20ca20d8-a0ae-4ba5-a9b5-7440de811352

ಟ್ರಾಫಿಕ್ ವಾರ್ಡನ್’ ವ್ಯವಸ್ಥೆ ಶೀಘ್ರದಲ್ಲೇ ಪ್ರಾರಂಭ ; ಎಸ್ ಪಿ

ಕರುನಾಡ  ಬೆಳಗು ಸುದ್ದಿ

ಬಳ್ಳಾರಿ, ಡಿ. 2೭- ಬಳ್ಳಾರಿ ನಗರದಲ್ಲಿಯ ರಸ್ತೆ ಸಂಚಾರದ ದಟ್ಟಣೆಯನ್ನು ಸುಧಾರಿಸಿ ಸುಗಮ ರಸ್ತೆ ಸಂಚಾರಕ್ಕೆ ಸಹಕಾರ ನೀಡಲು ಸಾರ್ವಜನಿಕರ ಪಾಲ್ಗೊಳ್ಳುವಿಕೆಯ `ಟ್ರಾಫಿಕ್ ವಾರ್ಡನ್’ ವ್ಯವಸ್ಥೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗಾಗಿ ನಡೆದ `ರಸ್ತೆ ಸುಗಮ ಸಂಚಾರ’ದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಸಕ್ತ ಸಾರ್ವಜನಿಕರು, ನಿವೃತ್ತರು `ಟ್ರಾಫಿಕ್ ವಾರ್ಡನ್’ಗಳಾಗಿ ನಿತ್ಯ 2 ತಾಸುಗಳು ಮಾತ್ರ ಕೆಲಸ ಮಾಡಲು ಅವಕಾಶವಿದ್ದು, ಆಸಕ್ತರಿಗೆ ಅಗತ್ಯ ತರಬೇತಿ ಮತ್ತು ಬೆಂಬಲವನ್ನು ಪೊಲೀಸ್ ಇಲಾಖೆ ನೀಡಲಿದೆ. ಮುಖ್ಯ ರಸ್ತೆಗಳಲ್ಲಿಯ ವ್ಯಾಪಾರಿಗಳು/ಉದ್ಯಮಿಗಳು ಒಟ್ಟಾಗಿ ಸೆಕ್ಯುರಿಟಿಗಾರ್ಡ್ಗಳನ್ನು ನೇಮಕ ಮಾಡಿಕೊಂಡು ಸಂಚಾರ ಮತ್ತು ವಾಹನಗಳ ಪಾರ್ಕಿಂಗ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಕ್ತ ಅವಕಾಶವಿದ್ದು, ಇಲಾಖೆ ಬೆಂಬಲ ನೀಡಲಿದೆ ಎಂದರು.

ಆಟೋ ಚಾಲಕರು ಪ್ರಯಾಣಿಕರು ಮತ್ತು ಸಾರ್ವಜನಿಕರ ಜೊತೆ ಉತ್ತಮವಾಗಿ ಮಾತನಾಡಲಿಕ್ಕಾಗಿ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ. ಆಟೋ ಚಾಲಕರಿಗಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ವಾಹನಗಳ `ಯು’ಟರ್ನ್ ವ್ಯವಸ್ಥೆ, ಬೀದಿ ಬದಿ ವ್ಯಾಪಾರಿಗಳು ಮತ್ತು ಪುಟ್ಪಾತ್ ಆಕ್ರಮಣ, ಪಾದಾಚಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಎಲ್ಲವನ್ನೂ ಹಂತ ಹಂತವಾಗಿ ಪರಿಹರಿಸಲಾಗುತ್ತದೆ. ಸಾರ್ವಜನಿಕರ ಸಹಕಾರ – ಬೆಂಬಲ ಸಿಕ್ಕಾಗ ತ್ವರಿತವಾಗಿ ಸಂಚಾರ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಸಾರ್ವಜನಿಕರು 112 ಸಂಖ್ಯೆಗೆ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಹಾಜರಾಗುತ್ತದೆ. ಬದಲಾವಣೆ ಸಾರ್ವಜನಿಕರಿಂದಲೇ ಪ್ರಾರಂಭವಾಗಬೇಕು ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಬಳ್ಳಾರಿ ನಗರಾದ್ಯಂತ ಇರುವ ಸಂಚಾರಿ ದಟ್ಟಣೆ, ವಾಹನಗಳ ಹೆಚ್ಚಳ, ಇಕ್ಕಟ್ಟಾಗುತ್ತಿರುವ ರಸ್ತೆಗಳು, ರಸ್ತೆಗಳಲ್ಲಿಯ ಗುಂಡಿಗಳು, ಆಟೋ ನಿಲ್ದಾಣಗಳ ಪುರ್ರಚನೆ, ಬಡಾವಣೆಗಳಲ್ಲಿ ನಡೆಯುತ್ತಿರುವ ಕುಡಿತ, ಅನಧಿಕೃತ ಮಟನ್-ಚಿಕನ್ ಅಂಗಡಿಗಳ ಮೇಲೆ ನಿಯಂತ್ರಣ, ಬೀದಿ ನಾಯಿಗಳ ನಿಯಂತ್ರಣ ಇನ್ನಿತರೆ ವಿಷಯಗಳ ಕುರಿತು ಸಮಗ್ರವಾಗಿ ವಿಷಯವನ್ನು ಮಂಡನೆ ಮಾಡಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು, ಸ್ವಾಗತಿಸಿ, ಎಪಿಎಂಸಿ ಆವರಣದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ ಕಳ್ಳತನಗಳನ್ನು – ಹಲ್ಲೆಗಳನ್ನು ನಿಯಂತ್ರಿಸಬೇಕು. ಅಲ್ಲದೇ, ವ್ಯಾಪಾರಿಗಳಿಗೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ವಿ. ರವಿಕುಮಾರ್ ಅವರು, ಆಟೋ ಚಾಲಕರಲ್ಲಿ ಶಿಸ್ತು ಮತ್ತು ಸಂಯವನ್ನು ಆಚರಣೆಗೆ ತರಬೇಕಿದೆ. ವಾಹನಗಳ ತಪಾಸಣೆಯ ನೆಪದಲ್ಲಿ ವಾಹನಗಳನ್ನು ರಸ್ತೆಗಳಲ್ಲಿ ಹೆಚ್ಚು ಸಮಯ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು, ಹೊರ ರಾಜ್ಯಗಳು – ಬೇರೆ ಜಿಲ್ಲೆಗಳ ವಾಹನಗಳ ನೋಂದಣಿ ಇದ್ದಲ್ಲಿ ಕುಟುಂಬದವರು ವಾಹನದಲ್ಲಿದ್ದರೂ ತಪಾಸಣೆಯ ನೆಪದಲ್ಲಿ ನೀಡುತ್ತಿರುವ ಕಿರುಕುಳಗಳ ಬಗ್ಗೆ ವಿವರಿಸಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವಾಧ್ಯಕ್ಷ ಸಿ. ಶ್ರೀನಿವಾಸರಾವ್ ಅವರು, ಸುಧಾಕ್ರಾಸ್ ಸಿಗ್ನಲ್ಲೈಟ್ಗಳ ಅವಧಿ, ವಾಹನಗಳ ದಟ್ಟಣೆ, ವಿಮ್ಸ್ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಇರುವ ಕಾರಣ ಸಂಚಾರ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು ಎಂದರು ಕೋರಿದರು.

