
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದಲ್ಲಿ ಮಂಜೂರಾತಿಗಾಗಿ ಬಾಕಿ ಉಳಿದಿರುವ ಅರ್ಜಿಗಳನ್ನುಶೀಘ್ರದಲ್ಲಿಇತ್ಯರ್ಥಗೊಳಿಸಲಾಗುದು : ಶಾಸಕ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,1- ಇಂದು ಕೊಪ್ಪಳದ ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಮೊದಲನೆ ಸಭೆಯು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕೊಪ್ಪಳ ತಾಲ್ಲೂಕಿನಲ್ಲಿ ಸ್ವೀಕೃತವಾದ ನಮೂನೆ 57 ರ ಅರ್ಜಿಗಳನ್ನು ಪರಿಶೀಲಿಸಿ ಮಂಜೂರಾತಿ ನೀಡುವದಕ್ಕೆ ಸಂಬಂಧಿಸಿದಂತೆ ಭೂ ಕಂದಾಯ 108 ಸಿ.ಪಿ.ಸಿ ಅಡಿಯಲ್ಲಿ ಅನಧಿಕೃತ ಸಾಗುವಳಿ ಸಕ್ರಮಗೊಳಿಸಲು ಕೋರಿ ಬಂದ ನಮೂನೆ-57 ರಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಕೊಪ್ಪಳ ಹೋಬಳಿಯ ಲಾಚನಕೇರಿಯ 01 ಅರ್ಜಿ ಹಾಗೂ ಹಿಟ್ನಾಳ ಹೋಬಳಿಯ ಮಹ್ಮದ್ ನಗರದ 12 ಅರ್ಜಿಗಳನ್ನು ಮಂಜೂರಾತಿ ಮಾಡಲಾಗಿದೆ.
ಬಗರ್ ಹುಕುಂ ಸಾಗುವಳಿ ಸಮಿತಿ ರಚನೆ ಮಾಡಿ ಆದೇಶಿಸಲ್ಪಟ್ಟ ಕಳೆದ ಒಂಬತ್ತು ತಿಂಗಳಿನಿಂದ ಈವರೆಗೆ ಒಟ್ಟು 709 ಅರ್ಜಿಗಳು ಈ ವರೆಗೆ ಸಲ್ಲಿಕೆ ಯಾಗಿದ್ದು, 365 ಅರ್ಜಿಗಳು ಅನುಮೋದನೆಗಾಗಿ ಈಗ ಸಮಿತಿಯ ಮುಂದಿದ್ದು ಆ ಪೈಕಿ ಈಗ 13 ಅರ್ಜಿಗಳನ್ನು ಮಂಜೂರಾತಿ ಮಾಡಲಾಗಿದೆ,ಇನ್ನುಳಿದ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ಭೂಮಾಪನ ಇಲಾಖೆಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಮಾನ್ಯ ಶಾಸಕರು ಸೂಚಿಸಿದರು, ಬಾಕಿ ಉಳಿದಿರುವ ಅರ್ಜಿಗಳ ಮಂಜೂರಾತಿಗಾಗಿ ಮುಂದಿನ ಸಭೆಗಳಲ್ಲಿ ತಹಶೀಲ್ದಾರರು ಹಾಗೂ ಸಮಿತಿಯ ಸಹಸದಸ್ಯರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಗೊಳಿಸಲಾಗುವುದು ಎಂದು ಮಾನ್ಯ ಶಾಸಕರು ತಿಳಿಸಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವಕ್ಕೊಳಗಾಗಿರುವ ಟಣಕನಕಲ್, ಹೊಸಹಳ್ಳಿ, ಕವಲೂರು, ಗುಡಿಗೇರಿ ಗ್ರಾಮಗಳಲ್ಲಿ 4 ಲಕ್ಷಕ್ಕೂ ಅಧಿಕ ಮೊತ್ತದ ವೆಚ್ಚದಲ್ಲಿ 5000 ಲೀ ಸಾಮರ್ಥ್ಯದ ಟ್ಯಾಂಕರ್ ಗಳ ಮೂಲಕ ಪ್ರತಿದಿನ 34 ಟ್ರಿಪ್ ನಂತೆ ನೀರು ಸರಬರಾಜು ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಯಂಕಪ್ಪ ಹೊಸಳ್ಳಿ, ವಿಶಾಲಾಕ್ಷಿ ವಿಜಯಕುಮಾರ್ ಮಾಲಿಪಾಟೀಲ್, ಸಿದ್ರಾಮಪ್ಪ ಭಟ್, ತಹಶೀಲ್ದಾರರು ವಿಠ್ಠಲ ಚೌಗಲೆ, ತಾ ಪಂ ಇಓ ದುಂಡಪ್ಪ ತುರಾದಿ ಸೇರಿದಂತೆ ಭೂದಾಖಲೆಗಳ ಸಹಾಯಕ ನಿರ್ದೇಶಕರು, ಭೂಮಿ ಶಿರಸ್ತೇದಾರರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.