
ಬಿಜೆಪಿಗೆ ಅಭೂತಪೂರ್ವ ಜನ ಸಮರ್ಥನೆ : ನರೇಂದ್ರ ಮೋದಿ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ, 28- ಬಿಜೆಪಿಗೆ ದೇಶಾದ್ಯಂತ ಅಭೂತಪೂರ್ವ ಜನಸಮರ್ಥನೆ, ಅಭೂತಪೂರ್ವ ಆಶೀರ್ವಾದ ಲಭಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರು.
ಹೊಸಪೇಟೆಯಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತವು ವೇಗವಾಗಿ ಮುನ್ನಡೆಯುತ್ತಿದೆ. ಇದು ಕೆಲವು ದೇಶಗಳು, ಕೆಲವು ಸಂಸ್ಥೆಗಳಿಗೆ ಇಷ್ಟವಾಗುತ್ತಿಲ್ಲ. ಭಾರತವು ದುರ್ಬಲವಾಗಿದ್ದರೆ ಪ್ರಯೋಜನ ಪಡೆಯಬಹುದೆಂದು ಕೆಲವರು ಭಾವಿಸುತ್ತಾರೆ ಎಂದು ವಿಶ್ಲೇಷಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದರೂ ಅಯೋಧ್ಯೆಯ ಶ್ರೀರಾಮನಿಗೆ ಸ್ವಾತಂತ್ರ್ಯ ಸಿಗಲಿಲ್ಲ. 500 ವರ್ಷಗಳ ಬಳಿಕ ರಾಮಮಂದಿರದ ನಿರ್ಮಾಣ ಪೂರ್ಣಗೊಂಡಿತು. ಇದಕ್ಕೆ ನಿಮ್ಮ ಮತವೇ ಕಾರಣ ಎಂದು ನೆನಪಿಸಿದರು. ಆಹ್ವಾನ ಇದ್ದರೂ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಕಾಂಗ್ರೆಸ್ ಮುಖಂಡರು, ಇಂಡಿ ಒಕ್ಕೂಟದವರು ಅವಮಾನ ಮಾಡಿದರು. ರಾಮಲಲ್ಲಾಗೆ ಅವಮಾನ ಮಾಡಿದ ಇವರಿಗೆ ಪಾಠ ಕಲಿಸಿ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಕೂಪ. ಎಲ್ಲರೂ ಭ್ರಷ್ಟರಾಗಿದ್ದರು. ಬಿಜೆಪಿಯ ಶಕ್ತಿಯುತ ಸರಕಾರ ಬಂದ ಬಳಿಕ ಕಾಂಗ್ರೆಸ್ಸಿಗರಿಗೆ ಕಷ್ಟವಾಗಿದೆ. 2014ಕ್ಕೆ ಮೊದಲು ದೆಹಲಿಯ ರಾಜನೀತಿಯು ದಲ್ಲಾಳಿಗಳ ಕೈಯಲ್ಲಿತ್ತು. 2014ರ ಬಳಿಕ ದಲ್ಲಾಳಿಗಳು ದೆಹಲಿ ಬಿಟ್ಟು ರಾಜ್ಯಗಳಲ್ಲಿ ಅಂಗಡಿ ತೆರೆದಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಪಕ್ಷ ಎಷ್ಟೇ ಪ್ರಯತ್ನಪಟ್ಟರೂ ಭಾರತ ವಿಕಾಸ ಹೊಂದಿಯೇ ಸಿದ್ಧ. ಕರ್ನಾಟಕವು ಕೂಡ ಅಭಿವೃದ್ಧಿ ಹೊಂದಲಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಬಿಜೆಪಿ ತನ್ನ ಜವಾಬ್ದಾರಿ ಎಂದು ಭಾವಿಸಿದೆ. ಸಾವಿರಾರು ಕೋಟಿ ರೂಪಾಯಿಯ ಯೋಜನೆಗಳನ್ನು ಕೇಂದ್ರವು ಜಾರಿಗೊಳಿಸಿದೆ ಎಂದು ವಿವರಿಸಿದರು. ಬಳ್ಳಾರಿಯಲ್ಲಿ ಜೀನ್ಸ್ ಇಂಡಸ್ಟ್ರಿ, ಸ್ಟೀಲ್ ಕೈಗಾರಿಕೆಯಿಂದ ಹೆಚ್ಚು ಉದ್ಯೋಗಗಳು ಸಿಕ್ಕಿವೆ ಎಂದು ತಿಳಿಸಿದರು.
