
ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆಯ ಮತದಾನಕ್ಕೆ ಅಗತ್ಯ ಸಿದ್ಧತೆ : ಎಂ.ಎಸ್.ದಿವಾಕರ
ಕರುನಾಡ ಬೆಳಗು ಸುದ್ದಿ
ವಿಜಯನಗರ, 31- ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆಯ ಮತದಾನವು ಜೂನ್ 3ರಂದು ವಿಜಯನಗರ ಜಿಲ್ಲೆಯ 6 ತಾಲೂಕಿನ ಒಟ್ಟು 21 ಮತಗಟ್ಟೆ ಕೇಂದ್ರಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಜಯನಗರ ಜಿಲ್ಲೆಯ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಮೇ 30ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಪದವೀಧರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 15 ಮತಗಟ್ಟೆಗಳು ಮತ್ತು 5880 ಮತದಾರರು ಇದ್ದರು. ಈ ಬಾರಿ ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆಯ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಬಗ್ಗೆ ಉತ್ತಮವಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರ, ಹೊಸಪೇಟೆ, ಹರಪನಹಳ್ಳಿ ಮತ್ತು ಕೂಡ್ಲಿಗಿ ತಾಲೂಕುಗಳ ವ್ಯಾಪ್ತಿಯಲ್ಲಿನ ಒಟ್ಟು ಪುರುಷ ಮತದಾರರು 11,895 ಹಾಗೂ ಮಹಿಳಾ ಮತದಾರರು 6336 ಮತ್ತು ಇತರೆ ಇಬ್ಬರು ಸೇರಿ ಒಟ್ಟು 18,233 ಮತದಾರರು ಮತದಾನ ಮಾಡಲು ಅರ್ಹರಿದ್ದಾರೆ ಎಂದು ಅವರು ತಿಳಿಸಿದರು.
ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆಯ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಒಟ್ಟು 21 ಮತಗಟ್ಟೆ ಕೇಂದ್ರಗಳಲ್ಲಿ ಲೈವ್ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ 6 ತಾಲೂಕುಕುಗಳ ಕಚೇರಿಯಲ್ಲಿ ಮತದಾರ ಸಹಾಯವಾಣಿ ಕೇಂದ್ರ ಇದ್ದು ಹರಪನಹಳ್ಳಿ-08398280262., ಹಡಗಲಿ -08399-240238., ಹೊಸಪೇಟೆ-08394-224208., ಕೂಡ್ಲಿಗಿ -08391297121., ಕೊಟ್ಟೂರು-08391-225400 ಮತ್ತು ಹೆಚ್.ಬಿ.ಹಳ್ಳಿ-914662854 ಇದ್ದು ಈ ಸಹಾಯವಾಣಿ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಜಯನಗರ ಜಿಲ್ಲೆಯ 21 ಮತಗಟ್ಟೆ ಕೇಂದ್ರಗಳ ಮಾಹಿತಿಯನ್ನು ಮತದಾರದಾರರಿಗೆ ನೀಡಲಾಗಿದೆ. ಜೊತೆಗೆ ಮತದಾರ ಚೀಟಿಯನ್ನು ಸಹ ವಿತರಣೆ ಮಾಡಲಾಗಿದೆ. ಮತದಾರರ ಚೀಟಿಯಲ್ಲಿ ಮತಗಟ್ಟೆ ಮಾಹಿತಿಯ ಸಂಪೂರ್ಣ ವಿವರಣೆ ಮತ್ತು ಮತಗಟ್ಟೆ ಕೇಂದ್ರಗಳ ಕ್ಯೂಆರ್ ಕೋಡ್ ಜಾರಿ ಮಾಡಲಾಗಿದೆ.
ಮತದಾನ ಅಧ್ಯಾತಾನುಸಾರ ಚಲಾವಣೆ ಮಾಡಬೇಕಾಗಿರುತ್ತದೆ. ಅದಕ್ಕೆ ಮತದಾನ ಚಲಾವಣೆ ಕುರಿತು ಜಿಲ್ಲಾಮಟ್ಟದ ಸ್ವೀಪ್ ಸಮಿತಿಯಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಭಾರತ ಚುನಾವಣೆ ಆಯೋಗವು ಮತ ಚಲಾವಣೆಗಾಗಿ ನೀಡಿರುವ ನೇರಳೆ ಬಣ್ಣದ ಸ್ಕೇಚ್ ಪೇನ್‌ಗಳ ಮೂಲಕ ಮಾತ್ರ ಮತ ಚಲಾವಣೆ ಮಾಡಬೇಕಾಗಿರುತ್ತದೆ.
ಮತದಾನ ದಿನದಂದು ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಸಹಾಯವಾಣಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರಕ್ಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪದವೀಧರ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ಮತಗಟ್ಟೆ ಇರುವ ಪ್ರದೇಶದ ವ್ಯಾಪ್ತಿಯಲ್ಲಿ ಚುನಾವಣೆಯು ಶಾಂತಿ ಹಾಗೂ ಮುಕ್ತ ನ್ಯಾಯಸಮ್ಮತವಾಗಿ ನಡೆಯುವ ಸಂಭಂದ ಜೂನ್ 1ರ ಸಂಜೆ 6 ಗಂಟೆ ಯಿಂದ ಜೂನ್ 3ರ ಮಧ್ಯರಾತ್ರಿವರೆಗೆ ಸಿಆರ್‌ಪಿಸಿ ಕಲಂ 144 ರಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಪದವೀಧರ ಮತಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕತ ಹಾಗೂ ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯೋಗಿಕ ಸಂಸ್ಥೆಗಳಲ್ಲಿ ಮತ್ತು ಇತರ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲುರುವ ಮತದಾರರಿಗೆ ಜೂನ್ 03ರ ಸೋಮವಾರ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಮೇ 29ರಂದು ಹೊರಡಿಸಿದ ಕರ್ನಾಟಕ ಸರ್ಕಾರದ ಅಧಿಸೂಚನೆಯಲ್ಲಿ ಆದೇಶಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ, ಚುನಾವಣಾ ಶಾಖೆಯ ಮನೋಜ್ ಲಾಡೆ ಇದ್ದರು.