
ಪ್ರಯೋಗಾತ್ಮಕ ವಿಜ್ಞಾನ ಕಲಿಕೆ ಹೆಚ್ಚು ಪರಿಣಾಮಕಾರಿ
ನಿವೃತ್ತ ಉಪಪ್ರಾಚಾರ್ಯ ಹಾಗೂ ವಿಜ್ಞಾನ ಶಿಕ್ಷಕ ಚಂದ್ರಕಾಂತಯ್ಯ ಕಲ್ಯಾಣಮಠ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 06- ವಿಜ್ಞಾನ ನಿಂತ ನೀರಲ್ಲ, ಅದೊಂದು ಹರಿಯುವ ನದಿ ಇದ್ದಂತೆ. ಕ್ಷಣ ಕ್ಷಣಕ್ಕೂ ವಿಜ್ಞಾನ ಲೋಕದಲ್ಲಿ ಬದಲಾವಣೆ, ಅನ್ವೇಷಣೆ ನಡೆಯುತ್ತಲೇ ಇರುತ್ತವೆ. ಮಕ್ಕಳು ಎಳೆಯ ವಯಸ್ಸಿನಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಉಪಪ್ರಾಚಾರ್ಯ ಹಾಗೂ ವಿಜ್ಞಾನ ಶಿಕ್ಷಕ ಚಂದ್ರಕಾಂತಯ್ಯ ಕಲ್ಯಾಣಮಠ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪದವಿ ಪೂರ್ವ (ಪ್ರೌಢ ವಿಭಾಗ) ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಜ್ಞಾನ ಪ್ರಯೋಗಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅನ್ವೇಷಣೆ ನಡೆಯಲು ಪ್ರಯೋಗಗಳೇ ತಳಹದಿ. ಪ್ರಯೋಗಗಳು ಕಲಿಕೆಯನ್ನು ಸುಲಭಗೊಳಿಸುವುದಲ್ಲದೇ ಹೆಚ್ಚು ಪರಿಣಾಮಕಾರಿಯಾಗಿಸುತ್ತವೆ. ವಿದ್ಯಾರ್ಥಿಗಳು ಪ್ರಯೋಗಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ ಪ್ರಯೋಜನ ಪಡೆಯಬೇಕು. ಕಾರ್ಯಾಗಾರದ ಪ್ರಯೋಜನೆ ಫಲಿತಾಂಶದಲ್ಲಿ ಪ್ರತಿ ಫಲಿತವಾಗಲಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಉಪಪ್ರಾಚಾರ್ಯ ಬಾಬುಸಾಬ್ ಲೈನದಾರ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಾಲೆಯಲ್ಲಿ ಹತ್ತು ಹಲವು ಯೋಜನೆಗಳನ್ನು ಶಾಲಾ ಹಂತದಲ್ಲಿ ರೂಪಿಸಲಾಗಿದೆ. ಅವುಗಳನ್ನೆಲ್ಲಾ ಹಂತ ಹಂತವಾಗಿ ಅನುಷ್ಠಾನ ಮಾಡುತ್ತಾ ಕೊನೆಯದಾಗಿ ವಿಜ್ಞಾನ ಪ್ರಯೋಗಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ವಿಜ್ಞಾನ ಶಿಕ್ಷಕ ದೇವೇಂದ್ರ ಜಿರ್ಲಿ ಮಾತನಾಡಿ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ಪ್ರಮುಖ ಪ್ರಯೋಗಗಳು, ಚಟುವಟಿಕೆಗಳು, ಚಿತ್ರಗಳು ಮತ್ತು ಕಲಿಕಾಂಶಗಳನ್ನು ಮತ್ತೊಮ್ಮೆ ಪುನರಾವಲೋಕನ ಮತ್ತು ಪುನರ್ಮನನ ಮಾಡುವ ದೃಷ್ಟಿಯಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯಲು ನೆರವಾಗಲಿದೆ. ಇಲಾಖೆಯ ಹತ್ತು ಹಲವು ಯೋಜನೆಗಳಾದ ೨೦ ಅಂಶಗಳ ಕಾರ್ಯಕ್ರಮ, ವಾರದ ಪ್ರಶ್ನೆಗಳು, ಪ್ರಾರ್ಥನಾ ಪ್ರಶ್ನೋತ್ತರಗಳು, ಪ್ಲ್ಯಾನ್ 100, ದಿನಕ್ಕೊಂದು ವಿಜ್ಞಾನ ಚಿತ್ರ ಸೇರಿದಂತೆ ಹಲವು ಯೋಜನೆಗಳಲ್ಲಿ ಇದೂ ಒಂದಾಗಿದೆ. ಇದರ ಸದ್ವಿನಿಯೋಗ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದೆ ವೇಳೆ ಸಂಪನ್ಮೂಲ ವ್ಯಕ್ತಿ ಪ್ರಕಾಶ ಬಂಡಿ, ವಿದ್ಯಾರ್ಥಿಗಳಾದ ಶರಣಪ್ಪ ಕುದರಿಮೋತಿ, ಅಫ್ರೀನ್ ಮಾತನಾಡಿದರು. ವಿದ್ಯಾರ್ಥಿಗಳಾದ ಸಹನಾ, ನಿಖಿತಾ, ಬಸಮ್ಮ ಉಳ್ಳಾಗಡ್ಡಿ ಸೇರಿದಂತೆ ಮತ್ತಿತರರು ಇದ್ದರು.