WhatsApp Image 2024-07-01 at 7.15.44 AM

ಬಹದ್ದೂರ್‌ಬಂಡಿ : ದಂಪತಿ ಸಂಪರ್ಕ ಪಾಕ್ಷಿಕ ದಿನಾಚರಣೆ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 1- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬಹದ್ದೂರ್‌ಬಂಡಿ ಗ್ರಾಮ ಪಂಚಾಯತ್ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಜುಲೈ 01 ರಿಂದ ಜು.11 ರವರೆಗೆ ನಡೆಯುವ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಬಹದ್ದೂರ್‌ಬಂಡಿ ಗ್ರಾಮದ ಆಯುಷ್ಮಾನ್ ಭಾರತ್ ಆರೋಗ್ಯ ಮಂದಿರದಲ್ಲಿ ಸೋಮವಾರ “ದಂಪತಿ ಸಂಪರ್ಕ ಪಾಕ್ಷಿಕ” ಕಾರ್ಯಕ್ರಮ ಆಚರಿಸಲಾಯಿತು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಪ್ರತಿ ವರ್ಷ ಜೂನ್ 27 ರಿಂದ ಜುಲೈ 10 ರವರೆಗೆ “ವಿಶ್ವ ಜನಸಂಖ್ಯಾ ದಿನಾಚರಣೆ” ಅಂಗವಾಗಿ “ದಂಪತಿ ಸಂಪರ್ಕ ಪಾಕ್ಷಿಕ” ಕಾರ್ಯಕ್ರಮ ಹಮ್ಮಿಕೊಂಡು ಅರ್ಹ ದಂಪತಿಗಳಿಗೆ ಹಾಗೂ ಯುವ ಜನತೆಗೆ ಅರಿವು ಮೂಡಿಸಲಾಗುತ್ತದೆ. ವಿಶ್ವದ ಜನಸಂಖ್ಯೆಯು 1987 ರಲ್ಲಿ 500 ಕೋಟಿ ದಾಟಿದ ಪ್ರಯುಕ್ತ, ಪ್ರತಿ ವರ್ಷ ಜುಲೈ 11ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮುದಾಯದ ಜನಪ್ರತಿನಿಧಿಗಳೊಂದಿಗೆ ಜಾಗೃತಿ ಮೂಡಿಸಲಾಗುತ್ತದೆ. ಜನಸಂಖ್ಯೆ ಹೆಚ್ಚಳದಿಂದ ದೇಶದ ಅಭಿವೃದ್ಧಿಯಲ್ಲಿ ಕುಂಟಿತಗೊಳ್ಳುತ್ತದೆ ಹಾಗೂ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ವರ್ಷದ ಘೋಷವಾಕ್ಯವು “ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಹೆಮ್ಮೆ” ಎಂಬುದಾಗಿದೆ. ಒಂದು ಕುಟುಂಬಕ್ಕೆ 01 ಅಥವಾ 02, ಹೆಣ್ಣಿರಲಿ-ಗಂಡಿರಲಿ ಮಕ್ಕಳು ಎರಡೇ ಇರಲಿ. ಸರ್ಕಾರಿ ನಿಗದಿ ಪಡಿಸಿದ ವಯಸ್ಸಿಗೆ ಮದುವೆ ಮಾಡಬೇಕು. ಬಾಲ್ಯ ವಿವಾಹ ಮಾಡಬಾರದು. ಬಾಲ್ಯ ವಿವಾಹ ಕಾನೂನು ಬಾಹೀರ. ಬಾಲ್ಯ ವಿವಾಹ ಮಾಡುವುದರಿಂದ ಸತಿ-ಪತಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 03 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಕಾರ್ಯಕ್ರಮದ ತಾತ್ಕಾಲಿಕ ನೂತನ ವಿಧಾನಗಳಾದ ಅಂತರ ಚುಚ್ಚುಮದ್ದು, ಛಾಯಾ ನುಂಗುವ ಮಾತ್ರೆ, ಮಾಲಾ-ಎನ್ ಮಾತ್ರೆ ಹಾಗೂ ಪಿ.ಪಿ.ಐ.ಯು.ಸಿ.ಡಿ (ವಂಕಿದಾರಣೆ) ಇವುಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಅರ್ಹ ದಂಪತಿಗಳು ಅವುಗಳನ್ನು ಅಳವಡಿಸಿಕೊಂಡು ತಮ್ಮ ಕುಟುಂಬವನ್ನು ಸುಖಿ ಕುಟುಂಬವನ್ನಾಗಿ ಮಾಡಿಕೊಳ್ಳಬೇಕು ಮತ್ತು ಶಾಶ್ವತ ವಿಧಾನಗಳಾದ ಮಹಿಳೆಯರಿಗೆ ಉದರ ದರ್ಶಕ ಶಸ್ತ್ರಚಿಕಿತ್ಸೆ ಹಾಗೂ ಪುರುಷರಿಗೆ ವ್ಯಾಸಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ ಅವರ ಮಾತನಾಡಿ, ವಿಶ್ವದ ಜನಸಂಖ್ಯೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಚೀನಾ ದೇಶ ಎರಡನೇ ಸ್ಥಾನದಲ್ಲಿದೆ. ಜನಸಂಖ್ಯೆ ಹೆಚ್ಚಳಕ್ಕೆ ಕಾರಣಗಳಾದ ಮೂಡನಂಬಿಕೆ, ಅಜ್ಞಾನ, ಅನಕ್ಷರತೆ, ಬಡತನ, ಮಾಹಿತಿ ಕೊರತೆದಿಂದ ಜನಸಂಖ್ಯೆ ಹೆಚ್ಚಳವಾಗುತ್ತದೆ. ಜನಸಂಖ್ಯೆ ಸ್ಪೋಟದಿಂದ ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಸಮಾಜದ ಅಸಮಾನತೆ, ನಿರುದ್ಯೋಗ ಸಮಸ್ಯೆ ಉಂಟಾಗುತ್ತವೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕಾಗಿ ಬಾಲ್ಯ ವಿವಾಹ ಮಾಡಬಾರದು ಎಂದು ಹೇಳಿ, ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಅಂತರ ಕಾಪಾಡಲು ಕುಟುಂಬ ಯೋಜನೆಯ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳ ಮಾದರಿಗಳನ್ನು ತೊರಿಸುತ್ತಾ ದಂಪತಿಗಳಿಗೆ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಮಹಮ್ಮದ್ ರಫೀ, ಮಂಜುನಾಥ, ಶೇಖರಪ್ಪ, ಗುರುಮೂರ್ತಿಯ್ಯ, ಕೆಂಚಮ್ಮ, ಮಹೆಬೂಬ್‌ಬೀ, ಪ್ರಾಥಮಿಕ ಆರೋಗ್ಯ ಸುರಾಕ್ಷಾಧಿಕಾರಿ ಪ್ರಭಾವತಿ, ಸಮುದಾಯ ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ವಿಜಯಲಕ್ಷ್ಮೀ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ, ಭಾಣಂತಿಯರು, ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!