
ಬಿತ್ತನೆ ಬೀಜ, ಗೊಬ್ಬರಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಿ : ಸಿಎಂ ಸಿದ್ಧರಾಮಯ್ಯ
ಕರುನಾಡ ಬೆಳಗು ಸುದ್ದಿ
ವಿಜಯನಗರ, 21- ರೈತರಿಗೆ ಬೀಜ ಗೊಬ್ಬರ ಸಿಕ್ಕಿಲ್ಲ ಎಂದು ರೈತರು ಬೀದಿಗಿಳಿಯದ ಹಾಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಿತ್ತನೆಗೆ ಸಮರ್ಪಕ ಬೀಜ ಮತ್ತು ರಸಗೊಬ್ಬರ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ಜೂನ್ 21ರಂದು ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಜಾನುವಾರುಗಳಿಗೆ ಮೇವು, ಜನರಿಗೆ ಕುಡಿಯುವ ನೀರು, ಕೆಲಸ ಕೇಳಿ ಬರುವವರಿಗೆ ಉದ್ಯೋಗ ಕೊಡುವುದರಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದ ಹಾಗೆ ಕ್ರಮ ವಹಿಸಬೇಕು ಎಂದು ಸಿಎಂ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನೀವು ನಿಯಮಿತವಾಗಿ ಪ್ರವಾಸ ಮಾಡುತ್ತೀರಾ? ಹಳ್ಳಿಗಳಿಗೆ ಹೋಗುತ್ತೀರಾ? ಪ್ರತಿದಿನ ಡೈರಿ ನಿರ್ವಹಣೆ ಮಾಡುತ್ತೀರಾ? ಎಂದು ಜಂಟಿ ಕೃಷಿ ನಿರ್ದೇಶಕರ ಡೈರಿ ಕೇಳಿದ ಮುಖ್ಯಮಂತ್ರಿಗಳು, ಕೃಷಿ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇರಬೇಕು. ಎಲ್ಲರೂ ಪಟ್ಟಣ, ನಗರಕ್ಕಷ್ಟೇ ಸೀಮಿತವಾಗಬಾರದು. ಅಧಿಕಾರಿಗಳು ಹಳ್ಳಿಗಳಲ್ಲಿ ಸಹ ಇರಬೇಕು. ಹೋಬಳಿಯಲ್ಲಿ ಹಾಗು ತಾಲೂಕಿನಲ್ಲಿ ಇರುವವರು ಅಲ್ಲಿಯೇ ವಾಸ್ತವ್ಯ ಮಾಡಬೇಕು ಎಂದು ಸೂಚನೆ ನೀಡಿದರು.
ಹಳ್ಳಿಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳು ಕೇಳಿದರು. ಮೇವು ಸರಬರಾಜು ಮತ್ತು ಕುಡಿಯುವ ನೀರು ಪೂರೈಕೆಗೆ ಯಾವುದೇ ಹಣಕಾಸಿನ ಕೊರತೆ ಇರುವುದಿಲ್ಲ. ಕುಡಿಯುವ ನೀರಿನ ಕೊರತೆ ಎದುರಾದ ಗ್ರಾಮಗಳಲ್ಲಿ ಜನತೆಗೆ ತೊಂದರೆಯಾಗದ ಹಾಗೆ ಖಾಸಗಿ ಬೋರವೆಲ್ ಮೂಲಕ ನೀರು ಪೂರೈಸಿ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದರು.
ಜಿಲ್ಲೆಯಲ್ಲಿ 683 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 631 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು 52 ಯಾಕೆ ಕಾರ್ಯ ನಿರ್ವಹಿಸುತ್ತಿಲ್ಲ. ಇವು ಎಷ್ಟು ದಿನಗಳಿಂದ ಕಾರ್ಯನಿರ್ವಹಿಸದೇ ಹಾಗೆ ನಿಂತಿವೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಜಿಲ್ಲೆಯಲ್ಲಿನ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಯುದ್ದೋಪಾದಿಯಲ್ಲಿ ಸರಿಪಡಿಸಲು ಕೂಡಲೇ ಅಗತ್ಯ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕೆಲವು ಹಳ್ಳಿಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಸಾಮಾನುಗಳು, ಪಂಪಸೆಟ್ ಗಳು ಕಳ್ಳತನ ಪ್ರಕರಣಗಳು ಮರುಕಳಿಸಿ ಘಟಕ ದುರಸ್ತಿ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಶುದ್ಧ ಕುಡಿಯುವ ನೀರಿನ ಘಟಕಗಳ ಸಾಮಾನುಗಳಿರಲಿ, ಇನ್ನೀತರ ಸರಕಾರದ ಸೊತ್ತಿನ ವಿದ್ಯುತ್ ತಂತಿ, ಪಂಪಸೇಟ್ ಮತ್ತು ಇನ್ನೀತರ ಬೆಲೆ ಬಾಳುವ ಯಾವುದೇ ವಸ್ತುಗಳ ಕಳ್ಳತನಕ್ಕೆ ಬ್ರೇಕ್ ಹಾಕಬೇಕು. ಹಳ್ಳಿಗಳಲ್ಲಿ ಅವ್ಯಾಹತವಾಗಿ ನಡೆಯುವ ಇಸ್ಪಿಟ್ ಮಟ್ಕಾ ದಂಧೆ ತಡೆಯಬೇಕು ಎಂದು ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿಗಳು ಸೂಚಿಸಿದರು. ಜಿಲ್ಲೆಯಲ್ಲಿ ಎಲ್ಲ ಠಾಣೆಗಳ ಪಿಎಸ್ಐ ಅವರೊಂದಿಗೆ ನಿಯಮಿತವಾಗಿ ಸಭೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈ ಸಂಬಂಧ 26 ಪ್ರಕರಣಗಳನ್ನು ದಾಖಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿಬಾಬು ಅವರು ತಿಳಿಸಿದರು.
