
ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ ತಡೆಯುವಂತೆ ಆಗ್ರಹ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 2- ಸರಕಾರಿ ಮಹಾವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ಕೊರತೆ ಹಿನ್ನೆಲೆ ರಾಜ್ಯದ ಉನ್ನತ ಹಾಗೂ ಕಾಲೇಜು ಶಿಕ್ಷಣ ಇಲಾಖೆ ತಾತ್ಕಲಿಕವಾಗಿ ಅರ್ಹತೆ ಇರುವವರನ್ನು ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿದ್ದು ಕೊಪ್ಪಳ ಜಿಲ್ಲೆಯ ಕೆಲ ಸರಕಾರಿ ಮಹಾವಿದ್ಯಾಲಯಗಳಲ್ಲಿ ಅಕ್ರಮವಾಗಿ ಅತಿಥಿ ಉಪನ್ಯಾಸಕರನ್ನು ಕೆಲ ಪ್ರಾಚಾರ್ಯರು ನೇಮಕಾತಿ ಮಾಡಿಕೊಂಡು ಸರಕಾರಕ್ಕೆ ಲಕ್ಷಾಂತರ ರೂ. ನಷ್ಟವುಂಟು ಮಾಡುತ್ತಿದ್ದು ಸರಕಾರ ಕೂಡಲೇ ತಪ್ಪು ಕಂಡು ಹಿಡಿದು ಪ್ರಾಚಾರ್ಯರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಉನ್ನತ ಶಿಕ್ಷಣ ಇಲಾಖೆಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ತಿಳಿಸಿದ್ದಾರೆ.
ನಿರುದ್ಯೋಗಿ ಅರ್ಹತೆ ಇರುವ ಪದವೀಧರರಿಗೆ ಅನ್ಯಾಯವಾಗಿದ್ದು ಕೆಲ ಕಾಲೇಜುಗಳಲ್ಲಿ ಪೂರ್ಣಾವಧಿಯಾಗಿ ಪ್ರಾಚಾರ್ಯರು, ಉಪನ್ಯಾಸಕರಾಗಿ ನೇಮಕಗೊಂಡು ಸರಕಾರಿ ಮಹಾವಿದ್ಯಾಲಯಗಳಲ್ಲಿಯೂ ಪೂರ್ಣಾವಧಿ ಅತಿಥಿ ಉಪನ್ಯಾಸಕರೆಂದು ನೇಮಕಗೊಂಡು ಅನ್ಯರಿಂದ ಪಾಠ ಮಾಡಿಸುತ್ತಿರುವ ಕುರಿತು ದೂರುಗಳಿದ್ದು ಉನ್ನತ ಶಿಕ್ಷಣ ಇಲಾಖೆ ಇಂತಹ ಪ್ರಕರಣ ಪತ್ತೆ ಮಾಡಿ ನೇಮಕಾತಿ ರದ್ದು ಮಾಡುವ ಜತೆಗೆ ಪಡೆದ ವೇತನ ವಾಪಸ್ ಪಡೆಯಬೇಕು. ಸರಕಾರಿ ಮಹಾವಿದ್ಯಾಲಯಗಳು ಹಾಗೂ ಖಾಸಗಿ ಕಾಲೇಜುಗಳಲ್ಲಿ ಎರಡರಲ್ಲೂ ಪೂರ್ಣಾವಧಿ ಕೆಲಸ ಮಾಡವುದು ತಪ್ಪಾಗುತ್ತದೆ.
ಅರ್ಹತೆ ಇರುವವರಿಗೆ ಇದರಿಂದ ಅನ್ಯಾಯವಾಗುತ್ತದೆ.ಪೂರ್ಣಾವಧಿಯಾಗಿ(೧೯ ಅವಧಿಗಳ ಪಾಠ ಮಾಡುವುದು) ನೇಮಕಗೊಂಡ ಅತಿಥಿ ಉಪನ್ಯಾಸಕರು ಸರಕಾರಿ ಕಾಲೇಜುಗಳಿಗೆ ಆಗಮಿಸಿ ಹಾಜರಿ ಹಾಕಿ ಖಾಸಗಿ ಕಾಲೇಜಿಗೆ ತೆರಳಿ ಅಲ್ಲಿ ಪೂರ್ಣಾವಧಿ ಕಾರ್ಯ ಮಾಡುತ್ತಾರೆ. ಸರಕಾರಿ ಕಾಲೇಜುಗಳಲ್ಲಿ ನಡೆಯುವ ವಾರ್ಷಿಕ ಪರೀಕ್ಷೆ, ವಿವಿಧ ನೇಮಕಾತಿ ಪರೀಕ್ಷೆ ಹಾಗೂ ಇತರೆ ಪಠೇತರ ಕಾರ್ಯಗಳಲ್ಲಿ ಪಾಲ್ಗೊಳ್ಳದೇ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವ ಕುರಿತು ವ್ಯಾಪಕ ದೂರುಗಳಿದ್ದು ಸರಕಾರ ಕೂಡಲೇ ನೇಮಕಾತಿ ರದ್ದು ಮಾಡಿ ನಿರುದ್ಯೋಗಿ ಅರ್ಹ ಪದವೀಧರರಿಗೆ ಅತಿಥಿ ಉಪನ್ಯಾಸಕರ ಹುದ್ದೆ ನೀಡುವಂತೆ ಒತ್ತಾಯಿಸಿದ್ದಾರೆ.