ಬಾಲ್ಯವಿವಾಹದಿಂದ ಅಪ್ರಾಪ್ತ ಬಾಲಕ, ಬಾಲಕಿಯರ ರಕ್ಷಣೆ (1)

ತಾವರಗೇರಾ : ಬಾಲ್ಯವಿವಾಹದಿಂದ ಅಪ್ರಾಪ್ತ ಬಾಲಕ, ಬಾಲಕಿಯರ ರಕ್ಷಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 26- ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಬಸಣ್ಣಕ್ಯಾಂಪ್‌ನಲ್ಲಿ ಏಪ್ರಿಲ್ 26 ರಂದು ನಡೆಯಬೇಕಿದ್ದ ಅಪ್ರಾಪ್ತ ವಯಸ್ಸಿನ ಬಾಲಕ ಮತ್ತು ಬಾಲಕಿಯರ ವಿವಾಹವನ್ನು ವಿವಿಧ ಇಲಾಖೆಗಳ ಸಹಕಾರದಲ್ಲಿ ತಡೆಗಟ್ಟಿದ್ದು, ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ.

ಏಪ್ರಿಲ್ 26 ರಂದು ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಬಸಣ್ಣಕ್ಯಾಂಪ್‌ನಲ್ಲಿ ಅಪ್ರಾಪ್ತ ಬಾಲಕ ಹಾಗೂ ಬಾಲಕಿಯರ ವಿವಾಹ ಮಾಡುತ್ತಿರುವುದಾಗಿ ಏಪ್ರಿಲ್ 25 ರಂದು ಮಕ್ಕಳ ಸಹಾಯವಾಣಿ-1098/112ಗೆ ಮಾಹಿತಿ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ತಾವರಗೇರಾ ಪಟ್ಟಣದ ಬಸಣ್ಣಕ್ಯಾಂಪ್‌ಗೆ ಭೇಟಿ ನೀಡಿ ಪರಿಶೀಲಿಸಲಾಗಿ, ವಿವಿಧ ಕುಟುಂಬಗಳಲ್ಲಿ ವಿವಾಹದ ಪೂರ್ವ ತಯಾರಿಗಳು ನಡೆಯುತ್ತಿದ್ದು, ಒಟ್ಟು 06 ಜೋಡಿಗಳ ವಿವಾಹವು ಬಾಲ್ಯವಿವಾಹಗಳೆಂದು ಕಂಡುಬಂದಿತು.

ಶಾಲೆ ದಾಖಲಾತಿಗಳನ್ನು ಪಡೆದು ಪರಿಶೀಲಿಸಲಾಗಿ ಬಾಲ್ಯವಿವಾಹಕ್ಕೆ ಸಿಲುಕಬಹುದಾದ ಸಾಧ್ಯತೆಯಿದ್ದ ಇಬ್ಬರು ಬಾಲಕರು ಮತ್ತು ಆರು ಬಾಲಕಿಯರನ್ನು ಪತ್ತೆ ಮಾಡಿದ್ದು, ಬಾಲಕ ಮತ್ತು ಬಾಲಕಿಯರನ್ನು ಬಾಲ್ಯವಿವಾಹದಿಂದ ರಕ್ಷಿಸಿ ಮುಂದಿನ ಪೋಷಣೆ ಮತ್ತು ರಕ್ಷಣೆ ಹಿತದೃಷ್ಠಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ.

ಬಾಲ್ಯವಿವಾಹ ಮಾಡದಂತೆ ಪೋಷಕರಿಗೆ ತಿಳುವಳಿಕೆಯನ್ನು ನೀಡಿ, ಬಾಲ್ಯವಿವಾಹವನ್ನು ಮಾಡದಂತೆ ಪಾಲಕರಿಗೆ ಮತ್ತು ಪೋಷಕರಿಗೆ ನೊಟೀಸ್ ಅನ್ನು ಜಾರಿ ಮಾಡಲಾಗಿದೆ.

ಈ ರಕ್ಷಣಾ ಕಾರ್ಯದಲ್ಲಿ ಕುಷ್ಟಗಿ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕಿಯರಾದ ದುರಗಮ್ಮ, ತಾವರಗೇರಾ ಪೊಲೀಸ್ ಠಾಣೆಯ ವಿರೇಶ, ಮಹ್ಮದರಫಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೇವರಾಜ್ ತಿಲಗರರವರು ಭಾಗವಹಿಸಿದ್ದರು.

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾಗುವುದು, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಮಾಡುವುದು, ಅಂತಹ ವಿವಾಹಗಳಲ್ಲಿ ಭಾಗವಹಿಸುವುದು, ನೆರವು ನೀಡುವುದು, ಪ್ರೋತ್ಸಾಹಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ಪ್ರಯತ್ನಗಳನ್ನು ಯಾರೂ ಮಡಬಾರದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!