ರೈತ ಆತ್ಮಹತ್ಯೆ ಪ್ರಕರಣಗಳ ಪರಿಶೀಲನೆ : ಸಭೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಚರ್ಚೆ ನಡೆಯಿತು. 2023-24ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹೆಸರು ನೋಂದಾಯಿಸಿದ 35,838 ರೈತರ ಪೈಕಿ 29,510 ರೈತರಿಗೆ 8576 ಲಕ್ಷ ರೂ ಪರಿಹಾರ ನೀಡಲಾಗಿದೆ. 2024-25ನೇ ಸಾಲಿನಲ್ಲಿ ಜೂನ್ 15ರವರೆಗೆ 5174 ರೈತರು ಹೆಸರು ನೊಂದಾಯಿಸಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 2023-24ನೇ ಸಾಲಿನಲ್ಲಿ ವರದಿಯಾದ ಒಟ್ಟು 34 ರೈತ ಆತ್ಮಹತ್ಯೆ ಪ್ರಕರಣಗಳ ಪೈಕಿ 8 ತಿರಸ್ಕೃತವಾಗಿವೆ. 20ಕ್ಕೆ ಪರಿಹಾರ ನೀಡಲಾಗಿದೆ. ಪರಿಹಾರ ಧನ ವಿತರಣೆಗಾಗಿ ಡಿಬಿಟಿ ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ಪಾವತಿಯಾಗದೇ 6 ಬಾಕಿ ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಆದ್ಯತೆಯ ಮೇಲೆ ಪರಿಹಾರಕ್ಕೆ ಕ್ರಮ ವಹಿಸಬೇಕು. ರೈತರ ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬೇಕು. ಒಣ ಭೂಮಿ ಇರುವ ಕಡೆಗೆ ಕೃಷಿ ಹೊಂಡ ಜಾಸ್ತಿ ಮಾಡಿಸವೇಕು ಎಂದು ಮುಖ್ಯಮಂತ್ರಿಗಳು ಇದೆ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಡಿಪಿಐಗೆ ತರಾಟೆ : ಎಸ್‌ಎಸ್‌ಎಲ್‌ಸಿಯಲ್ಲಿ 10ನೇ ಸ್ಥಾನದಲ್ಲಿದ್ದ ಜಿಲ್ಲೆಯು 27ನೇ ಸ್ಥಾನಕ್ಕೆ ಕುಸಿದಿದ್ದೇಕೆ? ಇದಕ್ಕೆ ಯಾರು ಜವಾಬ್ದಾರರು? ಇದಕ್ಕೆ ಹೊಣೆ ಯಾರು? ಡಿಡಿಪಿಐ ಮತ್ತು ಬಿಇಓ ಅವರ ಮೇಲೆ ಯಾಕೆ ಕ್ರಮ ಜರುಗಿಸಬಾರದು ಎಂದು ಮುಖ್ಯಮಂತ್ರಿಗಳು ಡಿಡಿಪಿಐ ಅವರಿಗೆ ತರಾಟೆ ತೆಗೆದುಕೊಂಡು. ಡಿಡಿಪಿಐ ಮತ್ತು ಬಿಇಓ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಸಿಎಂ ಅವರು ವಿಜಯನಗರ ಜಿಲ್ಲೆಯ ಉಪ ನಿರ್ದೇಶಕರನ್ನ ಅಮಾನತ್ತು ಗೊಳಿಸಲು ಸೂಚನೆ ನೀಡಿದರು. ಉಳಿದಂತೆ ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ತಿಳಿಸಿದರು.
ನರೇಗಾ ಪ್ರಗತಿ : ನರೇಗಾ ಅನುಷ್ಠಾನದ ಬಗ್ಗೆ ಸಿಎಂ ಅವರು ಕೇಳಿದರು. 2024-25 ಸಾಲಿನ ವಾರ್ಷಿಕ ಮಾನವ ದಿನಗಳ ಗುರಿ ಆರು ತಾಲೂಕುಗಳು ಸೇರಿ 73 ಲಕ್ಷ ಮಾನವ ದಿನಗಳ ಗುರಿಯಿದ್ದು, ಈ ಪೈಕಿ ಜೂನ್ ತಿಂಗಳವರೆಗೆ 33.95 ಲಕ್ಷ ಸಾಧನೆಯಾಗಿದ್ದು, ಜೂನವರೆಗೆ ಶೇ.91.24ರಷ್ಟು ಸಾಧನೆಯಾಗಿದೆ ಎಂದು ಜಿಪಂ ಸಿಇಓ ಸದಾಶಿವ ಪ್ರಭು ಬಿ ಅವರು ತಿಳಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರಾದ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್, ವಿವಿಧ ವಿಧಾನಸಭಾ ಮತಕ್ಷೇತ್ರಗಳ ಶಾಸಕರು ಮತ್ತು ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ, ಸಹಾಯಕ ಆಯುಕ್ತರಾದ ಮೊಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಂ ಪಾಶಾ, ಜಿಪಂ ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ ಜೆ.ಎಂ, ತಹಸೀಲ್ದಾರರು, ತಾಪಂ ಇಓಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.