
ಕೊಲೆ ಪ್ರಕರಣ: ಆರೋಪಿ ಬಂಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 30 – ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದಲ್ಲಿ ಹತ್ಯೆಗೀಡಾದ ಡಂಬ್ರಳ್ಳಿ ಗ್ರಾಮದ ಚಂದ್ರಗೌಡ ನಂದನಗೌಡ್ರ (30) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಒಂದನೇ ಆರೋಪಿ ಆಂಧ್ರಪ್ರದೇಶ ಮೂಲದ ಜಡ್ಡಾ ನಾರಾಯಣಸ್ವಾಮಿ ಜಡ್ಡಾ ಚಿನ್ನ ನಾಸರಯ್ಯ (30)ನನ್ನು ಬಂಧಿಸಿಸಲು ಪೋಲಿಸ್ ರು ಯಶಸ್ವಿಯಾಗಿದ್ದಾರೆ.
ಕಳೆದ ಸೆಪ್ಟೆಂಬರ್ 29ರಂದು ಚಂದ್ರಗೌಡ ನಂದನಗೌಡ್ರ (30) ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಕೊಲೆಗೈದು ಕೈಗೆ ಕಲ್ಲನ್ನು ಕಟ್ಟಿ ಬಾವಿಯೊಂದರಲ್ಲಿ ಹಾಕಲಾಗಿತ್ತು. ಈ ವ್ಯಕ್ತಿ ಕಾಣೆಯಾದ ಪ್ರಕರಣ ಅಳವಂಡಿ ಠಾಣೆಯಲ್ಲಿ ದಾಖಲಾಗಿತ್ತು. ನಂತರ ಮೃತದೇಹ ಪತ್ತೆ ಕುರಿತು ಕುಕನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಆರೋಪಿ ಪತ್ತೆಗಾಗಿ ಎಸ್ಪಿ ಯಶೋಧಾ ವಂಟಗೋಡಿ ಹಾಗೂ ಡಿವೈಎಸ್ಪಿ ಶರಣಪ್ಪ ಸುಭೇದಾರ್ ಮಾರ್ಗದರ್ಶನದಲ್ಲಿ ಯಲಬುರ್ಗಾ ಸಿಪಿಐ ಮೌನೇಶ್ವರ ಮಾಲಿಪಾಟೀಲ ತಂಡವು ಅ.11ರಂದು ಪ್ರಕರಣದ 2ನೇ ಆರೋಪಿಯಾದ ಆಂಧ್ರಪ್ರದೇಶ ಮೂಲದ ಸುದೀರಕುಮಾರ, ಶ್ರೀಹರಿ ಮಾನುಕೊಂಡ (34) ನನ್ನು ಪತ್ತೆ ಮಾಡಿ ವಿಚಾರಿಸಲಾಗಿದ್ದು,
ಒಂದನೇ ಆರೋಪಿ ಹಾಗೂ ಕೊಲೆಯಾದ ಚಂದ್ರಗೌಡ ನಡವೆ ಹಣಕಾಸಿನ ವಿಷಯವಾಗಿ ವೈಮನಸ್ಸು ಬಂದಿದ್ದರಿಂದ ಈತನೊಂದಿಗೆ ಸೇರಿ ಚಂದ್ರಗೌಡನ ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ ಕೃತ್ಯಕ್ಕೆ ಬಳಕೆ ಮಾಡಿದ ಕಾರ್, ಹಾಗೂ ಮೃತನ ಮೋಟಾರ ಸೈಕಲ್, ಮೊಬೈಲ ಫೋನ್, ಚಪ್ಪಲಿ, ಹಾಗೂ ವಾಚ್ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಪ್ರಕರಣವನ್ನು ಕೊಪ್ಪಳ ಗ್ರಾಮೀಣ ಸಿಪಿಐಗೆ ವರ್ಗಾಯಿಸಲಾಗಿದೆ.
ಈ ಪ್ರಕರಣದಲ್ಲಿ ಒಂದನೇ ಆರೋಪಿ ಆಂಧ್ರಪ್ರದೇಶ ಮೂಲದ ಜಡ್ಡಾ ನಾರಾಯಣಸ್ವಾಮಿ ಜಡ್ಡಾ ಚಿನ್ನ ನಾಸರಯ್ಯ (30)ನನ್ನು ಕೊಪ್ಪಳ ಗ್ರಾಮೀಣ ಸಿಪಿಐ ಮಹಾಂತೇಶ ಸಜ್ಜನ್ ತಂಡವು ಸೋಮವಾರ ವಶಕ್ಕೆ ಪಡೆದು ಬಂಧಿಸಿದ್ದು, ಆರೋಪಿತನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.