05ca78b6-6d2b-4a2f-85a4-84fbd724ce8e-231x300

 ಮಕ್ಕಳ ಕನಸಿಗೆ ಬಲ ತುಂಬಿ

                                                                                                         –  ವೀಣಾ ಹೇಮಂತ್ ಗೌಡ ಪಾಟೀಲ್

 

ಕರುನಾಡ ಬೆಳಗು ಸುದ್ದಿ

 

ಮೂರನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಕೊನೆಯ ಅವಧಿ ಡ್ರಾಯಿಂಗ್ ನದ್ದಾಗಿತ್ತು. ತರಗತಿಗೆ ಬಂದ ಶಿಕ್ಷಕಿ ಎಲ್ಲ ಮಕ್ಕಳ ಕೈಗೆ ಬಿಳಿ ಬಣ್ಣದ ಡ್ರಾಯಿಂಗ್ ಹಾಳೆಗಳನ್ನು ಕೊಟ್ಟು ಈ ದಿನ ನಾನು ನಿಮಗೆ ಏನೂ ಹೇಳುವುದಿಲ್ಲ ಬದಲಾಗಿ ನೀವೇ ನಿಮ್ಮ ಕನಸಿನ ಬದುಕು ಹೇಗಿರಬೇಕು? ಎಂಬುದರ ಕುರಿತು ಚಿತ್ರ ಬರೆಯಬೇಕು.

ನಿಮಗೆ ನೀವು ವೈದ್ಯನಾಗಬೇಕು ಎಂದಿದ್ದರೆ ವೈದ್ಯಕೀಯ ವಿಷಯಕ್ಕೆ ಸಂಬಂಧಪಟ್ಟ ಆಸ್ಪತ್ರೆ, ಬಿಳಿಯ ಕೋಟು, ಸ್ಟೆತಾಸ್ಕೋಪ್, ಇಂಜಕ್ಷನ್ ಮಾತ್ರೆಗಳ ಡಬ್ಬಿಗಳು ಔಷಧಿಯ ಬಾಟಲಿಗಳು ಚಿತ್ರದಲ್ಲಿರಬೇಕು.

ನೀವು ಇಂಜಿನಿಯರ್ ಆಗಬೇಕು ಎಂದು ಬಯಸಿದರೆ ಯಾವ ವಿಭಾಗದ ಇಂಜಿನಿಯರಿಂಗ್ ಕೌಶಲ್ಯವನ್ನು ನೀವು ಪಡೆಯಬೇಕು ಎಂದು ಬಯಸಿದವರು ಆ ವಸ್ತುಗಳು ನಿಮ್ಮ ಚಿತ್ರದಲ್ಲಿ ಇರಬೇಕು…. ಉದಾಹರಣೆಗೆ ನೀವು ಸಿವಿಲ್ ಇಂಜಿನಿಯರ್ ಆಗಬೇಕೆಂದು ಬಯಸಿದರೆ ಮನೆ ಮತ್ತು ಬೃಹತ್ ಕಟ್ಟಡಗಳು ನಿಮ್ಮ ಚಿತ್ರದಲ್ಲಿ ಇರಬೇಕು.

ಅದೇ ನೀವು ಕಂಪ್ಯೂಟರ್ ಇಂಜಿನಿಯರ್ ಆಗಬೇಕೆಂದು ಬಯಸಿದರೆ ಲ್ಯಾಪ್ಟಾಪ್, ಕಂಪ್ಯೂಟರ್ ಗಳ ಚಿತ್ರ ನೀವು ಬರೆಯುವ ಚಿತ್ರದಲ್ಲಿ ಇರಬೇಕು.
ಇನ್ನು ನೀವು ಶಿಕ್ಷಕರಾಗಬೇಕೆಂದು ಬಯಸಿದರೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳು ನೀವು ಬರೆಯುವ ಚಿತ್ರದಲ್ಲಿ ಇರಬೇಕು ಎಂದು ತಾಕೀತು ಮಾಡಿದರು.

