
ರಾಸಾಯನಿಕ ಘಟಕಗಳಿಗೆ ಪರಿಸರ ಅಧಿಕಾರಿಗಳ ಭೇಟಿ; ಪರಿಶೀಲನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 09 – ಬಳ್ಳಾರಿಯ ಮುಂಡ್ರಗಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಸಾಯನಿಕ (ಔಷಧ) ಘಟಕಗಳು ನಿಯಮ ಬಾಹಿರವಾಗಿ ಉತ್ಪಾದನೆ ನಡೆಸುತ್ತಿರುವ ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಮಿಕ ಸಚಿವ ಎಸ್.ಸಂತೋಷ ಲಾಡ್ ಅವರು ಬಳ್ಳಾರಿಗೆ ಭೇಟಿ ಮಾಡಿ, ಜಿಲ್ಲಾಧಿಕಾರಿಳ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಮತ್ತು ಪದಾಧಿಕಾರಿಗಳು ದೂರು ಸಲ್ಲಿಸಿ, ಮುಂಡ್ರಿಗಿ ಕೈಗಾರಿಕಾ ಪ್ರದೇಶದಲ್ಲಿಯ `ಬೃಹತ್ ಔಷಧ ಘಟPಗಳ’ ಕಾನೂನು ಬಾಹಿರ ಉತ್ಪಾದನೆಯ ಸಮಸ್ಯೆಗಳ ಕುರಿತು ಸಮಗ್ರವಾಗಿ ವಿವರಿಸಿ, ಸಾರ್ವಜನಿಕರ ಆರೋಗ್ಯ ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲು ಮನವಿ ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳಾದ ಸಹಾಯಕ ನಿರ್ದೇಶಕ ವರುಣ್ ಕುಮಾರ್, ಪರಿಸರ ಅಧಿಕಾರಿ ದೊಡ್ಡಬಸಯ್ಯ ಮತ್ತು ಜಿಲ್ಲಾ ಕೈಗಾರಿಕಾ ಅಧಿಕಾರಿ ಸೋಮಶೇಖರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು, ಮುಂಡ್ರಗಿ ಕೈಗಾರಿಕಾ ವಲಯಕ್ಕೆ ಗುರುವಾರ ಭೇಟಿ ನೀಡಿತ್ತು.
ಅಧಿಕಾರಿಗಳ ಜೊತೆಯಲ್ಲಿದ್ದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ, ಉಪಾಧ್ಯಕ್ಷ ದೊಡ್ಡನಗೌಡ, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ ಅವರು ಸುದ್ದಿಗಾರರ ಜೊತೆ ಮಾತನಾಡಿ, ರಸಾಯನಿಕ (ಔಷಧ) ಘಟಕಗಳ ಆಡಳಿತ ಮಂಡಲಿಯು ಎಲ್ಲವನ್ನೂ ಸರಿಪಡಿಸಲು ಸಮಯಾವಕಾಶ ಕೋರಿದ್ದಾರೆ ಎಂದರು.
ಮುಂಡ್ರಿಗಿ ಕೈಗಾರಿಕೆಯ ಪ್ರದೇಶದಲ್ಲಿ ಬೃಹತ್ ಔಷಧ ಘಟಕದವರು ನಿಯಮಗಳನ್ನು ಉಲ್ಲಂಘನೆ ಮಾಡಿ ಉತ್ಪಾದನೆ ಮಾಡುತ್ತಿರುವ ಕಾರಣ ಸುತ್ತಲಿನ ಪ್ರದೇಶದಲ್ಲಿರುವವರು ಅಸ್ತಮ, ಚರ್ಮ ಅಲರ್ಜಿ, ಅಜೀರ್ಣ ಸಮಸ್ಯೆ, ಕಣ್ಣುಉರಿ, ಕಿಡ್ನಿ ಮತ್ತು ಹೃದಯ ಸಮಸ್ಯೆಗಳಿಂದ ನರಳುತ್ತಿದ್ದಾರೆ. ರಸಾಯನಿಕ ಫ್ಯಾಕ್ಟರಿಗಳ ಧೂಳಿನಿಂದಾಗಿ ಸುತ್ತಲಿನ ಕೈಗಾರಿಕಾ ಘಟಕಗಳ ಶೆಡ್ಡುಗಳು ತ್ವರಿತವಾಗಿ ಹಾಳಾಗುತ್ತಿವೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು ಕೈಗಾರಿಕೆಗಳ ಪರವಾಗಿ ಸಚಿವರಲ್ಲಿ ದೂರು ಸಲ್ಲಿಸಿ, ಅಗತ್ಯ ಕ್ರಮಕೈಗೊಳ್ಳಲು ಮನವಿ ಮಾಡಿದ್ದನ್ನು ಸ್ಮರಿಸಬಹುದಾಗಿದೆ.
ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್ನ ಪದಾಧಿಕಾರಿಗಳು ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.