
ತುಸು ಬದುಕಬೇಕು ನಮಗಾಗಿ ನಾವು : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ತಂದೆ ತಾಯಂದಿರ ಸೇವೆ ಮಾಡಬೇಕು, ಗುರು ಹಿರಿಯರನ್ನು ಗೌರವಿಸಬೇಕು, ಒಡಹುಟ್ಟಿದವರನ್ನು ಮತ್ತು ಸ್ನೇಹಿತರನ್ನು ಪ್ರೀತಿಸಬೇಕು, ಸಂಗಾತಿಯನ್ನು ಪ್ರೇಮಿಸಬೇಕು ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು ಒಬ್ಬ ಒಳ್ಳೆಯ ನಾಗರಿಕನಾಗಿ ಬದುಕಬೇಕು….. ಹೀಗೆ ನಮಗೆ ನಾವೇ ನೂರೆಂಟು ಯೋಜನೆಗಳನ್ನು ಹಾಕಿಕೊಂಡು ಬದುಕುವ ನಾವು ನಮ್ಮ ವೈಯುಕ್ತಿಕ ಬೆಳವಣಿಗೆಗಾಗಿ, ಸ್ವಯಂ ಪ್ರೀತಿಗಾಗಿ ಏನನ್ನು ಮಾಡುತ್ತಿದ್ದೇವೆ ಎಂದು ಕೇಳಿದರೆ ಪ್ರತಿಯೊಬ್ಬರು ಆಶ್ಚರ್ಯದಿಂದ ಕೇಳಬಹುದು ಮೇಲಿನ ಎಲ್ಲ ಕೆಲಸಗಳನ್ನು ಮಾಡಿದರೆ ಸಾಕಲ್ಲವೆ ಎಂದು?!
ಊಹೂಂ!ಖಂಡಿತ ಸಾಲದು!!
ನಮಗಿರುವುದು ಒಂದೇ ಬದುಕು…. ಎಲ್ಲರಿಗೂ ಎಲ್ಲವನ್ನೂ ಮಾಡುತ್ತ ಬದುಕಿನ ಕೊನೆಯ ಗಳಿಗೆಯಲ್ಲಿ ಅಯ್ಯೋ ನನಗಾಗಿ ನಾನೇನು ಮಾಡಿಲ್ಲ ಎಂಬ ಅಪರಾಧ ಪ್ರಜ್ಞೆಯಿಂದ ಬಳಲುವುದು ನಮಗೆ ನಾವು ಮಾಡಿಕೊಳ್ಳುವ ಅತಿ ದೊಡ್ಡ ಅಪಚಾರ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಜೀವನಗಳಿರುತ್ತವೆ ಒಂದು ಖಾಸಗಿ ಮತ್ತು ಮತ್ತೊಂದು ಸಾಮಾಜಿಕ. ನಮ್ಮ ಸಾಮಾಜಿಕ ಜೀವನವನ್ನು ಅನುಭವಿಸುವ ನಿಟ್ಟಿನಲ್ಲಿ ನಮ್ಮ ಖಾಸಗಿತನ ಕಳೆದೇಹೋಗುತ್ತದೆ. ಬದುಕಿನ ಕೊನೆಯ ಗಳಿಗೆಯಲ್ಲಿ ಪಶ್ಚಾತಾಪ ಪಡುವುದಕ್ಕಿಂತ ಅನುಭವಿಸುವ ಸಮಯ ಬಂದಾಗ ನಮ್ಮ ನಮ್ಮ ಕರ್ತವ್ಯಗಳ ಜೊತೆಗೆ ನಮ್ಮ ವೈಯುಕ್ತಿಕ ಹಕ್ಕುಗಳನ್ನು ಕೂಡ ನಾವು ಖುದ್ದಾಗಿ ಈಡೇರಿಸಿಕೊಳ್ಳಬೇಕು. ಅದುವೇ ಜೀವನದ ಸರಿಯಾದ ಹೂಡಿಕೆ.
