ವೀಣಾ ಪಾಟೀಲ್

ಮಕ್ಕಳ ಆಂತರಿಕ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ : ವೀಣಾ ಪಾಟೀಲ್

ಕರುನಾಡ ಬೆಳಗು ಸುದ್ದಿ

ತ್ರಿಭುಜಕ್ಕೆ ಇರುವುದು ಮೂರು ಬಾಹುಗಳು ಮತ್ತು ಮೂರು ಕೋನಗಳು. ಈ ಮೂರು ಬಾಹುಗಳು ಒಂದನ್ನೊಂದು ಮೂರು ಕೋನಗಳಲ್ಲಿ ಸಂಧಿಸದೆ ಇದ್ದರೆ ಅದನ್ನು ತ್ರಿಭುಜವೆಂದು ಪರಿಗಣಿಸಲಾಗುವುದಿಲ್ಲ. ಹಾಗೆಯೇ ಮಕ್ಕಳ ಆಂತರಿಕ ಬೆಳವಣಿಗೆಯಲ್ಲಿ ಇರುವ ಮೂರು ಭುಜಗಳು ಪಾಲಕರು, ಶಿಕ್ಷಕರು ಮತ್ತು ಮಕ್ಕಳು. ಈ ಮೂರು ಜನರು ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯನಿರ್ವಹಿಸಲೆಬೇಕು ಅದು ಅವಶ್ಯಕವೂ ಹೌದು ಅನಿವಾರ್ಯವೂ ಹೌದು.

ಎಲ್ಲೋ ಒಂದೆಡೆ ಓದಿದ ನೆನಪು ಪಾಲಕರು ಮತ್ತು ಶಿಕ್ಷಕರ ಮೀಟಿಂಗ್ ನಲ್ಲಿ ಮಕ್ಕಳು ಹಾದಿ ತಪ್ಪಿರುವುದಕ್ಕೆ ಕಾರಣಗಳನ್ನ ಕೇಳಿದಾಗ ಶಿಕ್ಷಕರು ಹೇಳಿದ್ದು ಪಾಲಕರು ಮಕ್ಕಳನ್ನು ಸರಿಯಾಗಿ ಕಾಳಜಿ ಮಾಡುವುದಿಲ್ಲ ಎಂದು, ಎಷ್ಟೋ ಜನ ಪಾಲಕರಿಗೆ ತಮ್ಮ ಮಕ್ಕಳು ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎಂಬ ನೆನಪು ಕೂಡ ಇರುವುದಿಲ್ಲ, ಇನ್ನೂ ಕೆಲವು ಪಾಲಕರು ಮಕ್ಕಳ ಪಠ್ಯಪುಸ್ತಕದ ಬ್ಯಾಗನ್ನು ತಾವೇ ತರಗತಿಯ ಕೋಣೆಯವರೆಗೂ ತಂದುಕೊಡುವುದರಿಂದ ಹಿಡಿದು ಮನೆ ಕೆಲಸಗಳನ್ನು ಕೂಡ ತಾವೇ ಮಾಡುವಷ್ಟು ವಿಪರೀತ ಎನಿಸುವಷ್ಟು ಕಾಳಜಿಯನ್ನು ಹೊಂದಿರುತ್ತಾರೆ. ಆದ್ದರಿಂದ ಮಕ್ಕಳು ಹಾದಿ ತಪ್ಪಲು ಪಾಲಕರೇ ಕಾರಣ ಎಂದು ಹೇಳಿದರು.

