0ba1a071-0f96-4af5-9ee6-1fa47902b1a6

ಸಿರಿಧಾನ್ಯಗಳ ಬಳಕೆಯ ಜಾಗೃತಿ ನಡಿಗೆ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೪- ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ-2024ರ ಅಂಗವಾಗಿ ಸಿರಿಧಾನ್ಯ ಬಳಕೆ ಹಾಗೂ ಆರೋಗ್ಯ ದೃಷ್ಠಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಗುರುವಾರ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ ನಡೆಯಿತು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಜಾಗೃತಿ ನಡಿಗೆಯಲ್ಲಿ ‘ಜೋಳ ತಿಂದವನು ತೋಳದಂತಾಗುವನು, ಅಕ್ಕಿಯನ್ನು ತಿಂದವನು ಹಕ್ಕಿಯಂತಾಗುವನು’, ‘ಸಿರಿಧಾನ್ಯ ತಾಕತ್ತು ಸಕಲ ಪೌಷ್ಠಿಕಾಂಶಗಳ ಸಂಪತ್ತು’, ‘ರಾಗಿ ತಿಂದವನು ರೋಗದಂತೆ ಮುಕ್ತರಾಗುವರು’, ‘ಸಿರಿಧಾನ್ಯ ತಿಂದವರು ಆರೋಗ್ಯದಿಂದ ಸಿರಿವಂತರಾಗುವರು’ ಎಂಬ ಸಂದೇಶ ಸಾರುವ ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆಯು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭವಾಗಿ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಎಸ್.ಪಿ.ವೃತ್ತ ಮೂಲಕ ಕನಕದುರ್ಗಮ್ಮ ದೇವಸ್ಥಾನ ಮಾರ್ಗವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಮರಳಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಮರಳಿತು. ಡೊಳ್ಳು ಕುಣಿತ, ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ನಡಿಗೆಯಲ್ಲಿ ಸುಮಾರು 300 ಕ್ಕೂ ಜನ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಕೃಷಿ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಸೇರಿದಂತೆ ಕೃಷಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಡಿಗೆಯ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸವಿಯಲು ಸಿರಿಧಾನ್ಯದ ಸಾಮಿ ಪಾಯಸ, ಸಾಮೆ ಉಪ್ಪಿಟ್ಟು, ನವಣೆ ಬಾತ್, ಸಾವಯವದ ಬೆಲ್ಲದ ಛಾಯೆನು ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳು, ಇತರೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಿರಿಧಾನ್ಯಗಳಿಂದ ಮಾಡಿದ ಉಪ್ಪಿಟ್ಟು, ನವಣೆ ಬಾತ್ ಮತ್ತು ಸಿಹಿ ಪಾಯಸವನ್ನು ಸವಿದರು.

Leave a Reply

Your email address will not be published. Required fields are marked *

error: Content is protected !!