
ದಾಷ್ಟಿಕತೆ ಮತ್ತು ನಮ್ರತೆ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಅದೊಂದು ಬೃಹತ್ತಾದ ಕಾಡು. ಅ ಕಾಡಿನ ಹಾದಿಯಾಗಿ ಸುತ್ತು ಹಾಕಿ ಬಸವಳಿದು ಬಾಯಾರಿದ ಆ ವ್ಯಕ್ತಿ ಕಾಡಂಚಿನ ಊರಿಗೆ ಬಂದು ತಲುಪಿದ. ಊರ ಹೊರಗಿನ ಬಾವಿಯಲ್ಲಿ ನೀರು ಸೇದುತ್ತಿದ್ದ ಓರ್ವ ಮಹಿಳೆಯನ್ನು ಕಂಡು ತನಗೆ ತುಂಬಾ ಬಾಯಾರಿಕೆಯಾಗಿದ್ದು ಕುಡಿಯಲು ನೀರು ಕೊಡಲು ಕೇಳಿದ. ತಲೆ ಕೂದಲು ನೆರೆತ, ಬೊಚ್ಚು ಬಾಯಿಯ ಆ ವೃದ್ಧ ಹೆಣ್ಣು ಮಗಳು “ನೀರನ್ನು ನಾನು ಕೊಡುವೆ, ಆದರೆ ನಿನ್ನ ಪರಿಚಯವನ್ನು ಹೇಳು” ಎಂದಳು.
ಆ ಕಾಲದ ಅತ್ಯಂತ ಪ್ರಸಿದ್ಧ ಕವಿ ಮತ್ತು ವಿದ್ವಾಂಸನಾಗಿದ್ದ ಆ ವ್ಯಕ್ತಿ ತನ್ನ ಪರಿಚಯ ಹೇಳಿದರೆ ತಿಳಿದುಕೊಳ್ಳುವಷ್ಟು ಯೋಗ್ಯತೆ ಆ ವೃದ್ಧ ಹಳ್ಳಿಯ ಹೆಣ್ಣುಮಗಳಲ್ಲಿ ಇಲ್ಲ ಎಂದುಕೊಂಡು “ನಾನು ಓರ್ವ ಪಥಿಕ, ಈ ದಾರಿಯ ಮೂಲಕ ಮುಂದಿನ ಊರಿಗೆ ಹೋಗುತ್ತಿರುವ ದಾರಿಹೋಕ” ಎಂದು ಹೇಳಿದನು.
ಇದೀಗ ವೃದ್ಧ ಹೆಣ್ಣು ಮಗಳು ಮೆಲುವಾಗಿ ನಕ್ಕು ಈ ಪ್ರಪಂಚದಲ್ಲಿ ಕೇವಲ ಇಬ್ಬರೇ ಪಥಿಕರಿರುವುದು ಸೂರ್ಯ ಮತ್ತು ಚಂದ್ರ. ಅವರಿಬ್ಬರೂ ಪ್ರತಿದಿನ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವರು, ಅದೆಷ್ಟೇ ಎಡರು ತೊಡರುಗಳು ಬಂದರೂ ತಮ್ಮ ಕರ್ತವ್ಯವನ್ನು ನಿರ್ವಹಿಸುವವರು ಅವರಿಬ್ಬರೇ….. ನೀನು ಪಥಿಕನಲ್ಲ…. ಆದ್ದರಿಂದ ನೀನು ಯಾರು ಎಂಬುದನ್ನು ಸರಿಯಾಗಿ ಹೇಳು ಎಂದು ಹೇಳಿದಳು.
ಹಾಗಾದರೆ ನಾನು ಅತಿಥಿ ಎಂದು ತಿಳಿದುಕೋ ಎಂದು ಆ ವಿದ್ವಾಂಸನು ಮಾರುತ್ತರ ನೀಡಿದನು.