ಮಕ್ಕಳ ಖುಷಿಗೆ ಮೇರೆ ಇರಲಿಲ್ಲ. ಎಲ್ಲರೂ ತಮಗೆ ಕೊಟ್ಟ ಬಿಳಿಯ ಹಾಳೆಯಲ್ಲಿ ತಮ್ಮ ಕನಸನ್ನು ಚಿತ್ರಿಸತೊಡಗಿದರು. ಕೆಲ ನಿಮಿಷಗಳ ಕಾಲ ಅಲ್ಲಿ ಕೇವಲ ಪೆನ್ಸಿಲ್ ಗಳ ಪರಪರ ಶಬ್ದ ಕ್ರೆಯಾನುಗಳ ಬಳಕೆ ಚಾಲ್ತಿಯಲ್ಲಿತ್ತು. ಅಂತಿಮವಾಗಿ ತರಗತಿಯ ಕೊನೆಯ ನಿಮಿಷದಲ್ಲಿ ಮಕ್ಕಳ ಕಾಗದಗಳು ಬಣ್ಣ ಬಣ್ಣದ ರೂಪುಗಳನ್ನು ತಡೆದು ಅವರ ಕನಸಿನ ಸಾಕಾರ ರೂಪವನ್ನು ಪಡೆದಿದ್ದವು.

ಎಲ್ಲರಿಂದಲೂ ಚಿತ್ರಗಳನ್ನು ಹೊಂದಿದ ಕಾಗದಗಳನ್ನು ಸಂಗ್ರಹಿಸಿದ ಶಿಕ್ಷಕಿ ಒಂದೊಂದೇ ಚಿತ್ರಗಳನ್ನು ಪರಿಶೀಲಿಸುತ್ತಾ ಬಂದು ಅಂತಿಮವಾಗಿ ಒಂದು ಕಾಗದವನ್ನು ದಿಟ್ಟಿಸಿ ನೋಡಿದರು. ಅವರ ಮುಖದಲ್ಲಿ ತುಸು ಕೋಪ ಜಿನುಗುತೊಡಗಿತು. ಕೂಡಲೇ ಆ ಕಾಗದವನ್ನು ಕೈಯಲ್ಲಿ ಎತ್ತಿ ಹಿಡಿದು ಎಲ್ಲರಿಗೂ ಕಾಣುವಂತೆ ಎತ್ತಿ ಹಿಡಿದ ಆಕೆ ಈ ಚಿತ್ರವನ್ನು ಬರೆದವರು ಯಾರು? ಎಂದು ಕೇಳಿದರು. ಚಿತ್ರವನ್ನು ನೋಡಿದ ಉಳಿದ ವಿದ್ಯಾರ್ಥಿಗಳು ಅದರ ವರ್ಣ ಸಂಯೋಜನೆ, ಅತಿ ದೊಡ್ಡ ಹುಲ್ಲು ಹಾಸು, ಪಕ್ಕದಲ್ಲಿರುವ ಬೃಹತ್ತಾದ ಕಟ್ಟಡದ ವಿನ್ಯಾಸ ಎಲ್ಲವನ್ನು ನೋಡಿ ಬೆಕ್ಕಸ ಬೆರಗಾಗಿ ಸಂತಸದಿಂದ ಚಪ್ಪಾಳೆ ಹೊಡೆದರು.

ಕೂಡಲೇ ಅದನ್ನು ಬರೆದ ಬಾಲಕ ಎದ್ದು ನಿಂತನು. ಆತನನ್ನು ನೋಡುತ್ತಲೇ ಶಿಕ್ಷಕಿ ಇದು ಏನು ಎಂದು ನೀನು ವಿವರಿಸಬಲ್ಲೆಯಾ?ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಆ ಬಾಲಕ ಇದೊಂದು ದೊಡ್ಡ ತೋಟಗಾರಿಕಾ ಫಾರ್ಮ್. ಇಲ್ಲಿ ಹಲವು ವಿಧದ ಹಣ್ಣುಗಳನ್ನು, ಹೂಗಳನ್ನು ಬೆಳೆಸುವ ಸಂಸ್ಕರಿಸುವ ಮತ್ತು ಮಾರಾಟ ಮಾಡುವ ಆಶಯ ನನ್ನದು ಎಂದು ಎದೆಯುಬ್ಬಿಸಿ ಹೇಳಿದನು. ಶಿಕ್ಷಕಿ ತನ್ನನ್ನು ಬೆನ್ನುಚಪ್ಪರಿಸಿ ಪ್ರೋತ್ಸಾಹಿಸಬಹುದು ಎಂಬ ಆಶಯ ಆ ಬಾಲಕನದಾಗಿತ್ತು.

