
ಭವಿಷ್ಯತ್ತಿನ ನಿರ್ಮಾಣಕ್ಕಾಗಿ ವರ್ತಮಾನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ಎಂ.ಪ್ರಭಂಜನಕುಮಾರ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,23- ಭವಿಷ್ಯತ್ತಿನಲ್ಲಿ ಉತ್ತಮ ಬದುಕು ನಿಮ್ಮದಾಗಬೇಕೆಂದರೆ ವರ್ತಮಾನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡರೆ ಮಾತ್ರ ಸಾಧ್ಯ ಎಂದು ಮಹಾನಗರ ಪಾಲಿಕೆಯ ಸದಸ್ಯ ಎಂ.ಪ್ರಭಂಜನಕುಮಾರ್ ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪುನರ್ ಮನನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿಯ ಬದುಕಿನಲ್ಲಿ ಬಾಲ್ಯಾವಸ್ಥೆಯಲ್ಲಿ ಪೋಷಣೆ ಸರಿಯಾಗಿ ಸಿಕ್ಕಾಗ ಹೇಗೆ ಆರೋಗ್ಯವಂತರಾಗುತ್ತಾರೋ, ಅದೇ ರೀತಿ 15 ರಿಂದ 25 ವರ್ಷದವರೆಗಿನ ಅವಧಿಯು ವೃತ್ತಿ ಬದುಕು ಹಾಗೂ ವ್ಯಕ್ತಿತ್ವ ರೂಪಿಸುವ ಪ್ರಮುಖ ಘಟ್ಟವಾಗಿದೆ ಎಂದರು.
ಪದವಿ ವ್ಯಾಸಂಗ ಮಾಡುತ್ತಿರುವ ನೀವು ಜವಾಬ್ದಾರಿಯುತವಾಗಿ ನಿಮ್ಮ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ಭವಿಷ್ಯಕ್ಕೆ ಬುನಾದಿ ಹಾಕಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಸ್ಪರ್ಧಾ ಜಗತ್ತಿನಲ್ಲಿ ಅರ್ಹತೆ ಗಳಿಸುವುದು ಸುಲಭವಾದ ವಿಷಯವಲ್ಲ ಎಂದರು.
ಟಿ.ವಿಶ್ವನಾಥ್, ರಘುಪತಿ ಆಚಾರ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಸಸಅ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಕೆ.ಮಂಜುನಾಥರೆಡ್ಢಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇತ್ತೀಚೆಗೆ ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ
ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪಾಲಿಕೆ ಸದಸ್ಯ ಪ್ರಭಂಜನಕುಮಾರ್ ಅವರಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಸ್.ಕೆ.ಸಲ್ಮಾ, ವಿಶ್ವನಾಥ ನಾಯ್ಕ, ರೇಷ್ಮಾ ಪಾಲಿಕೆ ಸದಸ್ಯ ನೂರ್ ಮೊಹಮ್ಮದ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ ದಿನ್ನಿ ಮತ್ತಿತರರು ವೇದಿಕೆಯಲ್ಲಿದ್ದರು.