ಅದಕ್ಕೆ ಆ ವೃದ್ದೆಯು ಈ ಜಗತ್ತಿನಲ್ಲಿ ಅತಿಥಿಗಳು ಕೇವಲ ಇಬ್ಬರೇ. ಯೌವನ ಮತ್ತು ದುಡ್ಡು. ಅವರಿಬ್ಬರೂ ಶಾಶ್ವತವಲ್ಲ. ಅದೆಷ್ಟೇ ನೀನು ಪ್ರಯತ್ನ ಪಟ್ಟರೂ, ಪೀಡಿಸಿದರೂ ಅವರು ನಿನ್ನ ಬಳಿ ಉಳಿಯುವುದಿಲ್ಲ ಆದ್ದರಿಂದ ನೀನಾರು? ಎಂಬುದನ್ನು ಹೇಳು ಎಂದು ಪ್ರಶ್ನಿಸಿದಳು.
ವೃದ್ಧೆಯ ಉತ್ತರದಿಂದ ಚಕಿತನಾದ ವಿದ್ವಾಂಸನು ನಾನು ಒಬ್ಬ ತಾಳ್ಮೆಯುಳ್ಳ ವ್ಯಕ್ತಿ ಎಂದು ಉತ್ತರಿಸಿದನು.
ಮತ್ತೆ ಮೆಲು ನಕ್ಕ ವೃದ್ಧ ಹೆಣ್ಣು ಮಗಳು ನೀನು ಅಷ್ಟೊಂದು ತಾಳ್ಮೆಯುಳ್ಳ ವ್ಯಕ್ತಿ ಎಂದು ನನಗೆ ಅನ್ನಿಸುತ್ತಿಲ್ಲ. ಈ ಪ್ರಪಂಚದಲ್ಲಿ ಭೂಮಿ ತಾಯಿ ಮತ್ತು ಗಿಡಮರಗಳು ಮಾತ್ರ ತಾಳ್ಮೆಯನ್ನು ಹೊಂದಿವೆ. ಈ ಭೂಮಿ ತಾಯಿ ನಮ್ಮ ಅದೆಷ್ಟೋ ಅತ್ಯಾಚಾರಗಳನ್ನು ಸಹಿಸಿ ನಮ್ಮನ್ನು ಮಗುವಿನಂತೆ ಪೊರೆಯುತ್ತಾಳೆ… ಇನ್ನು ಗಿಡ ಮರಗಳು ತಮ್ಮ ಬದುಕಿನುದ್ದಕ್ಕೂ ನಮಗೆ ನೆರಳು, ಹಣ್ಣು ಹೂಗಳನ್ನು ಕೊಡುತ್ತವೆ…. ನಾವು ಕಲ್ಲೆಸೆದಾಗ್ಯೂ ಕೂಡ. ಈಗ ಹೇಳು ನೀನ್ಯಾರು ಎಂದು? ಎಂದು ಪ್ರಶ್ನಿಸಿದಳು.
ಈಗಾಗಲೇ ಬಾಯಾರಿ ಬಸವಳಿದಿದ್ದ ಆ ವ್ಯಕ್ತಿ ಕೊಂಚ ಅಸಹನೆಯಿಂದಲೇ ಹಾಗಾದರೆ ನನ್ನನ್ನು ಓರ್ವ ಮೊಂಡ ಎಂದು ತಿಳಿದುಕೊಂಡು ನೀರು ಹನಿಸಿ ಪುಣ್ಯ ಕಟ್ಟಿಕೋ ಎಂದು ಹೇಳಿದನು.
ನಸುನಗುತ್ತಾ ಆ ವೃದ್ದ ಹೆಣ್ಣು ಮಗಳು ಈ ಜಗತ್ತಿನಲ್ಲಿ ಕೇವಲ ಎರಡು ವಸ್ತುಗಳಲ್ಲಿ ಮೊಂಡತನವಿದೆ. ಅವು ಕೂದಲು ಮತ್ತು ಉಗುರುಗಳು. ಅದೆಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಬೆಳೆಯುವ ಕೂದಲು ಮತ್ತು ಉಗುರುಗಳಷ್ಟು ಮೊಂಡುತನ ಬೇರೆ ಯಾವುದೇ ವಸ್ತುಗಳಿಗೆ ಇಲ್ಲ. ಈಗ ಹೇಳು ನೀನು ಯಾರು?? ಎಂದು ಮತ್ತೆ ಆಕೆ ಕೇಳಿದರು.
