
ನರೇಗಾ ಯೋಜನೆಯಡಿ ಕೃಷಿ ಇಲಾಖೆಯ ಕಾಮಗಾರಿ ಪರಿಶೀಲಿಸಿದ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅಳವಂಡಿ ಹೋಬಳಿಯ ಕೃಷಿ ಇಲಾಖೆಯಿಂದ ಅನುಷ್ಠಾನಿಸುತ್ತಿರುವ ಕಂದಕ ಬದು ನಿರ್ಮಾಣ ಕಾಮಗಾರಿ ಹಾಗೂ ಗ್ರಾಮ ಪಂಚಾಯತಿಯ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಕೊಪ್ಪಳ ತಾಲೂಕ ಪಂಚಾಯತಿಯ ನರೇಗಾ ಸಹಾಯಕ ನಿರ್ದಶೇಕರಾದ ಯಂಕಪ್ಪ ಭೇಟಿ ನೀಡಿದರು.
ಪ್ರತಿ ಬದು ಹಾಕುವಾಗ ಮಣ್ಣನ್ನು ಗಟ್ಟಿಗೊಳಿಸಿರಿ ಇದರಿಂದ ಮಣ್ಣು ಕಟ್ಟೆಗೆ ಬೀಳುವದಿಲ್ಲ ಮತ್ತು ಮಳೆ ಬಂದಲ್ಲಿ ಕಟ್ಟೆಯ ತುಂಬಾ ನೀರು ನಿಲ್ಲುತ್ತದೆ ಇದರಿಂದ ಜಮೀನಿನಲ್ಲಿ ನೀರಿನ ತೇವಾಂಶ ಕಾಪಾಡುವುದರ ಜೊತೆಗೆ ಫಲವತ್ತತೆ ಹೆಚ್ಚಾಗುತ್ತದೆ. ಬದು ಪ್ರತಿಯೊಬ್ಬ ರೈತರಿಗೆ ಸಹಾಯಕವಾಗುವ ಕಾಮಗಾರಿ ಆಗಿದೆ. ಸ್ಥಳದಲ್ಲಿ ಹಾಜರಿದ್ದ ಜಮೀನಿನ ಮಾಲೀಕರಿಗೆ ಬದುವಿನ ಮೇಲೆ ಔಡಲ, ಇರೆಬಲ್ಲಿ, ಸೋತೆಬಳ್ಳಿ ಹಚ್ಚಿಕೊಂಡು ಅದರಿಂದ ಕೂಡ ಲಾಭ ಪಡೆಯಬಹುದು ಎಂದರು.
ವರ್ಷಪೂರ್ತಿ ಆದಾಯಕ್ಕೆ ದಾರಿ ಮಾಡಿಕೊಂಡಾಗುತ್ತದೆ ಎಂದರು. ಬದುವಿನ ಜೊತೆಗೆ ಬದು ಬೇಸಾಯ ಹೆಚ್ಚು ಗಮನಹರಿಸಬೇಕೆಂದರು.
ಪ್ರತಿ ಬದುವಿನ ಮೇಲೆ ವಿವಿಧ ಜಾತಿಯ ಸಸಿಗಳನ್ನು ನೆಡುವದರಿಂದ ಭೂಮಿಯ ತೇವಾಂಶ ಹೆಚ್ಚಳದ ಜೊತೆಗೆ ಬೆಳೆಗಳಿಗೆ ಅನುಕೂಲವಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಅಕುಶಲ ಕೆಲಸವನ್ನು ಬದು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ನೀಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಅಳವಂಡಿ ಕೃಷಿ ಅಧಿಕಾರಿ ಪ್ರತಾಪಗೌಡ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಅನುಷ್ಠಾನ ಇಲಾಖೆಯ ತಾಂತ್ರಿಕ ಸಂಯೋಜಕಿ ಕವಿತಾ, ಕೃಷಿ ತಾಂತ್ರಿಕ ಸಹಾಯಕಿ ಶಶಿರೇಖಾ, ಕಾಯಕ ಬಂಧುಗಳು ಹಾಗು 335 ಕೂಲಿಕಾರರು ಹಾಜರಿದ್ದರು.