
ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ತಡೆ ಮತ್ತು ಕೆಲ ಪರಿಹಾರಗಳು
ಕರುನಾಡ ಬೆಳಗು ಸುದ್ದಿ
ಸೀರೆ ಅಂಗಡಿಯಲ್ಲಿರುವ ಎಲ್ಲಾ ಸೀರೆಗಳನ್ನು ಕಿತ್ತು ಹಾಕಿಸಿದ ಆ ಹೆಣ್ಣು ಮಗಳು ಕೊನೆಗೂ ಒಂದು ಸೀರೆಯನ್ನು ಆರಿಸಲಾಗದೆ ಒದ್ದಾಡುತ್ತಿದ್ದಳು. ಆಕೆಗೆ ಸೀರೆ ತೋರಿಸುತ್ತಿದ್ದ ಅಂಗಡಿಯ ಕೆಲಸದವರು ಕೂಡ ಬೇಸತ್ತಿದ್ದರು.
ಚಿನ್ನದ ಅಂಗಡಿಗೆ ಹೋದ ಹೆಣ್ಣುಮಗಳು ಅಲ್ಲಿರುವ ತರಹೇವಾರಿ ಡಿಸೈನ್ಗಳನ್ನು ನೋಡಿ ಯಾವುದನ್ನು ಆರಿಸಿಕೊಳ್ಳಬೇಕು ಎಂದು ಗಲಿಬಿಲಿಗೊಂಡಳು.
ಬಟ್ಟೆ ಅಂಗಡಿಗೆ ಹೋದ ಆ ಯುವಕ ತನಗೆ ಬೇಕಾದ ಬಟ್ಟೆ ಆರಿಸಲು ಬಹಳ ಸಮಯ ವ್ಯಯಿಸಿದ. ಮೊಬೈಲ್ ಮುಂತಾದ ಎಲೆಕ್ಟ್ರಿಕ್ ಗ್ಯಾಜೆಟ್ಗಳನ್ನು ಆರಿಸುವಾಗಲು ಅಷ್ಟೇ ಗಂಡು ಹುಡುಗರು ವಿಪರೀತ ಸಮಯ ತೆಗೆದುಕೊಳ್ಳುತ್ತಾರೆ ಇಲ್ಲವೇ ಹೊಯ್ದಾಡುತ್ತಾರೆ.
ಇನ್ನು ಕೆಲ ಹೆಣ್ಣು ಮಕ್ಕಳು ಪ್ರತಿದಿನ ಮುಂಜಾನೆ, ಮಧ್ಯಾಹ್ನ ಮತ್ತು ರಾತ್ರಿಗೆ ಏನು ಅಡುಗೆ ಮಾಡಬೇಕು ಎಂದು ಗೊಂದಲ,ಗಡಿಬಿಡಿಗಳಲ್ಲಿಯೇ ದಿನ ಕಳೆಯುತ್ತಾರೆ. ಬೇರೆಯವರನ್ನು ಕೇಳಿ ಉಪ್ಪು ಖಾರ ಹುಳಿ ಬಳಸುವ ಹೆಣ್ಣುಮಗಳಲ್ಲಿ ಬಹಳಷ್ಟು ಕಾಲ ಅಡುಗೆಗೆ ಬಳಸಬಹುದಾದ ಪದಾರ್ಥಗಳ ಕುರಿತು ಖಚಿತತೆ ಬರುವುದೇ ಇಲ್ಲ.
ಕೆಲವೊಮ್ಮೆ ಮನೆಯಲ್ಲಿ ಅನಾರೋಗ್ಯ ಪೀಡಿತರನ್ನು ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಹೊಯ್ದಾಡುತ್ತಿದ್ದರೆ ಅನಾರೋಗ್ಯ ಪೀಡಿತ ವ್ಯಕ್ತಿಯ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಇಂತಹ ಸಮಯದಲ್ಲಿ ದಿಢೀರ್ ಮತ್ತು ಖಚಿತ ನಿರ್ಧಾರಗಳ ಅಗತ್ಯತೆ ಇರುತ್ತದೆ.
ಕೆಲ ಜನರಲ್ಲಿ ತಮ್ಮ ಆಯ್ಕೆಯ ಬಗ್ಗೆ ವಿಶ್ವಾಸವಿಲ್ಲದೆ ಯಾರಾದರೂ ಅಯ್ಯೋ ಇದೆಂಥ ಡಿಸೈನ್ ಬಟ್ಟೆ ತಂದೆ, ಇದರ ಕ್ವಾಲಿಟಿ ಸ್ವಲ್ಪನೂ ಚೆನ್ನಾಗಿಲ್ಲ ಅಂತ ಹೇಳಿದರೆ ಸಾಕು ಅಂಗಡಿಗೆ ಹೋಗಿ ಆ ಬಟ್ಟೆಯನ್ನು ಬದಲಿಸಿ ಬೇರೊಂದನ್ನು ತರುತ್ತಾರೆ. ಆಗಲೂ ಕೂಡ ತಮ್ಮ ಆಯ್ಕೆಯ ಬಗ್ಗೆ ಅವರಿಗೆ ನಂಬಿಕೆ ಇರುವುದಿಲ್ಲ.
