
ಪರಿಶಿಷ್ಟ ವರ್ಗ ಅಲ್ಲದವರಿಗೆ ಜಾತಿ ಪ್ರಮಾಣ ಪತ್ರ ಕೊಡಬಾರದು : ವಾಲ್ಮೀಕಿ ಸಂಘ ಆಗ್ರಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯ ಬೆಂಗಳೂರು ರಿಟ್ ಪಿಟಿಷನ್ 13777/23 ರಡಿ ನೀಡಿರುವ ಮಧ್ಯಂತರ ಆದೇಶ ಮಾ.212021 ಅನ್ನು ಜಾರಿ ಮಾಡುವ ಕುರಿತು ಜಿಲ್ಲಾಧಿಕರಿಗಳಿಗೆ ಅಪರ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ವಾಲ್ಮೀಕಿ ಮಹಾಸಭಾದಿಂದ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ವಿಪರೀತವಾಗಿದ್ದು ಇಂತಹ ಪ್ರಕರಣಗಳ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ನಾವು ನೀಡಿದ್ದ ಮನವಿ ಮೇಲೆ ಜಿಲ್ಲಾಧಿಕಾರಿಗಳಾಗಲಿ/ತಹಸೀಲ್ದಾರರಾಗಲಿ ಕ್ರಮ ತೆಗೆದುಕೊಳ್ಳದೇಯಿರುವುದರಿಂದ ಸಾವಿರಾರು ಕೊಟ್ಟಿ ಜಾತಿ ಪ್ರಮಾಣ ಪತ್ರಗಳು ವಿತರಣೆಯಾಗಿ ನೈಜ ಪರಿಶಿಷ್ಟ ವರ್ಗದವರಿಗೆ ಸಾಂವಿಧಾನಿಕವಾಗಿ ಲಭ್ಯವಾಗಬೇಕಿದ್ದ ಸೌಲಭ್ಯಗಳು ಅನ್ಯರ ಪಾಲಾಗಿರುವುದನ್ನು ಗಮನಿಸಲಾಗಿದ್ದು ಬೇರೆ ದಾರಿಯಿಲ್ಲದೆ ಉಚ್ಚನ್ಯಾಯಾಲಯದ ಮೊರೆ ಹೋಗಲಾಗಿತ್ತು.
ಕರ್ನಾಟಕ ಉಚ್ಚನ್ಯಾಲಯವು ಡಬ್ಲ್ಯುಪಿ 13777/23 ರಲ್ಲಿ ಮಾ.21 ರಂದು ಮಧ್ಯಂತರ ತೀರ್ಪು ನೀಡಿದ್ದು ಅದರ ಪ್ರತಿಯನ್ನು ಸಹ ಲಗತ್ತಿಸಿ ತುರ್ತಾಗಿ ಕ್ರಮವಹಿಸಿ ವಾಲ್ಮೀಕಿ ನಾಯಕ ಉಪ ಪಂಗಡಗಳಾದ ನಾಯಕ ಪರಿವಾರ ಮತ್ತು ನಾಯಕ ತಳವಾರ ಹೊರತುಪಡಿಸಿ ಬೇರೆ ಜಾತಿಗಳಲ್ಲಿ ಬರುವ ಪರಿವಾರ ಮತ್ತು ತಳವಾರ ಜಾತಿಗಳಿಗೆ ಪರಿಶಿಷ್ಟ ವರ್ಗ ಪ್ರಮಾಣ ಪತ್ರ ನೀಡಿರುವದನ್ನು ಹಿಂಪಡಿಯಬೇಕು ಮತ್ತು ಯಾವುದೇ ಕಾರಣಕ್ಕೂ ಮುಂದೆ ಅಂತಹ ಪತ್ರಗಳ ವಿತರಣೆ ಆಗದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಉಚ್ಚನ್ಯಾಲಯದ ಆದೇಶದಂತೆ ಕೂಡಲೆ ಕ್ರಮ ತೆಗೆದುಕೊಂಡು ವಾಮ ಮಾರ್ಗದಿಂದ ನೈಜ ಪರಿಶಿಷ್ಟ ವರ್ಗಕ್ಕೆ ಸೇರಿಲ್ಲದವರು ಈಗಾಲೇ ತೆಗೆದುಕೊಂಡಿರುವ ಕೊಟ್ಟಿ ಜಾತಿ ಪತ್ರಗಳನ್ನು ಕೂಡಲೇ ವಜಾ ಮಾಡಬೇಕು. ಹಾಗೂ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗ (ನೇಮಕಾತಿಗಳಲ್ಲಿ ಇತರೆ ಮೀಸಲಾತಿ) ಅಧಿನಿಯಮ, ೧೯೯೦ ಮತ್ತು ಅದರಡಿ ಬರುವ ನಿಯಮಗಳಡಿ ಕ್ರಮ ತೆಗೆದುಕೊಂಡು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲು ಹಾಗೂ ಸಾಂವಿಧಾನಿಕವಾಗಿ ಲಭ್ಯವಿರುವ ಸೌಲಭ್ಯಗಳು ನೈಜ ಪರಿಶಿಷ್ಟ ವರ್ಗದವರಿಗೆ ಸಿಕ್ಕಿ ಅವರ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಲು ಕೋರಿದೆ.
ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಕಾಂಗ್ರೆಸ್ ಎಸ್.ಟಿ. ಘಟಕ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ, ರಾಮಣ್ಣ ಬೆಳವಿನಾಳ, ರಮೇಶ ಚೌಡಕಿ, ಬಸವರಾಜ, ಚನ್ನಪ್ಪ, ಹನುಮಂತಪ್ಪ, ಈರಪ್ಪ ನಾಯಕ, ಉಮೇಶ ನಾಯಕ ಫಕೀರಪ್ಪ ನಾಯಕ, ಕೆಂಚಪ್ಪ ತಳವಾರ ಬೆಟಗೇರಿ, ಮಹೇಶ ನಾಯಕ, ಪಂಪಣ್ಣ ಇತರರು ಇದ್ದರು.