ಅರೆ! ನಾನು ನಿನಗೆ ಹೇಳಿದ್ದು ನಿನ್ನ ಕನಸಿನ ಉದ್ಯೋಗದ ಕುರಿತು, ಆದರೆ ನೀನು ಇದೇನು ಮಾಡಿಬಿಟ್ಟೆ? ಎಂದು ಹೇಳಿದಾಗ ಆ ಬಾಲಕನ ಉತ್ಸಾಹದ ಬೆಲೂನಿಗೆ ಸೂಜಿ ಚುಚ್ಚಿದಂತಾಯಿತು.ಕನಸು ಕಾಣಬೇಕು, ನಿಜ! ಆದರೆ ಇಷ್ಟು ದೊಡ್ಡ ಕನಸು ನಿನ್ನ ಬದುಕಿಗೆ ಭಾರ ಆಗಬಾರದಲ್ಲವೇ? ಎಂದು ವ್ಯಂಗ್ಯವಾಗಿ ಹೇಳಿದ ಶಿಕ್ಷಕಿ ಆತನ ಚಿತ್ರವನ್ನು ಎತ್ತಿಟ್ಟರು. ಕೆಲವೇ ಕ್ಷಣಗಳ ಹಿಂದೆ ವಿದ್ಯಾರ್ಥಿಗಳ ಪ್ರೀತಿ ಮತ್ತು ಅಚ್ಚರಿಗೆ ಪಾತ್ರವಾಗಿದ್ದ ಚಿತ್ರ ಇದೀಗ ತಮಾಷೆಯ ವಸ್ತುವಾಯಿತು.

ಇದಾಗಿ ಮೂರು ದಶಕಗಳೇ ಕಳೆದು ಹೋದವು.ಅದೊಂದು ದಿನ ತನ್ನ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ನಿವೃತ್ತಿಯ ಅಂಚಿನಲ್ಲಿದ್ದ ಅದೇ ಶಿಕ್ಷಕಿ ಈಗಾಗಲೇ ರಾಜ್ಯದಾದ್ಯಂತ ಹೆಸರುವಾಸಿಯಾಗಿದ್ದ ಆ ಸಂಸ್ಥೆಗೆ ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಕರೆತಂದರು.

ಅಲ್ಲಿ ಸ್ಥಳೀಯವಾಗಿ ಉತ್ಪನ್ನವಾಗುತ್ತಿದ್ದ ಬೆಳೆಗಳನ್ನು ಅಲ್ಲಿಯೇ ಮಾರಾಟ ಮಾಡುವ ವ್ಯವಸ್ಥೆಯನ್ನು ನೋಡಿ ಮಕ್ಕಳು ಬೆರಗಾದರು. ಮತ್ತೊಂದೆಡೆ ಕೆಲ ಬಗೆಯ ವಿಶಿಷ್ಟ ಹಣ್ಣುಗಳನ್ನು ಹೂವುಗಳನ್ನು ಸಂಸ್ಕರಿಸಿ ವಿಶೇಷವಾಗಿ ಪ್ಯಾಕ್ ಮಾಡಲ್ಪಟ್ಟು ಬೇರೆ ರಾಜ್ಯಗಳಿಗೆ ರಫ್ತು ಮಾಡಲು ಸಿದ್ಧತೆ ನಡೆಸಿದ್ದರು. ಮತ್ತೊಂದೆಡೆ ಆ ಎಲ್ಲಾ ಹಣ್ಣುಗಳ ಜ್ಯೂಸ್ ಗಳನ್ನು ಜಾಮ್ ಗಳನ್ನು ಮಾಡಿ ಅಲ್ಲಿಗೆ ಬರುವ ಜನರಿಗೆ ಮಾರಾಟ ಮಾಡಲು ಆಯೋಜಿಸಿದ್ದರು.

