
ನೆಟ್ಟಗಾಗದ ನೆಟ್ ಪರೀಕ್ಷೆ : ಎಐಡಿವೈಓ ಸಂಘಟನೆ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ ವತಿಯಿಂದ ಯುಜಿಸಿ-ನೆಟ್ ಪರೀಕ್ಷೆಯಲ್ಲಿನ ಅಕ್ರಮದಲ್ಲಿ ಭಾಗವಹಿಸಿದವರನ್ನು ತಕ್ಷಣವೇ ಬಂಧಿಸುವಂತೆ ಹಾಗೂ ಪರೀಕ್ಷೆ ನಡೆಸುವ ಎನ್.ಟಿ.ಎ ಎಜೆನ್ಸಿಯನ್ನು ರದ್ದುಗೊಳಿಸುವಂತೆ ತಹಶೀಲ್ದಾರರ ರವಿ ವಸ್ತ್ರದ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಯುಜಿಸಿ-ನೆಟ್ ಪರೀಕ್ಷೆಯಲ್ಲಿನ ಅಕ್ರಮದಲ್ಲಿ ಭಾಗವಹಿಸಿದವರನ್ನು ತಕ್ಷಣವೇ ಬಂಧಿಸಬೇಕೆಂದು ಎಐಡಿವೈಒ ನ ಜಿಲ್ಲಾ ಸಮಿತಿಯ ಸದಸ್ಯರಾದ ದೇವರಾಜ ಹೊಸ್ಮನಿ ಮಾತನಾಡಿ “ಇದೇ ಜೂನ್ 18ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್ಟಿಎ) ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಹಾಗೂ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಆದರೆ ಇದರಿಂದ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಈ ವರ್ಷದಿಂದ ಪಿಹೆಚ್ ಡಿ ಪ್ರವೇಶಕ್ಕೂ ನೆಟ್ ಪರೀಕ್ಷೆ ಪಾಸಾಗುವುದು ಕಡ್ಡಾಯ ಮಾಡಿದ್ದರಿಂದಾಗಿ ಪಿಹೆಚ್ ಡಿ ಪ್ರವೇಶಕ್ಕಾಗಿ ಕಾದು ಕುಳಿತ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯುವುದಕ್ಕಾಗಿ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಎಲ್ಲಾ ನೇಮಕಾತಿಗಳಲ್ಲೂ ನಡೆಯುವ ಭ್ರಷ್ಟಾಚಾರದ ಭೂತ ಈಗ ಈ ಪರೀಕ್ಷೆಗೂ ಬಡಿದುಕೊಂಡಿದೆ. ವೈದ್ಯಕೀಯ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಯಾದ ನೀಟ್ : ನೀಟಾಗಿ ನಡೆಯಲಿಲ್ಲ. ನೆಟ್ ನೆಟ್ಟಗಾಗಲಿಲ್ಲ ಎಂದು ವ್ಯಂಗ್ಯವಾಡುವಂತಹ ಸ್ಥಿತಿ ಶಿಕ್ಷಣ ವ್ಯವಸ್ಥೆ ತಲುಪಿರುವುದು ದುರಂತ” ಎಂದರು.
ಪ್ರತಿಭಟನೆಯಲ್ಲಿ ಎಐಡಿವೈಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶರಣು ಗಡ್ಡಿ ಅವರು ಮಾತನಾಡುತ್ತಾ “ಅಕ್ರಮಗಳ ಸರಮಾಲೆ ದುಡ್ಡಿದ್ದವರಿಗೆ ಉದ್ಯೋಗ, ದುಡ್ಡಿದ್ದವರಿಗೆ ಶಿಕ್ಷಣ ಎನ್ನುವ ವಾತಾವರಣವನ್ನು ಸೃಷ್ಟಿಸಿವೆ. ಜನಸಾಮಾನ್ಯರ ಬದುಕನ್ನು ಬೀದಿಗೆ ತಳ್ಳಿವೆ. ಲಕ್ಷಾಂತರ ಪರೀಕ್ಷಾರ್ಥಿಗಳ ಶ್ರಮವನ್ನು ಹಾಳುಮಾಡಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ನಿದರ್ಶನೀಯ ಶಿಕ್ಷೆ ವಿಧಿಸಲು ಈ ಮೂಲಕ ಆಗ್ರಹಿಸುತ್ತದೆ ಎಂದರು.
ಕಳೆದ 8 ವರ್ಷಗಳಲ್ಲಿ 48 ಬಾರಿ ಪರೀಕ್ಷೆಗಳನ್ನು ರದ್ದು ತಡೆಲಾಗಿದೆ . ಅಕ್ರಮದಲ್ಲಿ ಭಾಗಿಯಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಅಕ್ರಮ ಆಗದಂತೆ ಪಾರದರ್ಶಕ ಪರೀಕ್ಷೆಗಳಲ್ಲಿ ನಡೆಸಬೇಕು ಎಂದರು.
ಪ್ರತಿಭಟನೆಯಲ್ಲಿ ಮಲ್ಲಪ್ಪ,ಹನುಮಂತರಾಯ, ಮಹೇಶ, ಇಮಾಮ್ ಸಾಬ್, ಮೌನೇಶ, ಪರೀಕ್ಷಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು
ಭಾಗವಹಿಸಿದ್ದರು.
ರವಿಕುಮಾರ್ ವಸ್ತ್ರದ ತಹಶೀಲ್ದಾರರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.