IMG-20240212-WA0015

ಪರೀಕ್ಷೆಯ ವಿವಿಧ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಪರಿಗಣನೆಗೆ ಆಗ್ರಹ : ಕೊಪ್ಪಳ ವಿವಿ ಕುಲಸಚಿವರಿಗೆ ಮನವಿ ಸಲ್ಲಿಕೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,12- ಕೊಪ್ಪಳ ವಿಶ್ವವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಿದ್ದು, ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆಯ ಸಿದ್ಧತಾ ಕಾರ್ಯಗಳು ಶುರುವಾಗಿದ್ದು, ಈ ಚಟುವಟಿಕೆಗಳಿಗೆ ಅತಿಥಿ ಉಪನ್ಯಾಸಕರನ್ನು ಸಹ ಪರಿಗಣಿಸುವಂತೆ ಅತಿಥಿ ಉಪನ್ಯಾಸಕರ ಜಿಲ್ಲಾ ಸಂಘಟನೆಯ ಮುಖಂಡರು ಅಗ್ರಹಿಸಿದರು.

ಕುಕನೂರು ತಾಲೂಕಿನ ತಳಕಲ್‌ನಲ್ಲಿ ಇರುವ ವಿವಿ ಕಚೇರಿಗೆ ಭೇಟಿ ನೀಡಿದ ಅತಿಥಿ ಉಪನ್ಯಾಸಕ ಸಂಘಟನೆಯ ಮುಖಂಡರು, ಕುಲ ಸಚಿವ ಪ್ರಸಾದ್ ಅವರಿಗೆ ವಿವಿ ವ್ಯಾಪ್ತಿಯ ಪರೀಕ್ಷಾ ಕಾರ್ಯಗಳಲ್ಲಿ ತಮ್ಮ ಸೇವೆ ಪರಿಗಣಿಸುವಂತೆ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಡಾ.ವೀರಣ್ಣ ಸಜ್ಜನರ್ ಮಾತನಾಡಿ, ಸುಮಾರು 15-20 ವರ್ಷಗಳ ಸೇವಾ ಹಿರಿತನ, ಶೈಕ್ಷಣಿಕ ಅರ್ಹತೆ ಹೊಂದಿರುವ ಅನೇಕ ಅತಿಥಿ ಉಪನ್ಯಾಸಕರು ಸದ್ಯ ಸೇವೆಯಲ್ಲಿದ್ದು, ಹಿಂದಿನ ವಿವಿಗಳ ಪರೀಕ್ಷಾ ಕಾರ್ಯಗಳಡಿ ಪಠ್ಯಕ್ರಮ ರಚನೆ, ಪ್ರಶ್ನೆ ಪತ್ರಿಕೆ ತಯಾರಿಕೆ, ಆಂತರಿಕ ಮತ್ತು ಬಾಹ್ಯ ಸಂವೀಕ್ಷಕರು, ಪರೀಕ್ಷಾ ಕೊಠಡಿ, ಸಂವಿಕ್ಷಕರು, ಮೌಲ್ಯಮಾಪಕರಾಗಿಯೂ ಕಾರ್ಯ‌ನಿರ್ವಹಿಸಿದ ನಿದರ್ಶನಗಳಿವೆ. ಪ್ರಸ್ತುತ ಕೊಪ್ಪಳ ವಿವಿ ಪ್ರಥಮ ಬಾರಿಗೆ ಪದವಿ ಮೊದಲ ಸೆಮೆಸ್ಟರ್ ಪರೀಕ್ಷೆಗೆ ಅಣಿಯಾಗುತ್ತಿದ್ದು, ಪರೀಕ್ಷೆಯ ಸಿದ್ಧತೆ ಕಾರ್ಯಗಳಲ್ಲಿ ಉದಾಸೀನ ಮಾಡಿರುವುದು ಕಂಡು ಬಂದಿದೆ. ಪ್ರಶ್ನೆ ಪತ್ರಿಕೆ ಸಿದ್ಧತೆ ಸೇರಿದಂತೆ ಪರೀಕ್ಷೆಯ ವಿವಿಧ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರನ್ನು ಪರಿಗಣಿಸಬೇಕು. ನಿರ್ಲಕ್ಷ್ಯ ಮುಂದುವರಿಸಿದರೆ ಪರೀಕ್ಷಾ ಕೊಠಡಿ ಸಂವಿಕ್ಷಣೆ, ಮೌಲ್ಯಮಾಪನ ಕಾರ್ಯ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಕುಲಸಚಿವ ಪ್ರಸಾದ್ ಅವರು ಮಾತನಾಡಿ, ಅತಿಥಿ ಉಪನ್ಯಾಸಕರ ಮನವಿಯನ್ನು ಕುಲಪತಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಈ ವೇಳೆ ಸಂಘಟನೆಯ ಮುಖಂಡರಾದ ಡಾ.ಪ್ರಕಾಶ್ ಬಳ್ಳಾರಿ, ಶಿವಬಸಪ್ಪ ಮಸ್ಕಿ, ಡಾ.ಮಹಾಂತೇಶ ನೆಲಾಗಣಿ, ಬಸವರಾಜ ಕರುಗಲ್, ವಿಜಯಕುಮಾರ್ ಕುಲಕರ್ಣಿ, ಡಾ.ತುಕಾರಾಂ ನಾಯಕ್, ಶಿವಮೂರ್ತಿ ಗುತ್ತೂರು, ಜ್ಞಾನೇಶ್ವರ ಪತ್ತಾರ, ಡಾ.ಸಣ್ಣ ದೇವೇಂದ್ರಸ್ವಾಮಿ, ರವಿ ಹಿರೇಮಠ, ನಾಗರಾಜ ದೊರೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!