ಇನ್ನೊಂದೆಡೆ ವಿವಿಧ ತಳಿಯ ಹಸು, ಎಮ್ಮೆ, ಕುರಿ, ಕೋಳಿ ಆಡುಗಳನ್ನು ಪ್ರತ್ಯೇಕವಾದ ಶೆಡ್ ಗಳಲ್ಲಿ ಸಾಕಲಾಗಿದ್ದು ಅವುಗಳಿಗೆ ತಕ್ಕನಾದ ಆಹಾರ ಮತ್ತು ನೀರನ್ನು ಒದಗಿಸಿ ಅವುಗಳ ಸಂತಾನೋತ್ಪತ್ತಿಗೆ ಅನುವು ಮಾಡಿಕೊಟ್ಟಿದ್ದರು. ಅವುಗಳ ಹಾಲನ್ನು ಹಿಂಡಿ ಪ್ರತ್ಯೇಕವಾಗಿ ಶೇಖರಿಸಿ ಮಾರಾಟ ಮಾಡಲು ಬಳಸಿದರೆ ಮತ್ತೆ ಉಳಿದ ಹಾಲನ್ನು, ಹಾಲಿನ ಉಪ ಉತ್ಪನ್ನಗಳನ್ನು ತಯಾರಿಸಲು ಸ್ಥಳೀಯವಾಗಿ ನೂರಾರು ಜನರಿಗೆ ಉದ್ಯೋಗ ನೀಡಲಾಗಿತ್ತು.

ಯಂತ್ರಗಳ ಸಹಾಯದಿಂದ ಈ ಹಾಲನ್ನು ಕಾಯಿಸಿ ಹೆಪ್ಪು ಹಾಕಿ ಮೊಸರು ಮಾರುತ್ತಿದ್ದರು ಕೂಡ. ಮತ್ತೆ ಒಂದಷ್ಟು ಮೊಸರನ್ನು ಮಜ್ಜಿಗೆಯನ್ನಾಗಿ ಮಾಡಿ ಬೆಣ್ಣೆ ತೆಗೆದು ತಾಜಾ ಬೆಣ್ಣೆಯನ್ನು ಮತ್ತು ಕಾಯಿಸಿದ ತುಪ್ಪವನ್ನು ಕೂಡ ಮಾರಾಟ ಮಾಡಲು ಪ್ಯಾಕ್ ಮಾಡಲಾಗುತ್ತಿತ್ತು ಅಲ್ಲಿಯೂ ಕೂಡ ಸಾಕಷ್ಟು ಜನರು ಕಾರ್ಯನಿರ್ವಹಿಸುತ್ತಿದ್ದರು.ಅಲ್ಲಿ ಸಾಕಲಾಗಿದ್ದ ಎಲ್ಲ ಪಶುಗಳಿಗೆ ಆಹಾರವನ್ನು ಕೂಡ ಅವರೇ ಬೆಳೆಯುತ್ತಿದ್ದು ಹಚ್ಚ ಹಸಿರಿನ ಹುಲ್ಲಿನ ಹಾಸು ಕಣ್ಣಿಗೆ ನಿಲುಕುವಷ್ಟು ದೂರವೂ ಕಾಣುತ್ತಿತ್ತು.

ಮಕ್ಕಳು ಉತ್ಸಾಹದಿಂದ ಮತ್ತು ಕುತೂಹಲಭರಿತರಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿ ಅಲ್ಲಿನ ಕೌತುಕಗಳನ್ನು ಕಣ್ಣು ತುಂಬಿಕೊಳ್ಳುತ್ತಿದ್ದರೆ ಈಗಾಗಲೇ ನಿವೃತ್ತಿಯ ಅಂಚಿನಲ್ಲಿದ್ದ ಶಿಕ್ಷಕಿ ಓಡಾಟದಿಂದ ಆದ ದಣಿವನ್ನು ನಿವಾರಿಸಿಕೊಳ್ಳಲು ಅಲ್ಲಿಯೇ ಇದ್ದ ವಿಶಾಲವಾದ ಹುಲ್ಲು ಹಾಸಿನ ಹೊರಾವರಣದಲ್ಲಿ ಕುಳಿತುಕೊಂಡು ಆ ಬಹುದೊಡ್ಡ ಪ್ಲಾಂಟೇಶನ್ ನ ವಿಹಂಗಮ ನೋಟವನ್ನು ಆನಂದಿಸುತ್ತಿದ್ದರು.