ಇದೇ ಪ್ರಶ್ನೆಯನ್ನು ಪಾಲಕರಿಗೆ ಕೇಳಿದಾಗ ಅಯ್ಯೋ ಈ ಶಿಕ್ಷಕರಿದ್ದಾರಲ್ರಿ ತುಂಬಾ ಹೋಂವರ್ಕ್ ಕೊಟ್ಟು ಬಿಡ್ತಾರೆ ಭಾರ ಮಕ್ಕಳು ಅದೆಲ್ಲವನ್ನು ಓದಿ ಬರೆಯುವುದು ಅವರಿಗೆ ಕಷ್ಟ ಆಗುತ್ತೆ, ಇಲ್ಲದೆ ಹೋದರೆ ಮಕ್ಕಳ ಎಲ್ಲಾ ರೀತಿಯ ಅವನತಿಗೆ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ. ಇದು ಹೇಗಿದೆ ಎಂದರೆ ಇಸ್ಕಿ ಟೋಪಿ ಉಸ್ಕಿ ಸರ್ ಉಸ್ಕಿ ಟೋಪಿ ಇಸ್ಕಿ ಸರ್.., ಅರ್ಥಾತ್ ಅವರ ಟೋಪಿಗೆಯನ್ನ ಇವರ ತಲೆಯ ಮೇಲೆ ಇವರ ಟೊಪ್ಪಿಗೆಯನ್ನು ಅವರ ತಲೆಯ ಮೇಲೆ ಗೂಬೇ ಕೂರಿಸಿದಂತೆ ಕೂರಿಸುತ್ತಾರೆ. ಎಷ್ಟೋ ಬಾರಿ ಆರೋಪ ಪ್ರತ್ಯಾರೋಪಗಳ ಸರಣಿ ವಾಗ್ವಾದದಿಂದ…. ಕೈ ಕೈ ಮಿಲಾಯಿಸುವವರೆಗೆ ಹೋಗುತ್ತದೆ.

ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ಮಗು ತನಗೆ ದೊರೆಯುವ 24 ಗಂಟೆಗಳಲ್ಲಿ ಮೂರನೇ ಒಂದು ಭಾಗವನ್ನು ಅಂದರೆ ಸುಮಾರು ಒಂಬತ್ತು ಗಂಟೆಗಳ ಕಾಲ ನಿದ್ದೆ ಮಾಡುತ್ತದೆ ಎಂದಾದರೆ ಇನ್ನುಳಿದ 16 ಗಂಟೆಗಳಲ್ಲಿ ಮುಂಜಾನೆ 10 ರಿಂದ ಸಂಜೆ 5 ವರೆಗೆ ಸುಮಾರು ಏಳು ಗಂಟೆಗಳ ಕಾಲ ಶಿಕ್ಷಕರೊಂದಿಗೆ ಇರುತ್ತಾರೆ. ಹಾಗಾದರೆ ಮನೆಯಲ್ಲಿ ಕೂಡ ಅಷ್ಟೇ ಸಮಯ ಇರುವ ಮಕ್ಕಳು ತಮ್ಮ ಬಾಲ್ಯಾವಸ್ಥೆಯ ಮೂರನೇ ಒಂದು ಭಾಗವನ್ನು ಶಾಲೆಯಲ್ಲಿ, ಒಂದು ಭಾಗವನ್ನು ಮನೆಯಲ್ಲಿ ಮತ್ತೊಂದು ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತಾರೆ. ಮತ್ತೆ ತ್ರಿಭುಜದ ಲೆಕ್ಕಕ್ಕೆ ಬರುವುದಾದರೆ ಮೂರು ಬಾಹುಗಳು ಏಕತ್ರವಾಗಿ ಕಾರ್ಯನಿರ್ವಹಿಸಿದರೆ ಮಕ್ಕಳ ಮಾನಸಿಕ, ದೈಹಿಕ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ರೂವಾರಿಗಳು ಎಂದು ಪಾಲಕರು ಮತ್ತು ಶಿಕ್ಷಕರನ್ನು ನಾವು ಕರೆಯಬಹುದು.