ಬಾಯಾರಿಕೆಯಿಂದ ಬಳಲಿದ್ದ ಆ ದಾರಿಹೋಕ ತುಸು ಅಸಹನೆಯಿಂದಲೇ ನಿನ್ನನ್ನು ನೀರು ಕೇಳುತ್ತಿರುವ ನಾನು ಒಬ್ಬ ಮೂರ್ಖ ಎಂದು ತಿಳಿದುಕೋ ಎಂದು ಕೊಂಚ ಸಿಡುಕುತ್ತಲೇ ಹೇಳಿದನು.
ಮತ್ತೆ ಆ ವೃದ್ಧ ಮಹಿಳೆ ಈ ಜಗತ್ತಿನಲ್ಲಿ ಮೂರ್ಖರು ಕೇವಲ ಇಬ್ಬರು ಇದ್ದಾರೆ. ಯಾವುದೇ ಯೋಗ್ಯತೆಗಳು ಇಲ್ಲದೆ ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ರಾಜ್ಯವನ್ನು ಆಳುತ್ತಿರುವ ರಾಜ ಮತ್ತು ಆ ರಾಜನನ್ನು ಹೊಗಳಿ ಹೊನ್ನಶೂಲಕ್ಕೆ ಏರಿಸುವ ಮಂತ್ರಿ. ಅದೆಷ್ಟೇ ಅಭಿವೃದ್ಧಿ ಹೊಂದಿದ ರಾಜ್ಯವಾದರೂ ಅದರ ಅವನತಿಗೆ ಒಬ್ಬ ಮೂರ್ಖ ರಾಜ ಮತ್ತು ಓರ್ವ ಮೂರ್ಖ ಮಂತ್ರಿ ಕಾರಣರಾಗುತ್ತಾರೆ ಎಂದರೆ ನೀನು ನಂಬಲಿಕ್ಕಿಲ್ಲ.ಈಗ ಹೇಳು ನೀನ್ಯಾರು?? ಎಂದು ಮತ್ತೆ ಕೇಳಿದಳು.
ಇದೀಗ ಆ ವಿದ್ವಾಂಸನ ಕಣ್ತೆರೆದಂತಾಯಿತು. ಓರ್ವ ಹಳ್ಳಿಯ ಏನು ಅರಿಯದವಳು ಎಂದುಕೊಂಡ ಅನಕ್ಷರಸ್ಥ ಹೆಣ್ಣು ಮಗಳ ಜಾಣ್ಮೆ ಮತ್ತು ತಿಳುವಳಿಕೆಯನ್ನು ಕಂಡು ಆತನಿಗೆ ಆಶ್ಚರ್ಯವಾಗುವುದರ ಜೊತೆ ಜೊತೆಗೆ ತನ್ನ ಅರಿವಿನ ಕುರಿತಾದ ಹೆಮ್ಮೆ ಕರಗಿಹೋಯಿತು.
ಕೂಡಲೇ ನತಮಸ್ತಕನಾದ ಆ ವಿದ್ವಾಂಸನು ಆಕೆಯ ಕಾಲುಗಳಿಗೆರಗಿ
” ಅಮ್ಮಾ, ನನ್ನನ್ನು ಕ್ಷಮಿಸಿಬಿಡು. ನಾನು ಓರ್ವ ವಿದ್ವಾಂಸ ಎಂಬ ಹಮ್ಮಿನಲ್ಲಿದ್ದೆ. ನನ್ನ ಪಾಂಡಿತ್ಯವು ನನ್ನ ಕಣ್ಣುಗಳಿಗೆ ಅಹಂಕಾರದ ಪೊರೆಯನ್ನು ಉಂಟು ಮಾಡಿತ್ತು. ಆದ್ದರಿಂದಲೇ ಜಗತ್ತಿನ ಉಳಿದೆಲ್ಲರೂ ನನ್ನ ಪಾಲಿಗೆ ನಗಣ್ಯರೆನಿಸಿದ್ದರು. ಇದೀಗ ನೀನು ನನ್ನ ಕಣ್ಣು ತೆರೆಸಿದೆ. ನನ್ನನ್ನು ಕ್ಷಮಿಸಿ ಬಿಡು ತಾಯಿ…. ದಯವಿಟ್ಟು ನೀರು ಹನಿಸಿ ಪುಣ್ಯಕಟ್ಟಿಕೋ” ಎಂದು ಆಕೆಯ ಪಾದಗಳಿಗೆ ಎರಗಿದನು.