ಆ ಸಮಯದಲ್ಲಿ ಅಲ್ಲಿಯೇ ಹಾದು ಹೋಗುತ್ತಿದ್ದ ಓರ್ವ ಸೂಟು ಬೂಟು ಧರಿಸಿದ್ದ ಅರಳು ಕಂಗಳ ವ್ಯಕ್ತಿ ಈಕೆಯನ್ನು ನೋಡಿದೊಡನೆ ಧಾವಿಸಿ ಬಂದು ಇವರಿಗೆ ಎರಡು ಕೈಗಳನ್ನು ಜೋಡಿಸಿ ತಲೆ ಬಾಗಿ ನಮಸ್ಕರಿಸಿದ. ನನ್ನ ಕನಸು ಹೇಗಿದೆ ಮೇಡಂ? ಎಂದು ಕೇಳಿದ.ಪ್ರತಿಯಾಗಿ ನಮಸ್ಕರಿಸಿದ ಶಿಕ್ಷಕಿ ನಿಮಗೆ ನನ್ನ ಪರಿಚಯ ಇದೆಯೇ? ಎಂದು ಕೇಳಿದರು.ಅದಕ್ಕೆ ಉತ್ತರವಾಗಿ ನಸುನಗುತ್ತ ಹೌದು ಮೇಡಂ! ಎಂದು ಯುವಕ ಹೇಳಿದ.
ನೀನು ಇಲ್ಲಿ ಕೆಲಸ ಮಾಡುತ್ತಿರುವೆಯಾ?ಎಂದು ಶಿಕ್ಷಕಿ ಮರು ಪ್ರಶ್ನಿಸಿದರು. ಇನ್ನೇನು ಆತ ಉತ್ತರ ಹೇಳಬೇಕೆಂಬಷ್ಟರಲ್ಲಿ ಅಲ್ಲಿಗೆ ಬಂದ ಮತ್ತೋರ್ವ ವ್ಯಕ್ತಿ ಸರ್, ನಿಮಗೆ ವಿದೇಶದಿಂದ ಬಂದ ರೈತರ ಜೊತೆ ಮೀಟಿಂಗ್ ಇದೆ, ನಂತರ ಭಾರತ ದೇಶದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ಆಯ್ದ ವಿದ್ಯಾರ್ಥಿಗಳ ಜೊತೆಗೆ ಟೆಲಿ ಕಾನ್ಫರೆನ್ಸ್ ನಲ್ಲಿ ನೀವು ಭಾಗವಹಿಸಬೇಕಾಗಿದೆ ಎಂದು ನೆನಪಿಸಿದ.

ಆತನಿಗೆ ಸೂಟುಧಾರಿ ಯುವಕ ಉತ್ತರಿಸಬೇಕು ಎಂಬಷ್ಟರಲ್ಲಿ ಶಿಕ್ಷಕಿ ಹಾಗಾದರೆ ನೀವು ಈ ಸಂಸ್ಥೆಯ ಮ್ಯಾನೇಜರ್ ಆಗಿರಬಹುದೇ? ಎಂದು ಪ್ರಶ್ನಾರ್ಥಕವಾಗಿ ಕೇಳಿದರು.ಕೂಡಲೇ ಅಲ್ಲಿಗೆ ಬಂದ ಆ ವ್ಯಕ್ತಿ ಇದೇನು ಮೇಡಂ ಹೀಗೆ ಹೇಳುತ್ತೀರಿ! ಇಲ್ಲಿ ಕಾಣುತ್ತಿರುವ ನೂರಾರು ಎಕರೆ ಹೊಲಗಳಲ್ಲಿ ವಿಸ್ತರಿಸಿರುವ ಈ ದೊಡ್ಡ ತೋಟದ ಸಮಸ್ತ ತೋಟಗಾರಿಕೆ ಬೆಳೆಗಳು, ಹೈನುಗಾರಿಕೆ, ಪಶು ಸಾಕಾಣಿಕೆ, ಮಾರಾಟ ಇದೆಲ್ಲವನ್ನು ತಮ್ಮ ಬದುಕಿನ ಬಹುದೊಡ್ಡ ಕನಸಿನ ಪ್ರಾಜೆಕ್ಟ್ ಆಗಿ ನಿರ್ವಹಿಸುತ್ತಿರುವವರು ನಮ್ಮ ಸರ್. ಅತ್ಯಂತ ಚಿಕ್ಕವಯಸ್ಸಿನಲ್ಲಿ ಇಷ್ಟೆಲ್ಲ ಸಾಧನೆ ಮಾಡಿದ ಇವರ ಕುರಿತು ನೀವು ಪತ್ರಿಕೆಗಳಲ್ಲಿ ಓದಿಲ್ಲವೇ? ಎಂದು ಪ್ರಶ್ನಿಸಿದ.