ಬಿಜೆಪಿ ಪ್ರಯತ್ನದಿಂದ ಕೊಪ್ಪಳದ ಆಟಿಕೆ ಉದ್ಯಮವೂ (ಟಾಯ್ ಇಂಡಸ್ಟ್ರಿ) ಉದ್ಯೋಗಗಳನ್ನು ಕೊಟ್ಟಿದೆ. ಕಾಂಗ್ರೆಸ್ಸಿಗರು ನಮ್ಮ ಪ್ರಯತ್ನಗಳನ್ನು ತಮಾಷೆ ಮಾಡಿದ್ದರು. ಈಗ ಭಾರತವು ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿ ಆಗಿದೆ. ಜಾಗತಿಕ ಮಾರುಕಟ್ಟೆಯನ್ನೂ ಸೃಷ್ಟಿಸಿದೆ ಎಂದು ತಿಳಿಸಿದರು.
ಕೆಲಸ ಮಾಡಲೊಲ್ಲದ ಕಾಂಗ್ರೆಸ್ ಪಕ್ಷವು, ಬಿಜೆಪಿ ಕೆಲಸ ಮಾಡದಂತೆ ತಡೆಯುತ್ತದೆ. ಕರ್ನಾಟಕದಲ್ಲಿ ವಿದ್ಯುತ್, ನೀರು ಇಲ್ಲದೆ ಕೈಗಾರಿಕೆಗಳಿಗೆ ಸಂಕಷ್ಟ ಬಂದಿದೆ ಎಂದು ನುಡಿದರು. ಕಿಸಾನ್ ಸಮ್ಮಾನ್ ಅಡಿಯಲ್ಲಿ ಬಿಜೆಪಿ ರಾಜ್ಯ ಸರಕಾರ ಕೊಡುತ್ತಿದ್ದ 4 ಸಾವಿರವನ್ನು ಕಾಂಗ್ರೆಸ್ ಸರಕಾರ ರದ್ದು ಮಾಡಿದೆ. ಇಲ್ಲಿ ತುಷ್ಟೀಕರಣ ಹೆಚ್ಚಾಗಿದೆ. ಇದು ಕರ್ನಾಟಕ, ದೇಶಕ್ಕೆ ಆತಂಕ ತಂದಿದೆ ಎಂದರು.
ಪಿಎಫ್ಐ ಎಂಬ ಭಯೋತ್ಪಾದಕರ ಸಂಘಟನೆಯನ್ನು ನಾವು ನಿಷೇಧಿಸಿದ್ದೆವು. ಅದರ ಸಹವರ್ತಿ ಸಂಘಟನೆ ಜೊತೆ ಕಾಂಗ್ರೆಸ್ ಪಕ್ಷವು ಒಪ್ಪಂದ ಮಾಡಿಕೊಂಡಿದೆ ಎಂದು ಟೀಕಿಸಿದರು. ಇದು ಆತಂಕಕಾರಿ ಎಂದು ವಿವರಿಸಿದರು. ಇದರಿಂದ ಬೆಂಗಳೂರು ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಹುಬ್ಬಳ್ಳಿ ಕಾಲೇಜಿನಲ್ಲಿ ಯುವತಿಯನ್ನು ಚಾಕುವಿನಿಂದ ಹತ್ಯೆ ಮಾಡಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷವು ಇಂಥವರ ಜೊತೆ ನಿಂತಿದೆ ಎಂದು ಟೀಕಿಸಿದರು. ಇದೆಲ್ಲವೂ ಕಾಂಗ್ರೆಸ್ ನೀತಿಯ ಪರಿಣಾಮ ಎಂದು ಆಕ್ಷೇಪಿಸಿದರು.
