಜೀತ ಪದ್ಧತಿ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ನಿರ್ಮೂಲನೆ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಕಾರ್ಮಿಕ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಪ್ರತಿಜ್ಞೆ ವಿಧಿ ಸ್ವೀಕರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ಸಮಸ್ಯೆಯಿಂದಾಗಿ ಹಾಗೂ ಕನಿಷ್ಟ ಕೂಲಿ ಇಲ್ಲದೆ ಜೀತದಾಳುಗಳಾಗಿ ಇನ್ನೊಬ್ಬರ ಕೈ ಕೆಳಗೆ ಜೀತ ಮಾಡುತ್ತಾರೆ. ಈ ಪದ್ಧತಿ ಹಿಂದಿನ ಕಾಲದಲ್ಲಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. 1976 ರಲ್ಲಿ ಜೀತ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ಜೀತ ಪದ್ಧತಿಯನ್ನು ಕೊನೆಗಾಣಿಸುತ್ತ ಬರಲಾಯಿತು ಎಂದರು.
ಜೀತದಾಳುಗಳನ್ನು ಗುರುತಿಸಿ ಅವರಿಗೆ ಪುನರ್‍ವಸತಿ ಹಾಗೂ ಸರ್ಕಾರದ ಇತರ ಸೌಲಭ್ಯ ಒದಗಿಸುವ ಮೂಲಕ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಅಧಿಕಾರಿಗಳ ಮತ್ತು ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈಗಲೂ ಜೀತಕಾರ್ಮಿಕ ಪದ್ಧತಿ ಪ್ರಕರಣಗಳು ಕಂಡುಬರುತ್ತಿವೆ, ಸಾರ್ವಜನಿಕರಲ್ಲಿ ಈ ಪದ್ಧತಿ ಕುರಿತು ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕಿದೆ. ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ಅಧ್ಯಕ್ಷತೆ ಮಾತನಾಡಿ, ಜೀತ ಪದ್ಧತಿಯು ಸಮಾಜದಲ್ಲಿ ಇರುವಂತಹ ಅನಿಷ್ಠ ಪದ್ಧತಿಯಾಗಿದೆ. ನಾವೆಲ್ಲರೂ ಸಮಾನತೆ ಮತ್ತು ಸ್ವಾತಂತ್ರ್ಯತೆಯಿಂದ ಬದುಕಲು ಸಂವಿಧಾನವು ಹಕ್ಕುಗಳನ್ನು ನೀಡಿದೆ. ಇನ್ನೊಬ್ಬರನ್ನು ಶೋಷಿಸಿ ಬದುಕಲು ಅವಕಾಶವಿಲ್ಲ ಎಂದು ತಿಳಿಸಿದರು.
ಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅನೇಕ ಸಾಮಾಜಿಕ ಅನಿಷ್ಠಗಳಂತೆ ಜೀತ ಪದ್ಧತಿಯೂ ಅನಿಷ್ಠ ಪದ್ಧತಿಯಾಗಿದೆ. ಇದನ್ನು ಹೋಗಲಾಡಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯ ಪಟ್ಟರು.
ಜನ ಜಾಗೃತಿ ಜಾಥಾ : ಜೀತ ಪದ್ಧತಿ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನಿ ಮತ್ತು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ಜೊತೆಗೂಡಿ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಜಾಥಾವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಮರಳಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಿತು. ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಜೀತ ಪದ್ಧತಿಯ ಕುರಿತು ಘೋಷವಾಕ್ಯಗಳನ್ನು ಕೂಗಿದ್ದು, ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರಾದ ಎಂ.ರವಿದಾಸ್, ಬಾಲಾ ಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶ್ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು, ಶಾಲಾ ಮಕ್ಕಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.