ಹಾಗೆ ಕೇಳಿದ ತನ್ನ ಸಹಾಯಕನ ಬೆನ್ನನ್ನು ಮೆದುವಾಗಿ ತಟ್ಟಿ ಆತನನ್ನು ಅಲ್ಲಿಂದ ಹೋಗುವಂತೆ ಕಣ್ಣಲ್ಲೇ ಸನ್ನೆ ಮಾಡಿ ಹೇಳಿ ಕಳುಹಿಸಿಕೊಟ್ಟ ಯುವಕ ಮತ್ತೆ ಶಿಕ್ಷಕಿಯತ್ತ ತಿರುಗಿದ.ಮೇಡಂ… ಈಗಲೂ ನಿಮಗೆ ನಾನು ಯಾರು ಎಂದು ಗೊತ್ತಾಗಲಿಲ್ಲವೇ? ಎಂದು ಪ್ರಶ್ನಿಸಿದ.ಇದೀಗ ಶಿಕ್ಷಕಿ ಆ ಯುವಕನ ಕಂಗಳಲ್ಲಿ ಕಣ್ಣಿಟ್ಟು ನೋಡಿದರು…. ಒಂದೆರಡು ನಿಮಿಷಗಳ ದಿಟ್ಟಿಸುವಿಕೆಯ ನಂತರ ಆಕೆಯ ಕಣ್ಣುಗಳಲ್ಲಿ ನೀರು ತುಂಬಿ ನೀನು ಇಲ್ಲಿ ಸಾಕಾರವಾಗಿರುವ ನಿನ್ನ ಕನಸಿನ ಚಿತ್ರವನ್ನು ನನಗೆ ಬರೆದು ತೋರಿಸಿದ್ದೆ ಅಲ್ಲವೇ ಎಂದು ಅಚ್ಚರಿಯಿಂದ ಪ್ರಶ್ನಿಸಿದರು. ಇದೀಗ ಅವರ ಕೈ ಆತನ ಹೆಗಲನ್ನು ಚಪ್ಪರಿಸುತ್ತಿತ್ತು.

ಹೌದು ಮೇಡಂ ಎಂದು ಅವರ ಕಾಲಿಗೆ ಬಾಗಿದ ಆತ ಅದು ನನ್ನ ಕನಸಾಗಿತ್ತು ನಿಜ, ಆದರೆ ನನಸಾಗಿದ್ದು ನಿಮ್ಮಿಂದಲೇ. ಅಂದು ನೀವು ನನ್ನ ಕನಸನ್ನು ತಮಾಷೆ ಎಂದು ಪರಿಗಣಿಸಿ ವ್ಯಂಗ್ಯವಾಡಿದಾಗ ನಿಜ ಅಲ್ಲವೇ ನಾವೆಲ್ಲರೂ ಬದುಕಿನಲ್ಲಿ ಕೇವಲ ವೈದ್ಯ ಇಂಜಿನಿಯರ್ ಶಿಕ್ಷಕ ಲಾಯರ್ ಮುಂತಾದ ಕಣ್ಣಿಗೆ ಕಾಣುವ ವೃತ್ತಿಗಳನ್ನು ಮಾತ್ರ ಆರಿಸಿಕೊಳ್ಳಲು ಬಯಸುತ್ತೇವೆ…. ನಾನು ನನ್ನ ಕನಸಿನ ಸಾಕಾರಕ್ಕಾಗಿ ಸಂಪೂರ್ಣ ಪ್ರಯತ್ನಿಸಬೇಕು ಎಂಬ ಆಶಯದ ಜೊತೆಗೆ ಗುರಿಯನ್ನು ಹೊಂದಿದೆ.
ನನ್ನ ಸತತ ಪ್ರಯತ್ನ, ಓದು ಮತ್ತು ನಿರಂತರ ಪರಿಶ್ರಮದ ಫಲವಾಗಿ ಇಂದು ಹೀಗೆ ನಿಮ್ಮ ಮುಂದೆ
ಬಂದು ನಿಂತಿದ್ದೇನೆ ಎಂದು ಆತ ಸಂತಸಭರಿತ ಹೆಮ್ಮೆಯಿಂದ ಹೇಳಿದ.

