f7d35657-64b6-4a8e-afd3-453fe7439599

ದಕ್ಷಿಣ ಭಾರತದಲ್ಲಿಯೇ ಮಸ್ಕಿಗೆ ಪ್ರಥಮ ಸ್ಥಾನ

ಮಸ್ಕಿ ಅಭಿವೃದ್ದಿಗೆ 1.5 ಕೋಟಿ ರು. ಪ್ರೋತ್ಸಾಹಧನ

ಪ್ರಧಾನಿ ಮೋದಿ ದೂರದೃಷ್ಠಿ ಯೋಜನೆ: ಸಂಗಣ್ಣ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೦೯- ನೀತಿ ಆಯೋಗ ಬಿಡುಗಡೆ ಮಾಡಿದ ಮಹತ್ವಾ ಕಾಂಕ್ಷಿ ತಾಲೂಕು ಕಾರ್ಯಕ್ರಮ (ಎಬಿಪಿ)ದ ಪಟ್ಟಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಮಸ್ಕಿ ತಾಲೂಕು ದಕ್ಷಿಣ ಭಾರತದಲ್ಲಿಯೇ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದು, ಸಂಸದ ಸಂಗಣ್ಣ ಕರಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ಟರಕಟಣೆ ನೀಡಿರುವ ಅವರು ಲಸೌಲಭ್ಯ, ಶಿಕ್ಷಣ, ಕೃಷಿ ಸೇರಿ ವಿವಿಧ ಮಾನದಂಡಗಳ ಆಧಾರದ ಮೇಲೆ ರ‌್ಯಾಂಕಿಂಗ್ ನೀಡಲಾಗಿದ್ದು, ಮೊದಲ ಸ್ಥಾನ ಪಡೆದ ಮಸ್ಕಿ ತಾಲೂಕು 1.5 ಕೋಟಿ ರು. ಪ್ರೋತ್ಸಾಹಧನಕ್ಕೆ ಭಾಜನವಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಮಸ್ಕಿ ಯು ಅಶೋಕನ ಶಾಸನದಿಂದ ಪ್ರಸಿದ್ಧಿ ಪಡೆದಿತ್ತು. ದಕ್ಷಿಣ ಭಾರತದಲ್ಲೇ ಅಶೋಕನ ಆಡಳಿತ ಮಾದರಿಯಾದಂತೆ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ವಿಶ್ವದ ಮನ್ನಣೆ ದೊರಕಿದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಮಯದಲ್ಲೇ ಹನುಮನ ನಾಡು ಕೊಪ್ಪಳ ಲೋಕಸಭಾ ಕ್ಷೇತ್ರದ ಮಸ್ಕಿ ಅತ್ಯುತ್ತಮ ಸಾಧನೆ ಮಾಡಿದೆ. ಸಾಮ್ರಾಟ್ ಅಶೋಕನಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಮರಾಜ್ಯ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ಗ್ರಾಮೀಣ ಜನರ ಗುಣಮಟ್ಟ ಹೆಚ್ಚಿಸುವ, ಆಡಳಿತ ಸುಧಾರಿಸುವ ಗುರಿಯೊಂದಿಗೆ ನೀತಿ ಆಯೋಗವು ಜಾರಿ ತಂದಿರುವ ಮಹತ್ವಾಕಾಂಕ್ಷಿ ಜಿಲ್ಲೆ ಕಾರ್ಯಕ್ರಮ ಮಾದರಿಯಲ್ಲೇ ಅನುಷ್ಠಾನಗೊಳಿಸಿರುವ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ (ಎಬಿಪಿ)ದಲ್ಲಿ ಮಸ್ಕಿ ತಾಲೂಕು ಸಾಧನೆ ಮಾಡಿದೆ. ಗ್ರಾಮೀಣ ಜನರ ಗುಣಮಟ್ಟ ಹೆಚ್ಚಿಸಿ, ಆಡಳಿತ ಸುಧಾರಣೆಗಾಗಿ ರೂಪಿಸಿದ ಸ್ಪರ್ಧೆಯಲ್ಲಿ ಮಸ್ಕಿ ಮೊದಲ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಅನುಷ್ಠಾನ ದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ತಾಲೂಕುಗಳು ಕಾಂಗ್ರೆಸ್ ಅವಧಿಯಲ್ಲಿ ಅಭಿವೃದ್ಧಿ ವಿಮುಖವಾಗಿದ್ದವು. ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ, ಶಿಕ್ಷಣ, ಕೃಷಿ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ದೂರದೃಷ್ಟಿತ್ವ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಪರಿಣಾಮ ಕಾರಿ ಅನುಷ್ಠಾನದಿಂದ ಈ ಸಾಧನೆ ಸಾಧ್ಯವಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಇಂದೆಂದೂ ನಡೆಯದ ಅಭಿವೃದ್ಧಿ ಕೆಲಸ ಪ್ರಧಾನಿ ಮೋದಿ ಅವಧಿಯಲ್ಲಿ ನಡೆದಿದೆ. ಇದಕ್ಕೆ ಮಸ್ಕಿ ತಾಲೂಕಿನ ಸಾಧನೆಯೇ ಸಾಕ್ಷಿ ಎಂದರು.

Leave a Reply

Your email address will not be published. Required fields are marked *

error: Content is protected !!