
ಬಿಜೆಪಿ- ಜೆಡಿಎಸ್ ಸಮನ್ವಯ ಸಭೆ ಎರಡು ಪಕ್ಷದಿಂದ ಮೈತ್ರಿ ಧರ್ಮ ಪಾಲನೆಯಾಗಬೇಕು : ವೆಂಕಟರಾವ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,31- ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಜನತಾದಳ ಜಾತ್ಯಾತೀತ ಪಕ್ಷಗಳು ಈ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ. ರಾಜ್ಯದಲ್ಲಿ ಸ್ಪರ್ಧಿಸಿರುವ 28 ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಮೈತ್ರಿ ಧರ್ಮ ಪಾಲಿಸಿ ಶ್ರಮಿಸೋಣ ಎಂದು ಮಾಜಿ ಸಚಿವ ಜೆಡಿಎಸ್ ಮುಖಂಡ ವೆಂಕಟರಾವ್ ನಾಡಗೌಡ ಹೇಳಿದರು.
ಅವರು ನಗರದ ಡಾ.ರಾಜ್ ಕುಮಾರ್ ರಸ್ತೆಯ ಸೂರ್ಯಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಮತ್ತು ಬಿಜೆಪಿಯ ಸಮನ್ವಯ ಸಭೆಯನ್ನು ಜ್ಯೋತಿ ಬೆಳಗಿಡುವ ಮೂಲಕ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಮೋದಿ ಅವಶ್ಯಕತೆ ಇದೆ ಎಂದು ದೇವೇಗೌಡರೇ ತಿಳಿಸಿದ್ದಾರೆ. ಮೋದಿ ಅವರ ಸರಿ ಸಮನಾದ ನಾಯಕ ಕಾಂಗ್ರೆಸ್ ಪಕ್ಷದಲ್ಲಿ ಯಾರು ಇಲ್ಲ. ರಾಹುಲ್ ಅವರನ್ನು ಹೋಲಿಸಿ ಆ ಪಕ್ಷ ನಗೆ ಪಾಟಲಿಗೀಡಾಗಿದೆಂದರು.ಮೋದಿ ಎಂದವರ ಕಪಾಳಕ್ಕೆ ಹೊಡಿ ಎಂದು ಸಚಿವ ತಂಗಡಿಗೆ ಹೇಳಿದ್ದಾನೆ, ಅವರಿಗೆ ರಾಜ್ಯದ ಮತದಾರರೇ ನಿಮಗೆ ಚುನಾವಣೆಯಲ್ಲಿ ಕಪಾಳ ಮೋಕ್ಷ ಮಾಡಲಿದ್ದಾರೆಂದರು.
ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಆದರೆ ದೇಶದ ಅರ್ಥಿಕ ಸ್ಥಿತಿಯನ್ನು ಮೋದಿ ಅವರು 13 ನೇ ಸ್ಥಾನದಿಂದ 4 ನೇ ಸ್ಥಾನಕ್ಕೆ ತಂದಿದ್ದಾರೆ ಆದಕ್ಕಾಗಿ ದೇಶದ ಆರ್ಥಿಕ ಸುಭದ್ರತೆಗೆ ಬಿಜೆಪಿ ಅಭ್ಯರ್ಥಿಯನ್ನು ಇಬ್ಬರೂ ಸೇರಿ ಗೆಲ್ಲಿಸೋಣ ಎಂದರು.