ಆತನ ಮಾತುಗಳಿಗೆ ತನ್ನ ಸಂಪೂರ್ಣ ಸಹಮತವಿದೆ ಎಂದು ಸೂಚಿಸುವಂತೆ ಆತನ ಎರಡು ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡ ಆ ಶಿಕ್ಷಕಿ ನಿಜ ಮಕ್ಕಳು ಕಾಣುವ ಕನಸುಗಳನ್ನು ಶಿಕ್ಷಕರಾದವರು ಲೇವಡಿ ಮಾಡಬಾರದು ಎಂಬುದನ್ನು ವೃತ್ತಿಯ ಅಂಚಿನಲ್ಲಿ ಇರುವಾಗ ನಾನು ನಿನ್ನಿಂದ ಅರಿತುಕೊಂಡೆ. ಶಿಕ್ಷಕರಾಗಿ ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು ನನ್ನ ಕರ್ತವ್ಯವಾಗಿತ್ತು ಆದರೆ ನಾನು ನಿನ್ನನ್ನು ತಮಾಷೆ ಮಾಡಿದರೂ ನಿರಾಶನಾಗದೆ ನಿನ್ನ ಕನಸನ್ನು ಈಡೇರಿಸಿಕೊಂಡೆ. ನೀನು ನನ್ನನ್ನು ಭೇಟಿಯಾಗಲು ನನ್ನ ಬಳಿ ಬಂದು ವಿನಮ್ರವಾಗಿ ಮಾತನಾಡಿಸಿದಾಗಲೇ ನನ್ನ ತಪ್ಪನ್ನು ನೀನು ಮನ್ನಿಸಿರುವೆ ಎಂಬುದನ್ನು ನಾನು ಕಂಡುಕೊಂಡಿರುವೆ. ನಿನಗೆ ನಾನು ಒಳ್ಳೆಯ ಶಿಕ್ಷಕಿ ಆಗದೆ ಇದ್ದರೂ ನೀನು ನನಗೆ ಉತ್ತಮ ಶಿಕ್ಷಕನಾಗಿ ಬದುಕಿನ ಬಹುದೊಡ್ಡ ಪಾಠವನ್ನು ಕಲಿಸಿದೆ ಎಂದು ಹೇಳಿ ಆತನ ಕೈಯನ್ನು ಮೆದುವಾಗಿ ಕುಲುಕಿದರು. ಆಕೆಯ ಮನದ ಭಾವನೆಗಳನ್ನು ಆಕೆ ಹೇಳದೆಯೂ ಅರಿತ ಆ ಯುವಕ ಆಕೆಯನ್ನು ಸಮಾಧಾನಪಡಿಸಿ ತನ್ನ ಕಚೇರಿಗೆ ಕರೆದೊಯ್ದು ಉಪಚರಿಸಿದ.