ಪರಸ್ಪರ ಒಬ್ಬರಿಗೊಬ್ಬರು ದೂರುತ್ತ ಆರೋಪ ಪ್ರತ್ಯಾರೋಪಗಳನ್ನು ಮಾಡುವುದರ ಬದಲು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಪರಸ್ಪರ ಸಹಾಯ ಸಹಕಾರ ಮನೋಭಾವನೆಯಿಂದ ನಡೆಯುವುದು ಅತ್ಯಂತ ಅವಶ್ಯಕ. ತಮಗೇನೇ ಮಕ್ಕಳ ಕುರಿತ ಸಮಸ್ಯೆಗಳು ಬಂದಾಗ ಮಕ್ಕಳ ಮೂಲಕ ಪಾಲಕರನ್ನು ಶಿಕ್ಷಕರನ್ನು ದೂರುವುದರ ಬದಲು ತಾವೇ ಪರಸ್ಪರ ಕುಳಿತು ಚರ್ಚಿಸುವುದು ಒಳಿತು. ಶಿಕ್ಷಕರನ್ನು ದೂರುವ ತಂದೆ ತಾಯಿಗಳು ಮತ್ತು ಪಾಲಕರನ್ನು ದೂರುವ ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಅವರ ಕುರಿತ ಉಪೇಕ್ಷಿತ ಭಾವನೆಯನ್ನು ಹೊಂದುವಂತೆ ಮಾಡುತ್ತಾರೆ. ಇದು ಮಗುವಿನ ಬೆಳವಣಿಗೆಯಲ್ಲಿ ಅನಪೇಕ್ಷಿತ.
ಇನ್ನೂ ಹಲವು ಬಾರಿ ಪೋಷಕರು ಶಿಕ್ಷಕರನ್ನು ತಮ್ಮ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಲು ವಿಪರೀತ ಒತ್ತಡ ಹೇರುತ್ತಾರೆ ಅದು ಕೂಡ ಸಲ್ಲದು. ಎಲ್ಲಾ ಮಕ್ಕಳನ್ನು ಶಿಕ್ಷಕರು ಏಕ ಪ್ರಕಾರದಲ್ಲಿ ನೋಡಿಕೊಳ್ಳಬೇಕಾಗಿರುವುದು ಆ ಶಿಕ್ಷಕರ ಆದ್ಯ ಕರ್ತವ್ಯವಾಗಿರುತ್ತದೆ ಮತ್ತು ಹಾಗೆ ಅವರು ತರಬೇತು ಮಾಡಲ್ಪಟ್ಟಿರುತ್ತಾರೆ. ಈ ರೀತಿಯ ಒತ್ತಡಗಳು ಆ ಶಿಕ್ಷಕರನ್ನು ಬಲಹೀನಗೊಳಿಸುತ್ತವೆ. ಇದು ಸುತಾರಾಂ ಸಲ್ಲದು.

ಹಾಗಾದರೆ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು ಶಿಕ್ಷಕರು ಮತ್ತು ಮಕ್ಕಳು ಯಾವ ರೀತಿ ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸಬೇಕು ಎಂಬುದರ ಬಗ್ಗೆ ನೋಡೋಣ.

ಪಾಲಕರು…. 1. ತಮ್ಮ ಮಕ್ಕಳ ಶಿಕ್ಷಕರನ್ನು ಗೌರವಿಸುವುದನ್ನು ಕಲಿಯಬೇಕು. ಮಕ್ಕಳ ಮುಂದೆ ಶಿಕ್ಷಕರನ್ನು ಏಕವಚನದಲ್ಲಿ ಸಂಬೋಧಿಸುವುದಾಗಲಿ ‘ಇದನ್ನೇ ಕಲಿಸಿದಾನ ನಿಮ್ಮ ಮಾಸ್ತರ’ ಎಂದು ಹೇಳುವುದಾಗಲಿ ಮಾಡಬಾರದು.

2 ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಹಿರಿಯರ ನುಡಿಯಂತೆ ಮಕ್ಕಳನ್ನು ಗುರುವಿನ ಆಣತಿಯಂತೆ ನಡೆದುಕೊಳ್ಳಲು ಪ್ರೋತ್ಸಾಹಿಸಬೇಕು.