ಮತಬ್ಯಾಂಕ್ ಹಸಿವಿನಿಂದ ಕೂಡಿದ ಸರಕಾರವು ನಿಮ್ಮ ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದ ಅವರು, ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ನೇಹಾರಂಥ ಯುವತಿಯರ ರಕ್ಷಣೆ, ಭಯೋತ್ಪಾದನಾ ಕೃತ್ಯಗಳಿಂದ ಮುಕ್ತಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ವಿನಂತಿಸಿದರು. ಜೀವನದ ಕೊನೆ ಉಸಿರು ಇರುವವರೆಗೆ ದೇಶದ ಜನರಿಗಾಗಿ ಮೋದಿ ಜೀವಿಸುತ್ತಾನೆ ಎಂದು ಅವರು ತಿಳಿಸಿದರು.
2014ಕ್ಕೆ ಮೊದಲು ಬಾಂಬ್ ಸ್ಫೋಟ ಪ್ರತಿದಿನದ ವಿಷಯವಾಗಿತ್ತು. 2014ರ ಬಳಿಕ ಬಾಂಬ್ ಸ್ಫೋಟ ನಿಂತಿದೆ. ದೇಶದ ಜನತೆಯ ಸುರಕ್ಷತೆಗಾಗಿ ಬಿಜೆಪಿಗೆ ಅಧಿಕಾರ ಕೊಡಿ ಎಂದು ತಿಳಿಸಿದರು. ಹಿಂದೆ ನೆರೆ ರಾಷ್ಟ್ರಗಳು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದ್ದವು. ಈಗ ಮೋದಿ ಇರುವುದರಿಂದ ದೇಶ ಸುರಕ್ಷಿತವಾಗಿದೆ ಎಂದು ವಿವರಿಸಿದರು. ನಿಮ್ಮ ಮತದ ತಾಕತ್ತಿನಿಂದ ಸ್ಥಿರ ಸರಕಾರ ರಚನೆಯಾಗಿ ಈ ಪರಿವರ್ತನೆ ಸಾಧ್ಯವಾಗಿದೆ ಎಂದು ವಿಶ್ಲೇಷಣೆ ಮಾಡಿದರು.
ಬಳ್ಳಾರಿಯ ಈ ಭೂಮಿ ವಿಜಯನಗರ ಸಾಮ್ರಾಜ್ಯದ ಸಮೃದ್ಧಿಯ ಸಂಕೇತ. ಇಲ್ಲಿನ ಜನರು ವಿಕಸಿತ ಭಾರತ, ವಿಕಸಿತ ಕರ್ನಾಟಕದ ಸಂಕಲ್ಪದೊಂದಿಗೆ ನಿಂತಿದ್ದಾರೆ. ಮತ್ತೊಮ್ಮೆ ಮೋದಿ ಸರಕಾರ ಎಂದು ದೇಶವೇ ಹೇಳುತ್ತಿದೆ ಎಂದು ನುಡಿದರು. ನನ್ನ ವೈಯಕ್ತಿಕ ಕೆಲಸವೊಂದಿದೆ. ಈ ಸಮಾವೇಶದ ಬಳಿಕ ಮನೆ ಮನೆಗೆ ಹೋಗಿ ಮೋದಿಜೀ ಬಂದಿದ್ದರು. ನಿಮಗೆ ನಮಸ್ಕಾರ ಹೇಳಿದ್ದಾರೆ ಎಂದು ತಿಳಿಸಿ ಎಂದು ಮನವಿ ಮಾಡಿದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಮೋದಿಜೀ ಅವರು ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರರಹಿತ ಆಡಳಿತವನ್ನು ನೀಡಿದ್ದಾರೆ. ಅವರು ಅನೇಕ ಜನಪರ ಯೋಜನೆಗಳನ್ನು ನೀಡಿದವರು. ಕಾಂಗ್ರೆಸ್ ಸರಕಾರವು ಬಡವರಿಗೆ ಅಕ್ಕಿ ಕೊಡುವುದಾಗಿ ತಿಳಿಸಿದ್ದರೂ ಅದನ್ನು ನೀಡುತ್ತಿಲ್ಲ. ಆದರೆ, ಪ್ರಧಾನಿಯವರು ಬಡವರಿಗೆ ಅಕ್ಕಿ ಕೊಡುತ್ತಿದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರಕ್ಕೆ ಭರವಸೆಗಳನ್ನು ಈಡೇರಿಸಲು ಆಗುತ್ತಿಲ್ಲ ಎಂದು ಟೀಕಿಸಿದರು.