ನೋಡಿದಿರಾ ಸ್ನೇಹಿತರೆ, ಕನಸು ನಮ್ಮ ಮನಸ್ಸಿನ ಭಾವನೆಗಳಿಗೆ ಹೊಸತೊಂದು ಆಶಾ ಭಾವನೆಯನ್ನು ಬದುಕಿಗೆ ಭರವಸೆಗಳನ್ನು ಕಟ್ಟಿಕೊಡುತ್ತದೆ. ಬದುಕಿನಲ್ಲಿ ಬೇರೆಯವರು ಹೀಗೆಯೇ ಇರಬೇಕು ಎಂದು ನಾವು ತೋರಿಸಿದ ಚೌಕಟ್ಟಿನಲ್ಲಿಯೇ ಅವರು ಬದುಕಬೇಕು ಎಂಬುದು ಖಂಡಿತವಾಗಿಯೂ ತಪ್ಪು. ಅತ್ಯಂತ ಸರಳ ಮತ್ತು ಅತ್ಯಂತ ಕ್ಲಿಷ್ಟ ಎನಿಸುವ ಕನಸುಗಳು ಕೂಡ ಎಷ್ಟೋ ಬಾರಿ ಅತ್ಯಂತ ಆಳವಾದ ಬೇರುಗಳನ್ನು ಹೊಂದಿರುತ್ತವೆ. ನಾವು ಊಹಿಸಲು ಸಾಧ್ಯವಿಲ್ಲದಷ್ಟು ಆಳವಾಗಿ ಬೇರೂರಿದ ಕನಸುಗಳು ನಮ್ಮ ಕನಸನ್ನು ನನಸುಗೊಳಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ನಮ್ಮನ್ನು ಬೆಳೆಸುತ್ತವೆ.

ಅದೆಷ್ಟೇ ಸಾಧಾರಣ ಎಂದು ನಾವು ಭಾವಿಸಿದರೂ ಕೂಡ ಕನಸುಗಳನ್ನು ಎಂದು ಹೀಗಳೆಯಬಾರದು. ನಮ್ಮ ಕಣ್ಣಿಗೆ ಅತ್ಯಂತ ಚಿಕ್ಕದು ಎಂದು ಗೋಚರಿಸುವ ಅತಿ ಸಣ್ಣ ಕನಸು ಕೂಡ ಮತ್ತೊಬ್ಬರ ಜೀವನದಲ್ಲಿ ಅಸಾಧಾರಣವಾದ ಬದಲಾವಣೆಯನ್ನು ತರಬಲ್ಲದು.

ಒಂದು ಕುಗ್ರಾಮದ ಶಿಕ್ಷಕ ಶಿವಸುಬ್ರಮಣ್ಯ ಅಯ್ಯರ್ ಅವರು ತೋರಿಸಿದ ಆಕಾಶದಲ್ಲಿ ಹಾರುವ ವಿಮಾನ ಆ ಗ್ರಾಮದ ಪುಟ್ಟ ಬಾಲಕ ಅಬ್ದುಲ್ ಕಲಾಮರಲ್ಲಿ ಬಿತ್ತಿದ ಕನಸು ಮುಂದೆ ಅವರನ್ನು ಓರ್ವ ಕ್ಷಿಪಣಿ ತಜ್ಞನನ್ನಾಗಿಸಿತು. ಜಗತ್ತೇ ಮೆಚ್ಚಿದ ಅಸಾಧಾರಣ ತಂತ್ರಜ್ಞಾನಿಯನ್ನಾಗಿಸಿ ಭಾರತ ದೇಶದ ಪ್ರಥಮ ಪ್ರಜೆಯನ್ನಾಗಿಸಿತು.

ಜೀವನದ ನಿಜವಾದ ಯಶಸ್ಸು ಹಣ ಆಸ್ತಿ ಅಂತಸ್ತು ನಾವು ಓಡುವ ಐಷಾರಾಮಿ ಕಾರುಗಳಲ್ಲಿ ಇಲ್ಲ. ಜೀವನದ ಯಶಸ್ಸು ನಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವೆಷ್ಟು ಶ್ರಮ ಪಟ್ಟಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಆದ್ದರಿಂದ ಪಾಲಕರೆ… ನಿಮ್ಮ ಮಕ್ಕಳ ಕನಸಿನ ಹಕ್ಕಿಯ ರೆಕ್ಕೆಗೆ ಪ್ರೋತ್ಸಾಹ ಮತ್ತು ಭರವಸೆಯ ಬಲ ತುಂಬಲು
ಎಂದೂ ಹಿಂಜರಿಯದಿರಿ.

—   ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!