ಮತ್ತೆ ಕೆಲವರು ತಮ್ಮ ಜೊತೆಗಿರುವವರನ್ನು ಇದು ನನಗೆ ಒಪ್ಪುತ್ತದೆಯೇ ಎಂದು ಬೇರೆ ಬೇರೆ ಬಟ್ಟೆಗಳನ್ನು, ಆಭರಣಗಳನ್ನು ಧರಿಸಿ ತೋರಿಸಿ ಅಳೆದು ಸುರಿದು ತೂಗಿದ ನಂತರ ಕೊನೆಗೆ ಒಂದನ್ನು ಆಯ್ಕೆ ಮಾಡಿ ತಂದರೂ ಅವರಿಗೆ ತಮ್ಮ ಆಯ್ಕೆಯ ಕುರಿತ ಗೊಂದಲ ಹೋಗಿರುವುದಿಲ್ಲ.
ಬಹಳಷ್ಟು ಬಾರಿ ಇದು ಸಹಜ ಎನಿಸಿದರೂ, ಕೆಲವು ಬಾರಿ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಒದ್ದಾಡುವ ಸಾಕಷ್ಟು ಜನರನ್ನು ನಾವು ನೋಡುತ್ತೇವೆ. ಒಂದೊಮ್ಮೆ ನಿರ್ಧಾರ ತೆಗೆದುಕೊಂಡರು ಅದರ ಬಗ್ಗೆ ತೃಪ್ತಿ ಇಲ್ಲದೆ ಇರುವುದು ಕೂಡ ಕಾಣಬರುತ್ತದೆ.
ಕೆಲ ಜನರು ಸಣ್ಣ ಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಬಹಳಷ್ಟು ಸಮಯವಹಿಸಿದರೆ, ಮತ್ತೆ ಕೆಲವರು ಕ್ಷಣಮಾತ್ರದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡು ಅವುಗಳನ್ನು ಕಾರ್ಯಗತಗೊಳಿಸುತ್ತಾರೆ.
ಆದರೆ ಜೀವನದ ಕೆಲವು ಘಳಿಗೆಗಳಲ್ಲಿ ಹಿರಿಯರ ಹೆತ್ತವರ ನಿರ್ಧಾರಗಳು ಸಮಂಜಸ ಎನಿಸಿದರೆ, ಕೆಲವೊಮ್ಮೆ ನಾವೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ನಮಗೆ ಸಮಂಜಸವೆನಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮಗೆ ದೃಢ ನಿರ್ಧಾರ ಮತ್ತು ಆತ್ಮವಿಶ್ವಾಸದ ಅತ್ಯವಶ್ಯಕತೆ ಇರುತ್ತದೆ. ದೈನಂದಿನ ಚಿಕ್ಕ ಪುಟ್ಟ ನಿರ್ಧಾರಗಳಿಂದ ಹಿಡಿದು, ಯಾವ ವೃತ್ತಿಪರ ತರಬೇತಿಯನ್ನು ಆರಿಸಿಕೊಳ್ಳಬೇಕು.. ಯಾವ ಉದ್ಯೋಗ ಮಾಡಬೇಕು ಎಂಬುದರಿಂದ ಹಿಡಿದು ಯಾರನ್ನು ಮದುವೆಯಾಗಬೇಕು ಎಂಬಂತಹ ಅತಿ ದೊಡ್ಡ ನಿರ್ಧಾರಗಳವರೆಗೆ ಬದುಕಿನಲ್ಲಿ ನಿರ್ಣಯಾತ್ಮಕ ಘಳಿಗೆಗಳು ಎದುರಾಗುತ್ತವೆ.
ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಕುರಿತು ಕೆಲ ಸಲಹೆಗಳನ್ನು ಹೀಗಿವೆ.
ಬದುಕಿನ ಕೆಲ ಸಾಮಾಜಿಕ,ಭಾವನಾತ್ಮಕ ಮತ್ತು ಕೌಟುಂಬಿಕ ನಿರ್ಧಾರಗಳು ಕೇವಲ ಆತ್ಮವಿಶ್ವಾಸದಿಂದ ಮಾತ್ರ ಸಾಧ್ಯವಾಗುವುದಿಲ್ಲ, ಇಲ್ಲಿ ವೈಯುಕ್ತಿಕತೆಗಿಂತ ಕುಟುಂಬದ ಹಿತಾಸಕ್ತಿ ಮುಖ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಕೆಲ ಸಂದರ್ಭಗಳಲ್ಲಿ ದಿಢೀರ್ ನಿರ್ಧಾರ ಕೈಗೊಳ್ಳುವ ಬದಲು ಕೊಂಚ ಸಮಯ ಮುಂದೂಡಿ, ಸರಿ ತಪ್ಪುಗಳನ್ನು ಅವಲೋಕಿಸಿ ಸೂಕ್ತ ಮತ್ತು ಸರಿಯಾದ ನಿರ್ಧಾರ ಕೈಗೊಳ್ಳುವುದು ಉತ್ತಮ.