3 ಶಿಕ್ಷಕರು ಮಕ್ಕಳಿಗೆ ಮನೆ ಕೆಲಸವನ್ನು ಕೊಟ್ಟಾಗ ಮಗುವಿಗೆ ಮಾಡಲು ಸಾಧ್ಯವಾಗದೆ ಹೋದರೆ, ಆ ಮಗುವಿನ ಬದಲು ನೀವೇ ಆ ಕೆಲಸವನ್ನು ಮಾಡಬಾರದು ಬದಲಾಗಿ ತಾನು ಮಾಡಿಕೊಳ್ಳಲಾಗದೆ ಇರುವ ಸತ್ಯವನ್ನು ಮಗು ಒಪ್ಪಿಕೊಳ್ಳಲು ಮತ್ತು ಶಾಲೆಯಲ್ಲಿ ಕೊಡುವ!! ಶಿಕ್ಷೆಗಳಿಗೆ ಮಗು ತನ್ನನ್ನು ತಾನು ಒಡ್ಡಿಕೊಳ್ಳಲು ಪ್ರೋತ್ಸಾಹಿಸಿ. ತನ್ಮೂಲಕ ಮಗುವಿಗೆ ಸೋಲುವುದನ್ನು, ಸೋಲೊಪ್ಪಿಕೊಳ್ಳುವುದನ್ನು ಮತ್ತು ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವ ಪಾಠವನ್ನು ಹೇಳಿಕೊಡಿ. ತಪ್ಪಿದರೆ ತಿದ್ದಿಕೊಳ್ಳಲು ಅವಕಾಶ ನೀಡಿ, ತಿದ್ದಿಕೊಂಡದ್ದನ್ನು ಗುರುತಿಸಿ ಪ್ರಶ0ಸಿಸಿ ಮತ್ತು ಪ್ರೋತ್ಸಾಹಿಸಿ.

ಶಿಕ್ಷಕರು… ಅಜ್ಞಾನವೆಂಬ ಕತ್ತಲು ಈ ಜಗತ್ತನ್ನು ಮೆಟ್ಟಿದಾಗ ಜ್ಞಾನವೆಂಬ ಶಲಾಕೆಯಿಂದ ಬೆಳಕು ತೋರುವ ವ್ಯಕ್ತಿ ಶಿಕ್ಷಕ. ಮನೆಯೆಂಬ ಸುರಕ್ಷಿತ ವಲಯದ ನಂತರ ಮಗು ತುಂಬಾ ನಂಬುವುದು, ಆಪ್ತವಾಗುವುದು ತನ್ನ ಶಾಲೆಯ ಶಿಕ್ಷಕರಿಗೆ ಮಾತ್ರ. ಕಾರಣ ಶಿಕ್ಷಕರು ಮಗುವಿನ ನಂಬಿಕೆಗೆ ಕಿಂಚಿತ್ತು ನೋವಾಗದಂತೆ ನಡೆದುಕೊಳ್ಳಬೇಕು ಮತ್ತು ಅದೇ ಸಮಯದಲ್ಲಿಯೇ ಮಗುವಿನ ತಪ್ಪುಗಳನ್ನು ನಯವಾಗಿಯೇ ಮಾತಿನ ಮೂಲಕ ತಿದ್ದುವ ಪ್ರಯತ್ನ ಮಾಡಬೇಕು. ಮಕ್ಕಳ ಪಾಲಕರನ್ನು ಅವರು ಎಷ್ಟೇ ಸಿರಿವಂತರಿರಲಿ, ಕಡು ಬಡವರೇ ಇರಲಿ, ಬಲಾಢ್ಯರಿರಲಿ ದುರ್ಬಲರೇ ಇರಲಿ ಗೌರವಯುತವಾಗಿ ಮಗುವಿನ ಮುಂದೆ ಸಂಭೋಧಿಸಬೇಕು. ಆಗ ಮಾತ್ರ ಮಗು ಮೇಲೆ ಇಲ್ಲವೇ ಕೀಳರಿಮೆಯಿಂದ ಬಳಲುವುದು ತಪ್ಪುತ್ತದೆ. ಕೀಳರಿಮೆ ಮಗುವನ್ನು ಒಂದು ರೀತಿಯಲ್ಲಿ ಸಂಕುಚಿತಗೊಳಿಸಿದರೆ ಮೇಲರಿಮೆ ಅದಕ್ಕಿಂತಲೂ ಕೆಟ್ಟದ್ದು. ಮಕ್ಕಳನ್ನು ಹೀಯಾಳಿಸದೆ, ಸತಾಯಿಸದೆ ಕಷ್ಟವಾದರೂ ಸರಿ ನಿಧಾನವಾಗಿ ಪ್ರೀತಿಯಿಂದ ಹೇಳಿಕೊಟ್ಟರೆ ಮಗು ಖ0ಡಿತವಾಗಿಯೂ ಆ ವಿಷಯದಲ್ಲಿ ಪರಿಣತಿಯನ್ನು ಪಡೆಯುತ್ತದೆ. ಅದಕ್ಕೆ ತಾನೇ ಹೇಳುವುದು “ಲವ್ ದ ಟೀಚರ್ ಲಾಂಗ್ ದಿ ಸಬ್ಜೆಕ್ಟ್” ಎಂದು.

