
ಫೆ. 2, 3, 4 ಹಂಪಿ ಉತ್ಸವ
ಸಚಿವ ಜಮೀರ್ ಅಹಮದ್ ಖಾನ್
ಕರುನಾಡ ಬೆಳಗು ಸುದ್ದಿ
ಹೊಸಪೇಟೆ , ೨೬- ವಿಶ್ವ ವಿಖ್ಯಾತ ಹಂಪಿ ಉತ್ಸವ ಫೆಬ್ರವರಿ 2 ರಿಂದ ಮೂರು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 2,3,4, ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ಒಪ್ಪಿಗೆ ನೀಡಿದ್ದಾರೆ ಎಂದು ವಿಜಯ ನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು ಮುಖ್ಯಮಂತ್ರಿಗಳು ಮೊದಲ ದಿನ ಉತ್ಸವ ಉದ್ಘಾಟನೆ ಮಾಡಲಿದ್ದಾರೆ. ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಧಿಕಾರಿ ದಿವಾಕರ್ ಅವರಿಗೆ ಈ ಬಾರಿಯ ಹಂಪಿ ಉತ್ಸವ ವಿಜೃಂಭಣೆ ಯಿಂದ ಮಾಡುವಂತೆ ಹಾಗೂ ಸ್ಥಳೀಯ ಕಲಾವಿದರು ಹಾಗೂ ಸಾಂಸ್ಕೃತಿಕ ಕಲೆ ಗಳಿಗೆ ಒತ್ತು ನೀಡಲು ಉಸ್ತುವಾರಿ ಸಚಿವರು ನಿರ್ದೇಶನ ನೀಡಿದ್ದಾರೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಸಾಂಸ್ಕೃತಿಕ ವಲಯದವರನ್ನು ಜತೆಗೂಡಿಸಿಕೊಂಡು ಉತ್ಸವ ಯಶಸ್ವಿಗೊಳಿಸಲು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಂಪಿ ಉತ್ಸವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಶಾಸಕರು ಸೇರಿ ಜನಪ್ರತಿನಿಧಿಗಳನ್ನು ಒಳಗೊಂಡಂತೆ ಸದ್ಯದಲ್ಲೇ ಸಭೆ ಸಹ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.