ನೀವು ಎದುರಿಸುವ ಸಮಸ್ಯೆಯ ಹಿಂದಿನ ಸವಾಲುಗಳನ್ನು ಪರಿಗಣಿಸಿ ಅವುಗಳ ಫಲಾಫಲಗಳನ್ನು ಅರಿತು ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಭಾವನಾತ್ಮಕ ಹಿನ್ನೆಲೆಯಲ್ಲಿರದೆ ವಾಸ್ತವಿಕ ನೆಲೆಗಟ್ಟಿನಲ್ಲಿರಲಿ.ಆದರೂ ನಿಮ್ಮ ಬಗ್ಗೆ ನೀವೇ ತುಸು ಕರುಣೆ ತೋರಿಸಿ.
ನಿಮ್ಮದೇ ಹಿಂದಿನ ತಪ್ಪು ನಿರ್ಧಾರಗಳಿಂದ ಪಾಠ ಕಲಿಯಿರಿ ಮತ್ತು ಈ ಬಾರಿ ಹಾಗಾಗದಂತೆ ಎಚ್ಚರ ವಹಿಸಿ.ಅಕಸ್ಮಾತ್ ಏನನ್ನಾದರೂ ಖರೀದಿಸುವಾಗ ನಿಮ್ಮ ಅವಶ್ಯಕತೆ ಮತ್ತು ಅಗತ್ಯತೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ ,ನಿಮ್ಮ ಹಣಕಾಸಿನ ಪರಿಸ್ಥಿತಿ, ನಿಮ್ಮ ಜೇಬು ತಾಳಿಕೊಳ್ಳಬಹುದಾದ ಭಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಿ.
ಕೆಲವೊಮ್ಮೆ ವಿವಾಹ, ನೌಕರಿ, ಓದು, ಆಸ್ತಿ ಖರೀದಿಯಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ವಿಷಯದ ಕುರಿತು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಿ.
ಮತ್ತೆ ಕೆಲವರಿಗೆ ಅವರ ಪಾಲಕರು ಚಿಕ್ಕಂದಿನಿಂದಲೇ ನಿನಗೇನು ಗೊತ್ತಾಗೋದಿಲ್ಲ ಎಂದು ಹೇಳಿ ಹೇಳಿ ಆ ಮಕ್ಕಳಿಗೆ ತಮ್ಮ ಸ್ವಂತಿಕೆಯ ಮೇಲಿನ ನಂಬಿಕೆ ಹೊರಟು ಹೋಗಿರುತ್ತದೆ. ಅಂತಹವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತುಸು ಹೆಚ್ಚೇ ಹೊಯ್ದಾಡುತ್ತಾರೆ.
ಇದೀಗ ಬದುಕಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಾಗ ಅಗತ್ಯ ಬಿದ್ದರೆ ಬೇರೆಯವರ ಸಲಹೆ ಸೂಚನೆಗಳನ್ನು ಪಾಲಿಸಲಿ, ಆದರೆ ತಾವು ತೆಗೆದುಕೊಳ್ಳುವ ನಿರ್ಧಾರಗಳ ಪರಿಣಾಮದ ಜವಾಬ್ದಾರಿಯನ್ನು ತಾವೇ ಹೊರುವ ಖಚಿತತೆ ಅವರಿಗಿರಬೇಕು. ಇಲ್ಲದೆ ಹೋದರೆ ಅವರು ಹೇಳಿದ್ದರಿಂದಲೇ ಹೀಗಾಯಿತು ಎಂದು ದೂರುವ ಇಂತಹ ಜನರಿಗೆ ಸಲಹೆ ಕೊಡುವುದಕ್ಕೂ ಜನ ಹಿಂಜರಿಯುತ್ತಾರೆ.
ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವುದು ಒಂದು ಕಲೆ, ಚಿಕ್ಕಂದಿನಲ್ಲಿ ಸೈಕಲ್ ಕಲಿಯುವಾಗ ಬಿದ್ದು ಎದ್ದು ಕೈ ಕಾಲಿಗೆ ಗಾಯ ಮಾಡಿಕೊಂಡರೂ ಪಟ್ಟು ಬಿಡದೆ ಸೈಕಲ್ ಕಲಿಯುತ್ತೇವಲ್ಲವೇ ಹಾಗೆಯೇ ನಿರ್ಧಾರ ಎಂಬ ಪ್ರೇಯಸಿಯನ್ನು ನಮ್ಮೆಲ್ಲ ರೀತಿಯ ಪ್ರಯತ್ನಗಳನ್ನು ಹಾಕಿ ಶತಾಯಗತಾಯ ಒಲಿಸಿಕೊಳ್ಳಬೇಕು.
ನಿಮ್ಮ ನಿರ್ಧಾರ ಶಕ್ತಿ ನಿಮ್ಮ ಬದುಕನ್ನು ಬೆಳಗಲಿ ಎಂದು ಹಾರೈಸುವ