
ತಂಗಡಗಿಯವರ ವಿರುದ್ಧ ಅನಗತ್ಯ ವಿವಾದ: ಕೃಷ್ಣ ಇಟ್ಟಂಗಿ ಆರೋಪ
ಚುನಾವಣಾ ಪ್ರಚಾರಕ್ಕೆ ಅಭಿವೃದ್ಧಿ ವಿಷಯಗಳೇ ಬಿಜೆಪಿಯಲ್ಲಿಲ್ಲ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 27- ಮೋದಿ ಮೋದಿ ಎನ್ನುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎನ್ನುವ ತಂಗಡಗಿಯವರ ಹೇಳಿಕೆಯನ್ನು ಬಿಜೆಪಿ ನಾಯಕರು ಅನಗತ್ಯ ವಿವಾದವನ್ನಾಗಿ ಸೃಷ್ಟಿಸುತ್ತಿದ್ದಾರೆ. ಯುವಜನತೆಗಾಗಿ ಎರಡು ಕೋಟಿ ಉದ್ಯೋಗ ಸೃಜನೆ ಮಾಡುವುದಾಗಿ ಮಾತು ತಪ್ಪಿರುವ ಮೋದಿ ಜಪ ಮಾಡುವವರನ್ನು ಎಚ್ಚರಿಸಿ ಎಂಬರ್ಥದ ಹೇಳಿಕೆಯನ್ನು ಬಿಜೆಪಿಯವರು ಮನಸೋ ಇಚ್ಛೆ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಾ ಇಟ್ಟಂಗಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಅಭಿವೃದ್ಧಿ ವಿಷಯಗಳೇ ಇಲ್ಲ. ಕಾಂಗ್ರೆಸ್ ಅಭಿವೃದ್ಧಿ ಪರವಾಗಿದ್ದು, ಅದನ್ನು ಸಹಿಸಲಾಗದ ಬಿಜೆಪಿ ಇಂಥ ಹೇಳಿಕೆಗಳನ್ನು ಅನಗತ್ಯವಾಗಿ ವಿವಾದ ಮಾಡಿ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುವುದೇ ಬಿಜೆಪಿ ಕೆಲಸ ಎಂದು ಅವರು ಆರೋಪಿಸಿದರು.
ಕೊಪ್ಪಳದಲ್ಲಿ ಈಚೆಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯೆಯೊಬ್ಬರು ಅವರ ಪಕ್ಷದ ಕಾರ್ಯಕರ್ತರೊಬ್ಬರಿಗೆ ಬೂಟಿನಿಂದ ಹೊಡೆಯುತ್ತೇನೆ ಎಂದಿದ್ದರು. ತಂಗಡಗಿಯವರು ಆ ರೀತಿಯ ಪದಗಳನ್ನು ಬಳಸಿಲ್ಲವಲ್ಲ. ಆಗ ಖಂಡಿಸದ ಬಿಜೆಪಿ ಈಗ ಎದ್ದು ಕೂತಿರುವುದನ್ನು ಗಮನಿಸಿದರೆ ಗೊತ್ತಾಗುತ್ತದೆ, ಈ ವಿಷಯವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಕಾಂಗ್ರೆಸ್ ಹತ್ತಿಕ್ಕುವ ಯತ್ನ ಎಂಬುದು ಎಂದು ಅವರು ಲೇವಡಿ ಮಾಡಿದರು.
ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ವ್ಯಕ್ತಿಯ ಹುಟ್ಟಿನ ಬಗ್ಗೆ ಮಾತನಾಡುವ ಬಿಜೆಪಿಯ ಸಿ.ಟಿ.ರವಿ ತಾವು ಹುಟ್ಟಿದ ಬಗೆಯನ್ನು ಅರಿತುಕೊಳ್ಳಲಿ. ರವಿಯವರ ಸವಾಲು ಸ್ವೀಕರಿಸಿರುವ ತಂಗಡಗಿಯವರು ಅವರ ತಾಯಿಯನ್ನು ಕರೆದುಕೊಂಡು ಬರಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಸಿ.ಟಿ.ರವಿ ಇದಕ್ಕೆ ಸಿದ್ಧರಾಗಿದ್ದಾರಾ? ಎಂದು ಸವಾಲು ಎಸೆದರು.
ದೇಶದ ಪ್ರಧಾನ ಸೇವಕ ಮಾತಿಗೆ ತಪ್ಪಿದ್ದನ್ನು ಪ್ರಶ್ನಿಸಿ, ಯುವಕರಿಗೆ ಗ್ರಾಮೀಣ ಭಾಷೆಯಲ್ಲಿ ಬುದ್ಧಿಮಾತು ಹೇಳಿದ್ದೇ ತಪ್ಪಾ? ಬಿಜೆಪಿ ನಾಯಕರು ಮಾಡುವುದೆಲ್ಲವೂ ಸರಿ ಇದೆಯಾ? ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಾಟನ್ ಪಾಷಾ, ಕೃಷ್ಣಾರೆಡ್ಡಿ ಗಲಭಿ ಮತ್ತು ಅಕ್ಬರ್ ಪಾಷಾ ಪಲ್ಟನ್ ಇದ್ದರು.