900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಕಾಂಗ್ರೆಸ್ ಸರಕಾರವು ಅವರಿಗೆ ಪರಿಹಾರ ಕೊಟ್ಟಿಲ್ಲ. ರೈತರಿಗೆ ಹಿಂದೆ ಯಡಿಯೂರಪ್ಪ ಅವರ ಸರಕಾರವು ಗರಿಷ್ಠ ಪರಿಹಾರ ಕೊಟ್ಟಿತ್ತು. ಆದರೆ, ಸಿದ್ದರಾಮಯ್ಯನವರು ಬರಗಾಲ ಪರಿಸ್ಥಿತಿ ಕಡೆ ಗಮನ ಕೊಟ್ಟಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣ ಮುಂದುವರೆದಿದೆ ಎಂದು ವಿವರಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಕೂಡಲೇ ಒದ್ದು ಒಳಗೆ ಹಾಕಿಲ್ಲ. ನೇಹಾ ಬರ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರವು ಖಂಡಿಸಿಲ್ಲ ಎಂದು ಟೀಕಿಸಿದರು. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿದೆ ಎಂದು ನುಡಿದರು. ದುಷ್ಟ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ತಿಳಿಸಿದರು. ಅಭಿವೃದ್ಧಿಗೆ ಕೊಡಲಿ ಏಟು ಹಾಕಿದ್ದಾರೆ ಎಂದು ಟೀಕಿಸಿದರು. ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ವೈಫಲ್ಯಗಳನ್ನು ಮುಚ್ಚಿ ಹಾಕಲು ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ಮಾಡುತ್ತಿದೆ. ಬರಗಾಲದ ಸಂದರ್ಭದಲ್ಲಿ ನೀವು ಮಾಡಿದ್ದೇನು ಎಂದು ಪ್ರಶ್ನಿಸಿದರು. ರೈತರ ಬಗ್ಗೆ ಕನಿಷ್ಠ ಅನುಕಂಪವೂ ಕಾಂಗ್ರೆಸ್ಸಿಗರಿಗೆ ಇಲ್ಲ. ಇದೊಂದು ಕಟುಕ ಸರಕಾರ ಎಂದು ಟೀಕಿಸಿದರು.
ರಾಯಚೂರು ಅಭ್ಯರ್ಥಿ ರಾಜಾ ಅಮರೇಶ್ ನಾಯಕ್, ಬಳ್ಳಾರಿ ಅಭ್ಯರ್ಥಿ ಬಿ.ಶ್ರೀರಾಮುಲು, ಕೊಪ್ಪಳ ಅಭ್ಯರ್ಥಿ ಬಸವರಾಜ ಕ್ಯಾವಟರ್, ಸಂಸದ ದೇವೇಂದ್ರಪ್ಪ, ಮಾಜಿ ಸಚಿವರು, ಶಾಸಕರು, ಪಕ್ಷದ ರಾಜ್ಯ- ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಮುಖಂಡರು ವೇದಿಕೆಯಲ್ಲಿದ್ದರು. ಮಹಿಳಾ ಫಲಾನುಭವಿಗಳು ಈ ಸಂದರ್ಭದಲ್ಲಿ ಮೋದಿಯವರನ್ನು ಸನ್ಮಾನಿಸಿದರು.