ಹಾಲಿ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ದೇವೆಗೌಡರು ಕಪ್ಪು ಚುಕ್ಕೆ ಇಲ್ಲದ ಆಡಳಿತ ನಡೆಸಿದ್ದಾರೆ. ಇಬ್ಬರೂ ರೈತರಿಗೆ ಮತ್ತು ಅವರಿಗೆ ಅವಶ್ಯಕವಾದ ನೀರಾವರಿಗೆ ಒತ್ತು ನೀಡಿದ್ದಾರೆ, ದೇಶದಲ್ಲಿ ಬಿಜೆಪಿ 400 ಸ್ಥಾನ ಗೆಲ್ಲಲು ಶ್ರೀರಾಮುಲು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮಾತನಾಡಿ, ಬಳ್ಳಾರಿ ಲೋಕಸಭಾ ಅಭ್ಯರ್ಥಿ ಶ್ರೀರಾಮುಲು ನನಗೆ ಮಾವ ಇದ್ದಂತೆ ಅವರನ್ನು ನಾವು ನೀವು ಸೇರಿ ಗೆಲ್ಲಿಸಲೇಬೇಕೆ ಎಂದು ಚಪ್ಪಾಳೆ ಗಿಟ್ಟಿಸಿಕೊಂಡರು. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಜೆಡಿಎಸ್ ಪಕ್ಷ ನಿರ್ಧರಿಸಿ ಬಿಜೆಪಿ ಬೆಂಬಲಕ್ಕೆ ನಿಂತಿದೆ. ಪಕ್ಷದ ಹೈ ಕಮಾಂಡ್ ನಿರ್ಧಾರದಂತೆ ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದರು.
ಶ್ರೀರಾಮುಲು ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದೆ. 2006 ರಲ್ಲಿನ ಮೈತ್ರಿ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡಿರುವೆ. ನಮ್ಮ ಈ ಪಕ್ಷಗಳು ಒಂದಾದಾಗಲೆಲ್ಲ ಭಯಬೀಳುವ ಕಾಂಗ್ರೆಸ್ ನಮ್ಮನ್ನು ಒಡೆಯುವ ಕುತಂತ್ರವನ್ನು ಮಾಡುತ್ತದೆಂದು ಆರೋಪಿಸಿದರು.
ದೇವೆಗೌಡರ ಗರಡಿಯಲ್ಲಿ ಬೆಳೆದ ಅವಕಾಶವಾದಿಗಳು ಈಗ ಅವರ ವಿರುದ್ದ ಮಾತನಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡರು ಮತ್ತು ಹಾಲಿ ಪ್ರಧಾನಿ ಮೋದಿ ಅವರಿಂದ ರಾಜ್ಯದಲ್ಲಿ ಈ ಮೈತ್ರಿ ಬೃಹತ್ ಶಕ್ತಿಯಾಗಿ ಹೊರ ಹೊಮ್ಮಲಿದೆಂದರು. ಇಂಡಿಯಾ ಮೈತ್ರಿಕೂಟದಿಂದ ಒಬ್ಬೊಬ್ಬೆ ನಾಯಕರು ಕಳಚಿದ್ದಾರೆ. ಇದರಿಂದ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲವೆಂದು ಮೋದಿ ಅವರ ಹ್ಯಾಟ್ರಿಕ್ ಗೆಲುವನ್ನು ತಡೆಯಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅವರ ಆಡಳಿತದಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿ. ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿರುವುದರಿಂದ ಕಾಂಗ್ರೆಸ್ ಗೆ ಟೆನ್ಷನ್ ಶುರುವಾಗಿದೆ. ಜೆಡಿಎಸ್ ಮತ್ತು ಬಿಜೆಪಿಯ ಸುನಾಮಿಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ನಾವು ರಾಜ್ಯದ 28 ಕ್ಷೇತ್ರಗಳಲ್ಲೂ ಜಯ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಗಿಬೊಮ್ಮನಹಳ್ಳಿ ಶಾಸಕ ಶಾಸಕ ನೇಮಿರಾಜ ನಾಯ್ಕ, ಮಾಜಿ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ರಾಜಾ ವೆಂಕಟಪ್ಪ ನಾಯಕ ಮುಖಂಡರಾದ ಎಂ.ಎಂ.ಜೆ.ಹರ್ಷವರ್ಧನ, ಓಬಳೇಶ್, ವಸಿಗೇರಪ್ಪ, ಲಕ್ಷ್ಮೀಕಾಂತ ರೆಡ್ಡಿ, ಮೀನಳ್ಳಿ ರಮೇಶ್, ಬಾದಾಮಿ ಮೃತ್ಯುಂಜಯ, ಭವಾನಿ, ಓದೋ ಗಂಗಪ್ಪ, ಪಕ್ಷದ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಕೆ. ಕೊಟ್ರೇಶ ಮೊದಲಾದವರು ಇದ್ದರು.
ಅಮಾತಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.