
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ
ದ್ವೇಷ ಅಳಿಸಿ-ದೇಶ ಉಳಿಸಿ ಅಭಿಯಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ರಾಜ್ಯದಲ್ಲಿ ಶಾಂತಿ ನೆಲೆಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ದ್ವೇಷ ಅಳಿಸಿ-ದೇಶ ಉಳಿಸಿ ಅಭಿಯಾನ ಹಮಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲೂ ಜಾಗೃತಿ ನಡೆಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ ಹುಸೇನ್ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ದೇಶ, ರಾಜ್ಯದಲ್ಲಿ ದ್ವೇಷ ಮತ್ತು ಸುಳ್ಳಿನ ರಾಜಕೀಯ ವಿರುದ್ಧ ನಾವೆಲ್ಲ ಹೋರಾಡಬೇಕಿದೆ.
ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಎಲ್ಲ ಜಾತಿ, ಧರ್ಮದ ಜನರು ನೆಮ್ಮದಿಯಿಂದ ಇದ್ದಾರೆ. ಆದರೆ, ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಧರ್ಮ, ಸಮುದಾಯದ ವಿರುದ್ಧ ಸುಳ್ಳು ಆರೋಪ, ಕೋಮು ಪ್ರಚೋದನೆ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ನೆಮ್ಮದಿ ಹಾಳಾಗುತ್ತಿದೆ. ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.1ರಿಂದ 10ವರೆಗೆ ಅಭಿಯಾನ ಹಮ್ಮಿಕೊಂಡಿದ್ದೇವೆ. ದ್ವೇಷ ರಾಜಕೀಯದಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಿಗೆ ಅರಿವು ಮೂಡಿಸುತ್ತಿದ್ದೇವೆ. ರಾಜ್ಯದಲ್ಲಿ ಸರ್ಕಾರಗಳು ಮಾತ್ರ ಬದಲಾಗಿವೆ. ಆದರೆ, ತುಷ್ಟೀಕರಣ, ಒಂದು ಸಮುದಾಯ, ಧರ್ಮದವರನ್ನು ಒಲೈಸುವುದು, ಮತ್ತೊಬ್ಬರನ್ನು ನಿಂದಿಸುವುದು ಮುಂದುವರೆದಿದೆ. ಇದರ ಬಗ್ಗೆ ಕರಪತ್ರ ಹಂಚುವಿಕೆ, ವಿಚಾರ ಗೋಷ್ಠಿ, ಸಾರ್ವಜನಿಕ ಸಭೆ, ಬೀದಿ ನಾಟಕ, ಜಾಥಾ, ಬೈಕ್ ರ‌್ಯಾಲಿ ಮೂಲಕ ಜಾಗೃತಿ ಮೂಡಿಸುತ್ತೇವೆ ಎಂದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ ಅಲೀಮುದ್ದೀನ್, ಜಿಲ್ಲಾಧ್ಯಕ್ಷ ಆದಿಲ್ ಪಟೇಲ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಬಿಯಾ ಪಟೇಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಮಾ ಜಹಾಂ, ಸಂಚಾಲಕ ಏಜಾಜ್ ಶೇಖ್ ಸೇರಿದಂತೆ ಅನೇಕರು ಇದ್ದರು.