
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಗೀತಾ ಜಯಂತಿ ಮಹೋತ್ಸವ
ಜೀವನದ ಸರ್ವ ಸಮಸ್ಯೆಗಳಿಗೆ ಸಂಜೀವಿನಿ ಭಗವದ್ಗೀತೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೬- ಮನುಷ್ಯನ ಜೀವನದ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಆಧ್ಯಾತ್ಮ ಶಕ್ತಿಯಿಂದ. ಅಂತಹ ಅಧ್ಯಾತ್ಮ ಜ್ಞಾನ ಹೊಂದಿರುವ ಭಗವದ್ಗೀತೆ ಸರ್ವಶಾಸ್ತ್ರ ಶಿರೋಮಣಿಯಾಗಿದೆ, ವರ್ತಮಾನ ಪ್ರಕ್ಷುಬ್ದ ಸಮಯದಲ್ಲಿ ಜೀವನದ ಸರ್ವ ಸಮಸ್ಯೆಗಳಿಗೆ ಸಂಜೀವಿನಿ ಭಗವದ್ಗೀತೆ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಹೇಳಿದರು.
ಅವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಏರ್ಪಡಿಸಿದ ಗೀತಾ ಜಯಂತಿ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. ಗೀತಾ ಜ್ಞಾನವು ಮೌಲ್ಯಯುಕ್ತ, ಕ್ರೋಧ ಮುಕ್ತ ಜೀವನ, ಕರ್ಮಯೋಗಿ ಜೀವನ, ಕಾಯ ವಾಚಾ ಮನಸ ಭಗವಂತನಿಗೆ ಸಮರ್ಪಿತ ಜೀವನ, ಸಮಸ್ಯೆ ಮುಕ್ತ ಜೀವನ ನಡೆಸಲು ಸತ್ ಪ್ರೇರಣೆಯನ್ನು ಹಾಗೂ ಆತ್ಮವಿಶ್ವಾಸವನ್ನು ನೀಡುತ್ತದೆ ಅಲೆದಾಡುವ ಭಕ್ತನ ಮನಸ್ಸನ್ನು ಏಕೇಶ್ವರನಲ್ಲಿ ಏಕಾಗ್ರಗೊಳಿಸುವ ಶಕ್ತಿಯನ್ನು ತುಂಬುತ್ತದೆ ಶ್ರೀಮದ್ ಭಗವದ್ಗೀತಾ. ಸಂತುಷ್ಟವಾಗಿರುವುದೇ ನಮ್ಮ ಜೀವನದ ಸಫಲತೆ ಯಾವುದೇ ವಸ್ತು ಮತ್ತು ವ್ಯಕ್ತಿಗಳಿಂದ ಅಪೇಕ್ಷೆ ಮತ್ತು ನಿರೀಕ್ಷೆಯಿಲ್ಲದೆ ಸ್ವಶಕ್ತಿಯಿಂದ ಆತ್ಮ ಶಕ್ತಿಯಿಂದ ಜೀವನದಲ್ಲಿ ಸಫಲರಾಗಬೇಕುಈ ರೀತಿ ಜೀವನ ನಡೆಸಲು ಗೀತೆ ಪ್ರೇರಣೆ ನೀಡುತ್ತದೆ ಎಂದು ರಾಜ ಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಗೀತಾ ಶ್ಲೋಕ ಹೇಳಿ ವಿವರಿಸಿ ಮನದಟ್ಟು ಮಾಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಂಕರಾಚಾರ್ಯ ಮಠದ ಶ್ರೀ ಶಿವರಾಮಕೃಷ್ಣಾನಂದ ಭಾರತಿ ಸ್ವಾಮಿಗಳು ಮಾತನಾಡುತ್ತಾ ಇಂದಿನ ಮಕ್ಕಳಲ್ಲಿ ಯುವಕರಲ್ಲಿ ಉತ್ತಮ ಸಂಸ್ಕಾರ ತುಂಬಲು ಇಂತಹ ಅಧ್ಯಾತ್ಮ ವಾತಾವರಣ ಅತ್ಯಂತ ಅವಶ್ಯಕ ಇದೆ ಎಂದರು. ರಘುಪ್ರೇಮಾಚಾರ್ಯರು ಸಂಸ್ಕೃತ ಪಂಡಿತರು ಮಾತನಾಡುತ್ತಾ ಭಗವದ್ಗೀತೆ ನೀಡುವ ಈ ಜ್ಞಾನ ಸಂಜೀವಿನಿ ವಿಶ್ವದ ಸರ್ವ ಮಾನವರಿಗೆ ಜೀವನ ದರ್ಶನವನ್ನು ಮಾಡಿಸುತ್ತದೆ ಎಂದರು.
ಪ್ರಮೋದಚಾರ್ಯರು ಮಾತನಾಡುತ್ತಾ ಗೀತೆಯು ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡುತ್ತದೆ ಎಂದರು. ವೇದಿಕೆಯ ಮೇಲೆ ಪವನಾಚಾರ್ಯರು, ಗೋವಿಂದಾಚಾರ್ಯರು, ಹನುಮಂತರಾವ್ ದೇಶಪಾಂಡೆ, ಗುರುರಾಜ್ ಜೋಶಿ, ಮಧುರಕರಣಮ್, ಮಾಲಿನಿ ಶಾಸ್ತ್ರಿ ಉಪಸ್ಥಿತರಿದ್ದರು.
ಬ್ರಹ್ಮಕುಮಾರಿ ಯೋಗಿನಿ ಅಕ್ಕ ಕಾರ್ಯಕ್ರಮ ನಿರೂಪಿಸಿದರು.