
ಪಿಡಿಓ ಮೇಲೆ ಹಲ್ಲೆ ಪ್ರಕರಣ
ಗ್ರಾ.ಪಂ.ಸದಸ್ಯತ್ವ ರದ್ದು ಮಾಡಲು ಮನವಿ
ಕರುನಾಡು ಬೆಳಗು ಸುದ್ದಿ
ಕೊಪ್ಪಳ, 01- ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಗ್ರಾಮ ಪಂಚಾಯಿತಿಯ ಸದಸ್ಯೆಯ ಸದಸ್ಯತ್ವ ರದ್ದು ಮಾಡಬೇಕು ಹಾಗೂ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಹಾಲುಮತ ಮಹಾಸಭಾ ಸದಸ್ಯರು ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಫೆಬ್ರವರಿ 27ರಂದು ಗ್ರಾಮ ಪಂಚಾಯಿತಿ ಪಿಡಿಓ ರತ್ನಾ ಗುಂಡಣ್ಣವರ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಪಿಎಂಎವೈ ಯೋಜನೆಯ ಮನೆಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಮ್ಮ ಬಂಡಿವಡ್ಡರ್ ಅವರು ತಮ್ಮ ಮಗನೊಂದಿಗೆ ಹಠಾತ್ತನೆ ಒಳಗೆ ನುಗ್ಗಿ ಕರ್ತವ್ಯದ ಮೇಲಿದ್ದ ಪಿಡಿಒ ರತ್ನಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನಿನ್ನ ಜೀವ ಸಹಿತ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಘಟನಾವಳಿಗಳು ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಗ್ರಾಮ ಪಂಚಾಯತಿ ಸದಸ್ಯೆ ಶಾಂತಮ್ಮ ಹಾಗೂ ಅವರ ಮಗನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಅವರ ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದು ಮಾಡಬೇಕು ಎಂದು ಹಾಲುಮತ ಮಹಾಸಭಾ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ, ಉಪಾಧ್ಯಕ್ಷರಾದ ಕುಬೇರ ಮಜ್ಜಿಗಿ, ಹನುಮಂತಪ್ಪ ಹನುಮಾಪೂರ, ಪದಾಧಿಕಾರಿಗಳಾದ ಬಸವರಾಜ ಗುರಿಕಾರ, ಮಂಜುನಾಥ ಬಂಗಾಳಿ, ನಿಂಗಪ್ಪ ಮೂಗಿನ, ದ್ಯಾಮನಗೌಡ ಭೀಮನೂರು, ಬೀರಪ್ಪ ಮೇಟಿ, ಅಂದಾನಸ್ವಾಮಿ ಭೂತಣ್ಣವರ, ಬಸವರಾಜ ಉಂಡಿ, ಮಂಜುಳಾ ಉಂಡಿ, ಶಿಲ್ಪಾ ಗುಡ್ಲಾನೂರ, ಗಂಗಮ್ಮ ಚನ್ನಪ್ಪನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.