WhatsApp Image 2024-05-15 at 7.47.36 PM

ನೀರಿನ ಕೊರತೆ ನೀಗಿಸಲು ಅರಣ್ಯ ಇಲಾಖೆಯು ವಿಶಾಲವಾದ ನೀರಿನ ತೊಟ್ಟಿಗಳನ್ನು ನಿರ್ಮಿಸಿದೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 16- ಈ ವರ್ಷ ಸುದೀರ್ಘ ಬೇಸಿಗೆಯ ಅವಧಿಯಲ್ಲಿ ಸಂಡೂರು ತಾಲೂಕಿನ ಎರಡೂ ವಲಯಗಳಲ್ಲಿ ನೀರಿನ ಕೊರತೆ ನೀಗಿಸಲು ಅರಣ್ಯ ಇಲಾಖೆಯು ಇಡೀ ತಾಲೂಕಿನ ಎಲ್ಲಾ ಕಾಡುಗಳ ಆಯಕಟ್ಟಿನ ಸ್ಥಳಗಳಲ್ಲಿ ವಿಶಾಲವಾದ ನೀರು ತೊಟ್ಟಿಗಳನ್ನು ನಿರ್ಮಿಸಿ ಕಾಲಕಾಲಕ್ಕೆ ನೀರು ತುಂಬಿಸಿದ್ದರಿಂದ ಮೊದಲ ಬಾರಿಗೆ ತಾಲೂಕಿನಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸಲಾಗಿದೆ ಎಂದು ಬಳ್ಳಾರಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ತಿಳಿಸಿದ್ದಾರೆ.

ಸಂಡೂರಿನ ಕಾಡುಗಳಲ್ಲಿ ಚಿರತೆ, ಕರಡಿ, ಕೊಂಡುಕುರಿ, ಕಾಡುಹಂದಿ, ಮುಳ್ಳುಹಂದಿ, ತಾಳೆ ಪುನುಗು, ಚುಕ್ಕೆ ಪುನುಗು, ಕೆಂಪು ಮೂತಿಯ ಮಂಗ, ಕೋಡುಗ, ಮುಂಗುಸಿ ಮುಂತಾದ ಸಸ್ತನಿಗಳು, ವಿವಿಧ ಸರೀಸೃಪಗಳು ಹಾಗೂ ಅಪಾರ ಸಂಖ್ಯೆಯ ಹಕ್ಕಿಗಳಿದ್ದು, ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಹೆಚ್ಚು ಇದ್ದು, ಕಾಡಿನಲ್ಲಿರುವ ಕೆರೆ ಕಟ್ಟೆಗಳು, ಚೆಕ್‍ಡ್ಯಾಂಗಳಲ್ಲಿ ನೀರು ಬತ್ತಿಹೋದ ನಂತರ ಪ್ರಾಣಿ-ಪಕ್ಷಿಗಳು ನೀರನ್ನು ಹರಸಿ ಕೃಷಿಭೂಮಿ ಹಾಗೂ ಜನ ವಸತಿ ಪ್ರದೇಶದ ಕಡೆಗೆ ಬಂದಾದ ಮನುಷ್ಯನ ಮೇಲೆ ಉದ್ದೇಶ ಪೂರ್ವಕವಲ್ಲದ ದಾಳಿ ನಡೆಯುವ ಸಾಧ್ಯತೆ ತಪ್ಪಿಸಲು ಅರಣ್ಯ ಇಲಾಖೆ ವತಿಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಇಂತಹ ಸಂದರ್ಭದಲ್ಲಿ ಕಂಗೆಟ್ಟ ಪ್ರಾಣಿಗಳ ಮೇಲೆ ಜನರು ಆಕ್ರಮಣ ಮಾಡಿ ಅವುಗಳನ್ನು ಕೊಲ್ಲುವ ಸಾಧ್ಯತೆಯೂ ಇರುತ್ತದೆ. ಈ ಪರಿಸ್ಥಿತಿಯನ್ನು ಮುಂದಾಲೋಚಿಸಿದ ಅರಣ್ಯ ಇಲಾಖೆಯು ಸಂಡೂರು ತಾಲೂಕಿನ ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ಅನೇಕ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ ನೀರು ತುಂಬಿಸಿದೆ. ಇದರಿಂದಾಗಿ ಎಲ್ಲಾ ಪ್ರಾಣಿಗಳು ತೊಟ್ಟಿಗಳ ನೀರನ್ನು ಕುಡಿದು ಕಾಡಿನಲ್ಲಿಯೇ ಉಳಿಯಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಅವರು, ನೀರಿನ ತೊಟ್ಟಿಗಳ ಹಾಗೂ ಸುತ್ತಮುತ್ತ ಕಾಡು ಪ್ರಾಣಿಗಳ ಚಲನವಲನ ಅಧ್ಯಯನಿಸಿ ಆಯ್ದ ನೀರಿನ ತೊಟ್ಟಿಗಳ ಸುತ್ತಮುತ್ತ ಸುಮಾರು 30 ಕ್ಯಾಮೆರಾ ಟ್ರಾಪ್‍ಗಳನ್ನು ಕಟ್ಟಿ ಅಲ್ಲಿಗೆ ಬರುವ ಪ್ರಾಣಿಗಳನ್ನು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!