ಈ ನಿಟ್ಟಿನಲ್ಲಿ ಕೆಲವು ಸಲಹೆಗಳು :
1.. ಬೇಕು ಮತ್ತು ಅವಶ್ಯಕತೆಗಳ ನಡುವಿನ ವ್ಯತ್ಯಾಸವನ್ನು ಅರಿತು ನಮ್ಮ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಬೇಕು.
2. ನಮಗಾಗಿ ನಾವು ಎದ್ದು ನಿಲ್ಲಲೇಬೇಕು. ಎಲ್ಲರಿಗೂ ಮಾಡುವ ನಾವುಗಳು ನಮಗಾಗಿ ಮಾಡಿಕೊಳ್ಳುವಾಗ ತುಸು ಜಿಗುಟುತನವನ್ನು ತೋರುತ್ತೇವೆ…. ಅದು ಕೂಡದು.
3. ನಮ್ಮ ವೈಯುಕ್ತಿಕ ಬೆಳವಣಿಗೆಗಾಗಿ ನಾವು ಗಮನಹರಿಸಲೇಬೇಕು,ವಿದ್ಯಾರ್ಥಿಯಾಗಿದ್ದಾಗ ಓದಿನೆಡೆ,ಆಟೋಟಗಳೆಡೆ, ಉನ್ನತ ಗುರಿಯಡೆಗೆ ಒಳ್ಳೆಯ ಉದ್ಯೋಗ ಮತ್ತು ಜೀವನ ನಮ್ಮ ಆಯ್ಕೆ ಮತ್ತು ಆದ್ಯತೆಯಾಗಿರಬೇಕು.
4 ನಮ್ಮ ವೈಯಕ್ತಿಕ ನೋವುಗಳಿಗೆ ನಾವೇ ದನಿಯಾಗಬೇಕು…. ನಮ್ಮ ನೋವಿಗೆ ನಾವೇ ಮದ್ದಾಗಬೇಕು. ನಮಗೆ ನಾವೇ ಸ್ವಲ್ಪ ಸಮಯ ಕೊಟ್ಟುಕೊಂಡು ನಮ್ಮ ಮನಸ್ಸಿನ ಭಾವಗಳನ್ನು ಅರಿತು ಅದರಂತೆ ನಡೆದುಕೊಳ್ಳಬೇಕು. ಬೇರೆಯವರನ್ನು ಮೆಚ್ಚಿಸಲು ಅದೆಷ್ಟೇ ಕೆಲಸ ಮಾಡಿದರು ಆತ್ಮ ತೃಪ್ತಿ ಸಿಗುವುದಿಲ್ಲ. ನಮ್ಮನ್ನು ನಾವು ಅರಿತುಕೊಂಡು ನಮಗಾಗಿ ನಾವು ಬದುಕಬೇಕು.
5. ನಮ್ಮ ಮನೋ ದೈಹಿಕ ಅವಶ್ಯಕತೆಗಳು ಮತ್ತು ಸಾಮರ್ಥ್ಯ ನಮಗೆ ಮಾತ್ರ ಗೊತ್ತು. ಆದ್ದರಿಂದ ನಮಗೆ ವಿಶ್ರಾಂತಿ ಬೇಕೆನಿಸಿದಾಗ ಖಂಡಿತವಾಗಿಯೂ ರೆಸ್ಟ್ ಮಾಡಬೇಕು. ಇದು ನಮ್ಮ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಉತ್ಪಾದಕತೆಯನ್ನು ಬಲಪಡಿಸುತ್ತದೆ.
6. ಚಿತ್ರವಿಚಿತ್ರ ಮಾತುಕತೆಗಳು, ಅಸಹನೀಯವಾದ ವಾತಾವರಣದಿಂದ ಅಂತರ ಕಾಯ್ದುಕೊಳ್ಳಬೇಕು. ಋಣಾತ್ಮಕ ವ್ಯಕ್ತಿ ಮತ್ತು ವಿಚಾರಗಳು ನಮ್ಮ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ ಎಂಬುದರ ಕುರಿತು ಸದಾ ಜಾಗರೂಕರಾಗಿರಬೇಕು.
