
ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 20- ಹುಬ್ಬಳ್ಳಿಯ ಬಿಯುಬಿ ಕಾಲೇಜು ವಿದ್ಯಾರ್ಥಿ ನೇಹಾ ಹಿರೇಮಠ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಮತ್ತೆ ಇಂತಹ ಕೃತ್ಯಗಳನ್ನು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಉಪ್ಪಾರ್ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿಗಳವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಉಪ್ಪಾರ್ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಉಳೂರು ಅವರ ನೇತೃತ್ವದ ನಿಯೋಗ ಘಟನೆ ಖಂಡಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಉಳೂರು ಅವರು ಮಾತನಾಡಿ, ಕಾಲೇಜಿನ ಎಂಸಿಎ ವಿಧ್ಯಾರ್ಥಿ ನೇಹಾ ಹಿರೇಮಠ್ ಪರೀಕ್ಷೆ ಬರೆಯಲು ತೆರಳಿದ್ದ ವೇಳೆ, ದುಷ್ಕರ್ಮಿ ಫಯಾಜ್ ಎನ್ನುವ ವ್ಯಕ್ತಿ ಹಾಡು ಹಗಲೇ ಕಾಲೇಜು ಆವರಣದಲ್ಲಿ ಮನಬಂದಂತೆ ಚಾಕುವಿನಿಂದ ಬರ್ಬರವಾಗಿ ಹತ್ಯೇ ಮಾಡಿರುವುದು ಅತ್ಯಂತ ಖಂಡನೀಯ, ಇಂತಹ ದುಷ್ಕರ್ಮಿಗಳ ಬಗ್ಗೆ ಯಾವುದೇ ಅನುಕಂಪ ತೋರಿಸದೇ ಕಠಿಣ ಕಾನೂನು ಕ್ರಮ ಜರುಗಿಸಿ, ಉಗ್ರ ಶಿಕ್ಷೆ ವಿಧಿಸಬೇಕು, ಈ ಕೃತ್ಯಕ್ಕೆ ಸಹಕರಿಸಿದ ಯಾವುದೇ ವ್ಯಕ್ತಿಗಳಿರಲಿ ಯಾರ ಮೇಲೂ ಅನುಕಂಪ ತೋರದೇ, ಎಲ್ಲರನ್ನೂ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮಕ್ಕೆ ಮುಂದಾಗಬೇಕು, ಈ ಪ್ರಕರಣವನ್ನು ಎನ್ ಐಎ ಮೂಲಕ ತನಿಖೆ ನಡೆಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಆರ್.ಆನಂದ್ ಯಾದವ್, ಗುರುಮೂರ್ತಿ ಬಿ., ಕೆ. ಗಾದಿಲಿಂಗ, ಜಿ.ವೆಂಕಟೇಶ, ಮಾರೆಣ್ಣ ಸೇರಿದಂತೆ ಇತರರು ಇದ್ದರು.