ಆದರೆ ಏನಾಶ್ಚರ್ಯ!!! ಹಾಗೆ ಕಾಲುಗಳಿಗೆರಗಿದ ವಿದ್ವಾಂಸನನ್ನು ಭುಜ ಹಿಡಿದು ಮೇಲೆತ್ತಿದ ಆ ತಾಯಿಯನ್ನು ನೋಡಿದ ಆ ವಿದ್ವಾಂಸನ ಬಾಯಿಂದ ಮಾತುಗಳೇ ಹೊರಡಲಿಲ್ಲ…. ಕಾರಣ ಹಾಗೆ ಮೇಲೆತ್ತಿದಾಗ ಆತ ಕಂಡದ್ದು ವಿದ್ಯೆ ಮತ್ತು ಜಾಣ್ಮೆಯ ಅಧಿದೇವತೆ ಸಾಕ್ಷಾತ್ ಸರಸ್ವತಿ ದೇವಿಯನ್ನು. ಅಪ್ರತಿಭನಾಗಿ ಮತ್ತೊಮ್ಮೆ ಆಕೆಯ ಕಾಲಿಗೆರಗಿದ ಆತನನ್ನು ಕುರಿತು ಆಕೆ ಹೀಗೆ ಹೇಳಿದಳು
” ಕಂದ, ನಿನ್ನನ್ನು ನೀನು ಅರಿತರೆ ಮಾತ್ರ ನೀನು ಓರ್ವ ಮನುಷ್ಯನಾಗುವೆ. ಅಹಂಕಾರದ ಪೊರೆ ನಿನ್ನ ಜ್ಞಾನ ಚಕ್ಸುಗಳನ್ನು ಮುಚ್ಚಿ ಹಾಕಿತ್ತು. ನಿನ್ನ ಮಾನವೀಯತೆಯ ಮುಖ ಪ್ರಕಟವಾಗುವುದು ನೀನು ಕೇವಲ ವಿದ್ಯಾವಂತನಾಗಿದ್ದರೆ ಅಲ್ಲ ಆ ವಿದ್ಯೆಯೊಂದಿಗೆ ವಿನಯವು ಕೂಡ ಮಿಳಿತವಾಗಿರಬೇಕು”
ವಿದ್ಯೆಗೆ ವಿನಯವೇ ಭೂಷಣ ಎಂಬುದರ ಅರಿವು ಮೂಡಿಸಲೆಂದೇ ನಾನಿಲ್ಲಿ ಬಂದದ್ದು ಎಂದು ವಿದ್ಯಾದಾತೆ ಹೇಳಿದಾಗ ಆ ವಿದ್ವಾಂಸನು ತಲೆತಗ್ಗಿಸಿ ಆಕೆಗೆ ತನ್ನನ್ನು ಕ್ಷಮಿಸು ಎಂದು ಆಗ್ರಹಿಸಿದನು. ಪ್ರೀತಿನಿಂದ ಆತನ ತಲೆಯನ್ನು ಸವರಿ ವಿನಮ್ರತೆಯ ಪಾಠವನ್ನು ಹೇಳಿದ ಆ ವೃದ್ಧ ಮಾತೆ ಸಾಕ್ಷಾತ್ ಸರಸ್ವತಿ ದೇವಿ ಮತ್ತು ಹಾಗೆ ಆಕೆಯ ಬಳಿ ಕ್ಷಮೆ ಕೇಳಿದ ಆ ಮಹಾನ್ ವಿದ್ವಾಂಸನೆ ಸಂಸ್ಕೃತದ ಅತಿ ದೊಡ್ಡ ವಿದ್ವಾಂಸ, ಬೋಜರಾಜನ ಸ್ನೇಹಿತ, ಶಾಕುಂತಲ, ಮೇಘದೂತ ಮುಂತಾದ ಬೃಹತ್ ಕೃತಿಗಳನ್ನು ರಚಿಸಿದ ಕವಿರತ್ನ ಎಂದೆ ಹೆಸರಾದ ಮಹಾನ್ ಕವಿ ಕಾಳಿದಾಸ.