7. ನಮ್ಮ ಅವಶ್ಯಕತೆಗಳ ಕುರಿತು ಮೆದುವಾಗಿ ಆದರೆ ಅಷ್ಟೇ ಸ್ಪಷ್ಟವಾಗಿ ಇತರರಿಗೆ ತಿಳಿಯಪಡಿಸಬೇಕು .
8. ನಮ್ಮ ಸುತ್ತಲೂ ನಮ್ಮದೇ ಆದ ನಿಯಂತ್ರಣ ವಲಯವನ್ನು ಸೃಷ್ಟಿಸಿಕೊಂಡು ಆ ಮಿತಿಯನ್ನು ಮೀರದಂತೆ ಕಾರ್ಯನಿರ್ವಹಿಸಬೇಕು. ಆಗ ಅನವಶ್ಯಕ ಮಾತುಕತೆಗಳು, ವಾದ ವಿವಾದಗಳು ದೂರವಾಗಿ ನಮ್ಮ ಮಾನಸಿಕ ಶಾಂತಿಯನ್ನು ಸದಾ ಕಾಯುವಂತಹ ವಾತಾವರಣ ಸೃಷ್ಟಿಯಾಗುತ್ತದೆ.
ವ್ಯಕ್ತಿ ಸಮಾಜದ ಶಿಶು ನಿಜ…. ಆದರೆ ತನಗಾಗಿ ಯಾವುದೇ ಆಸೆಗಳನ್ನು ಇಟ್ಟುಕೊಳ್ಳದೆ ಸದಾ ಮತ್ತೊಬ್ಬರಿಗಾಗಿ ತುಡಿಯುತ್ತಾ ಇರುವ ವ್ಯಕ್ತಿ ಒಂದೊಮ್ಮೆ ಮಗನಾಗಿ, ತಂದೆಯಾಗಿ ತಾಯಿಯಾಗಿ ನಿನ್ನ ಕರ್ತವ್ಯವನ್ನು ನೀನು ನಿರ್ವಹಿಸಿದೆ,ಇದನ್ನು ಎಲ್ಲರೂ ಮಾಡುತ್ತಾರೆ, ನಿನ್ನ ಹೆಚ್ಚುಗಾರಿಕೆ ಇದರಲ್ಲಿ ಏನಿದೆ ಎಂದು ಇತರರು ಕೇಳಿದಾಗ ನಮಗಾಗುವ ಆಘಾತ ಅಷ್ಟಿಷ್ಟಲ್ಲ. ಆದರೆ ಬಲುದೂರ ಸಾಗಿ ಬಂದಿರುವ ನಮಗೆ ನಮ್ಮ ಭೂತವನ್ನು ಸರಿಪಡಿಸಿಕೊಳ್ಳಲಾಗುವುದಿಲ್ಲ. ಅದರ ಬದಲಾಗಿ ಇಂದಿನಿಂದಲೇ ಸ್ವಾರ್ಥಿ ಎನಿಸಿಕೊಂಡರೂ ಪರವಾಗಿಲ್ಲ, ನಮ್ಮ ವೈಯುಕ್ತಿಕ ಏಳಿಗೆಗಾಗಿ ಕೆಲ ಸಮಯವನ್ನು ಮೀಸಲಿಟ್ಟುಕೊಂಡು ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಬದುಕಿನ ಇಳಿಗಾಲದಲ್ಲಿ ಸದಾ ಬೇರೆಯವರಿಗಾಗಿ ಬದುಕು ತೇಯುವುದೇ ಆಯಿತು ನನ್ನ ಕುರಿತು ನಾನು ಯೋಚಿಸಲೇ ಇಲ್ಲ ಎಂಬ ಹಲುಬುವಿಕೆ ನಮ್ಮದಾಗಬಾರದು, ಆದ್ದರಿಂದ ಜಾಗೃತರಾಗಿ. ನಮಗಾಗಿಯೂ ನಾವು ಬದುಕಲೇ ಬೇಕು.
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ್