
ವಿಎಸ್ ಕೆ ವಿಶ್ವ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ
ಭಾಷಾಭಿಮಾನ ಬೆಳೆಸಿ , ಭಾಷೆ ಉಳಿಸಿ – ಡಾ.ಗೋಪಾಲ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 02- ಕರ್ನಾಟಕ ಎಂದು ನಾಮೋತ್ಸವಗೊಂಡು 50 ವರ್ಷ ಕಳೆದರೂ ಇಂದಿಗೂ ಕನ್ನಡ ಭಾಷೆಯನ್ನು ಉಸಿರಾಗಿಸಿಕೊಂಡು ಹಸನುಗೊಳಿಸುತ್ತಿರುವ ಜನ ಕಡಿಮೆ ಎಂದು ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ.ಗೋಪಾಲ್ ಅವರು ಅಭಿಪ್ರಾಯಪಟ್ಟರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉದಾರ ಮನೋಭಾವ ಹೊಂದಿರುವ ನಾಡಿನ ಜನತೆ ಎಲ್ಲ ಭಾಷಿಕರನ್ನು ಆದರದಿಂದ ಸ್ವಾಗತಿಸುತ್ತಾರೆ. ಆದರೆ ನಮ್ಮ ಭಾಷೆಯ ವಿಷಯದಲ್ಲಿ ನಿರಭಿಮಾನ ಹೊಂದಿದ್ದಾರೆ. ಇದನ್ನು ತೊಡೆದುಹಾಕಿ ಕನ್ನಡದ ಅಸ್ಮಿತೆಗೆ ಪಣತೊಡಬೇಕು ಎಂದು ಕರೆ ನೀಡಿದರು.
ಈ ಭಾಗದ ಕನ್ನಡದ ಕಟ್ಟಾಳುಗಳಾಗಿದ್ದ ರಂಜಾನ್‍ಸಾಬ್, ಗಡಗಿ ಬಸಪ್ಪ, ದೇವುಡು ಮುಂತಾದ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ಮಹತ್ವ ಮತ್ತು ನಾಡಿನ ಪ್ರಮುಖ ಘಟನಾವಳಿಗಳ ಕುರಿತು ವಿವರಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಾಹೇಬ್ ಅಲಿ ನಿರಗುಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಂತ್ಯವಾರು ರಾಜ್ಯಗಳು ವಿಂಗಡನೆಯಾದಾಗ ಗಡಿಭಾಗಗಳಲ್ಲಿ ಹಂಚಿ ಹೋಗಿರುವ ಅನೇಕ ಪ್ರದೇಶಗಳಲ್ಲಿ ಇಂದಿಗೂ ಕನ್ನಡ ಮತ್ತು ಕನ್ನಡಿಗರು ನೆಲೆಯೂರಿದ್ದಾರೆ. ಎಲ್ಲರೂ ನಾನಾ ಭಾಷೆ ಕಲಿಯಿರಿ ಆದರೆ ಮಾತೃಭಾಷೆ ಕುರಿತು ಅಭಿಮಾನ ಮರೆಯದಿರಿ ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ಮಾತೃ ಭಾಷೆಯ ಉಳಿವಿಗಾಗಿ ಅಭಿಮಾನವನ್ನು ಮಾತ್ರ ತೋರದೆ ಸಾಮಾಜಿಕವಾಗಿ, ಶೈಕ್ಷಣಕವಾಗಿ, ಆರ್ಥಿಕವಾಗಿ ರಾಜ್ಯವನ್ನು ಸಬಲೀಕರಣಗೊಳಿಸುವ ಮಾರ್ಗೋಪಾಯಗಳನ್ನು ಮುನ್ನೆಲೆಗೆ ತರಬೇಕು ಎಂದು ಹೇಳಿದರು.
ಪ್ರಾದೇಶಿಕವಾಗಿ ಅಭಿವೃದ್ಧಿ ಸಾಧಿಸಲು ಪ್ರತಿ ಕನ್ನಡಿಗನು ಪ್ರಗತಿಪರ ಚಿಂತನೆ ಮತ್ತು ಸತತವಾಗಿ ಪ್ರಯತ್ನಪಟ್ಟರೆ ನೆಲ, ಜಲ, ಭಾಷೆ ಉಳಿವು-ಬೆಳೆವು ನಿರಂತರವಾಗಿರುತ್ತದೆ ಎಂದು ಹೇಳಿದರು.
ನಾಡಿನ ಇತಿಹಾಸ ತಿಳಿದುಕೊಂಡು, ವರ್ತಮಾನದ ಆಗು-ಹೋಗುಗಳಿಗೆ ಅನ್ವಯವಾಗುವ ವಿಚಾರಗಳನ್ನು ಮಂಡಿಸಿ ವಿನೂತನ ಸುಧಾರಣೆ ಕ್ರಮಗಳನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಗಣ್ಯಮಾನ್ಯರು ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಸರ್ಕಾರದ ಸೂಚನೆಯಂತೆ ಕನ್ನಡದ ಕಂಪು ಹರಡುವ ಐದು ಕನ್ನಡ ಗೀತೆಗಳನ್ನು ಈ ಸಂದರ್ಭದಲ್ಲಿ ಹಾಡಲಾಯಿತು.
ಈ ಸಂದರ್ಭದಲ್ಲಿ ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ.ಸದ್ಯೋಜಾತಪ್ಪ, ಪ್ರೊ.ಶಾಂತಾನಾಯ್ಕ್, ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ.ರಾಬರ್ಟ್ ಜೋಸ್, ಕನ್ನಡ ವಿಭಾಗದ ಡಾ.ಶಕೀಲಾ, ಡಾ.ಗುರುರಾಜ್, ಡಾ.ಶಿವಪ್ರಕಾಶ್ ಸೇರಿದಂತೆ ವಿವಿಧ ನಿಕಾಯದ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.