ಜೆ. ರಾಜೇಶ್ ಅವರು, ರೈಲ್ವೆ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ, ತೃತೀಯಲಿಂಗಿಗಳ ತೊಂದರೆ ಕುರಿತು, ಬಿ. ಸತ್ಯಬಾಬು ಅವರು, ಕೆಐಎಡಿಬಿಯ 2ನೇ ಹಂತದಲ್ಲಿ ಭದ್ರತೆಯ ಜೊತೆ ರಸ್ತೆ, ಕುಡಿಯುವ ನೀರು, ಬೀದಿದೀಪಗಳನ್ನು ಅಳವಡಿಸಲು, ಸೊಂತಗಿರಿಧರ್ ಅವರು, ಬೆಂಗಳೂರು ರಸ್ತೆಯ ಬಲಭಾಗದಲ್ಲಿ ಅಡ್ಡ ರಸ್ತೆಗಳಿದ್ದು ಈ ರಸ್ತೆಗಳಲ್ಲಿ ಏಕಮುಖ ಸಂಚಾರ, ರಾಘವೇಂದ್ರ ಅವರು, ಕೊಲಾಚಲಂ ಕಾಂಪೌAಡ್ನಲ್ಲಿ ಆಂಬುಲೆನ್ಸ್ಗಳ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಟಿ. ಶ್ರೀನಿವಾಸರಾವ್ ಅವರು, ಕಾರ್ಪಾರ್ಕಿಂಗ್ ವ್ಯವಸ್ಥೆ ಕುರಿತು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಎಪಿಎಂಸಿಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲುತ್ತಿಲ್ಲ ಎಂದು ಸಮಸ್ಯೆಗಳನ್ನು ವಿವರಿಸಿದರು.

ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಖಲೀಲ್ ಸಾಬ್ ಅವರು, ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿಯ ಗುಂಡಿಗಳನ್ನು ಮುಚ್ಚಲು ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಕೆಐಎಡಿಬಿ ಪ್ರದೇಶಕ್ಕೆ ಕುಡಿಯುವ ನೀರು, ರಸ್ತೆ, ಬೀದಿ ದೀಪಗಳನ್ನು ಅಳವಡಿಸುವ ಕೆಲಸ ಹಂತ ಹಂತವಾಗಿ ಕೈಗೊಳ್ಳಲಾಗುತ್ತದೆ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಿಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.

ಸಂಚಾರ ಪೊಲೀಸ್ ಠಾಣೆಯ ಟ್ರಾಫಿಕ್ ಸಿಪಿಐ ಅಯ್ಯನಗೌಡ ಪಾಟೀಲ್ ಅವರು, ಸಣ್ಣಮಾರುಕಟೆಯ ನೂತನ ಕಟ್ಟಡ ನಿರ್ಮಾಣ ಆರಂಭವಾಗುವವರೆಗೂ ಕಾರ್ಪಾರ್ಕಿಂಗ್ ವ್ಯವಸ್ಥೆ, ದೊಡ್ಡ ಮಾರುಕಟ್ಟೆಯ ನೆಲಮಳಿಗೆಯಲ್ಲಿ ಕಾರ್ಪಾರ್ಕಿಂಗ್ ವ್ಯವಸ್ಥೆ, ವ್ಯಾಪಾರಿಗಳು ಬೆಳಗ್ಗೆ 9 ಗಂಟೆಯ ಒಳಗಾಗಿ ರಾತ್ರಿ 9 ಗಂಟೆಯ ನಂತರ ಲೋಡಿಂಗ್ ಮತ್ತು ಅನ್ಲೋಡಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!