ಹೀಗೆ ಪಾಲಕ, ಶಿಕ್ಷಕರಿಬ್ಬರೂ ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯನಿರ್ವಹಿಸಿದರೆ ಮಗುವಿನ ಭವಿಷ್ಯದ ಭದ್ರ ಬುನಾದಿ ಹಾಕಿದಂತಾಗುತ್ತದೆ. ಭದ್ರವಾದ ಬುನಾದಿಯ ಮೇಲೆ ಮಗುವಿನ ಶೈಕ್ಷಣಿಕ ಕಟ್ಟಡ ಮಜಬೂತಾಗಿ ಕಟ್ಟಲ್ಪಡುತ್ತದೇ. ಹಾಗೆಯೇ ಪಾಲಕ ಶಿಕ್ಷಕರಿಬ್ಬರೂ ಕಣ್ಣೆರಡಾದರೂ ನೋಟ ಒಂದೇ ಎಂಬಂತೆ ಇದ್ದಾಗ ಮಕ್ಕಳು ತಕರಾರಿಲ್ಲದೆ ಚೆನ್ನಾಗಿ ಓದುತ್ತಾರೆ, ನೆವಗಳು ಕಡಿಮೆಯಾಗುತ್ತವೆ ಮತ್ತು ಓದಿನೆಡಗಿನ ಮಗುವಿನ ದೃಷ್ಟಿಕೋನ ಸ್ಪಷ್ಟ, ನಿಖರ ಮತ್ತು ನಿರಾತಂಕ ಭಾವವನ್ನು ಹೊಂದುತ್ತದೆ. ಹೀಗೆ ಪಾಲಕ ಮತ್ತು ಶಿಕ್ಷಕರು ನೀರುಣಿಸಿ ಗಟ್ಟಿಯಾದ ಬೇರುಗಳನ್ನು ಹೊಂದಿರುವ ಮಕ್ಕಳು ಎಂಬ ಮರಗಳು ಆಕಾಶದತ್ತ ಕೈ ಚಾಚಿ ಬೆಳೆಯುತ್ತವೆ. ಇನ್ನಿತರರಿಗೆ ನೆರಳನ್ನು ನೀಡುತ್ತಾ ರೆಂಬೆ ಕೊಂಬೆಗಳನ್ನು ಚಾಚುತ್ತಾ ವಿಶಾಲ ವೃಕ್ಷವಾಗಿ ಆಸರೆಯಾಗುತ್ತದೆ.

ಮೂಲತಃ ಸಂಘ ಜೀವಿಯಾಗಿರುವ ಮನುಷ್ಯ ಗುಂಪಿನಲ್ಲಿ ಮಾತ್ರ ಬದುಕಲು ಸಾಧ್ಯ ಅಂತಹ ಸಾವಿರಾರು ಲಕ್ಷಾಂತರ ಮಕ್ಕಳು ಪಾಲಕರು ಮತ್ತು ಶಿಕ್ಷಕರ ಗುಂಪುಗಳು ಜಗದಗಲ ಮುಗಿಲಗಲ ಹರಡಲಿ ಎಂಬ ಆಶಯ ನಮ್ಮದು

ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!