
ಮಕ್ಕಳ ರಕ್ಷಣಾ ವ್ಯವಸ್ಥೆಯ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ
ಮಕ್ಕಳ ಸಂರಕ್ಷಣೆಗೆ ಇಲಾಖೆಗಳ ಪಾಲ್ಗೊಳ್ಳುವಿಕೆ ಅಗತ್ಯ: ಶಶಿಧರ್ ಕೋಸಂಬೆ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ(ವಿಜಯನಗರ) : ಮಕ್ಕಳ ಹಾಗೂ ಅವರ ಹಕ್ಕುಗಳ ಸಂರಕ್ಷಣೆ ಮತ್ತು ಪಾಲನೆಗೆ ಎಲ್ಲಾ ಇಲಾಖೆಗಳ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಹೇಳಿದರು.
ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಶುಕ್ರವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಾಗೂ ಮಕ್ಕಳ ಪಾಲನಾ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ಭಾಗೀದಾರರೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವಾಗಲು 1098 (112) ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಎಲ್ಲಾ ಶಾಲೆ, ವಸತಿ ಶಾಲೆಗಳಲ್ಲಿ ಗೋಡೆ ಬರಹಗಳನ್ನು ಬರೆಸಬೇಕು. ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ-2016ನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಪೋಷಿತಾ ಪುನಶ್ಚೇತನ ಘಟಕಗಳನ್ನು ಪ್ರಾರಂಭಿಸಲಾಗಿದೆ.
ಬಾಲಾವಸ್ಥೆ ಕಾರ್ಯಕ್ರಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಂಡದವರ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 4 ಸಾವಿರ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆ ನಡೆಸಿ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಅಪೌಷ್ಠಿಕ ಮಕ್ಕಳ ಸಂಖ್ಯೆಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಯಡಿ 129 ತಾಯಂದಿರಿಗೆ ಇದುವರೆಗೆ ಪಾವತಿಯಾಗದ ಒಂದು ದಿನದ ಕೂಲಿ 309 ರೂ.ಗಳನ್ನು ಪಾವತಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿ ಕೂಡಲೆ ಕ್ರಮ ಕೈಗೊಳ್ಳಬೇಕು.
ಬಾಣಂತಿಯರಿಗೆ ಬಿಸಿ ನೀರು ಪೂರೈಕೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಸೋಲಾರ ವ್ಯವಸ್ಥೆ ಜಾರಿ, ಪ್ರಾರಂಭ ಹಾಗೂ ದುರಸ್ತಿಗೆ ಕ್ರಮ ವಹಿಸಬೇಕು. ಶಿಶು ಮರಣ ಪ್ರಮಾಣ ಗಮನಿಸಿದಾಗ ಜಿಲ್ಲೆಯಲ್ಲಿ ಐದು ವರ್ಷದಲ್ಲಿ 425 ಹಾಗೂ ಸೆಪ್ಟೆಂಬರ್ ನಿಂದ ಇಲ್ಲಿವರೆಗೆ 57 ಶಿಶು ಮರಣ ಆಗಿವೆ. 8 ತಾಯಿ ಮರಣ, ಶಿಶು ಮತ್ತು ತಾಯಿ ಮರಣ ಪ್ರಮಾಣವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕು. ಪಿಸಿಪಿ&ಡಿಟಿ ಕಾಯ್ದೆಯಡಿ 4 ಪ್ರಕರಣಗಳು ದಾಖಲಾಗಿದ್ದು, ಸಂಭಂದ ಪಟ್ಟ ಸ್ಕ್ಯಾನಿಂಗ್ ಸೆಂಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮಾಸಿಕ ಜಿಲ್ಲಾ ಜಾಗೃತಿ ಸಮಿತಿ ಸಭೆ ನಡೆಸಿ,ಜಿಲ್ಲೆಯಲ್ಲಿ ಯಾವುದೇ ಭ್ರೂಣಲಿಂಗ ಪತ್ತೆ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 21,122 ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಭಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಾಗಿ ಇಲ್ಲಿವರೆಗೆ ನೋಂದಣಿ ಮಾಡದಿರುವ 2242 ಮಕ್ಕಳು ಬಾಕಿ ಉಳಿದಿದ್ದಾರೆ. ನಿನ್ನೆಯ ಭೇಟಿ ಸಂದರ್ಭದಲ್ಲಿ ಹೂವಿನಹಡಗಲಿಯ ಶಾಲೆಯೊಂದರಲ್ಲಿ ದಾಖಲಾದ 731 ವಿದ್ಯಾರ್ಥಿಗಳಲ್ಲಿ ಪೈಕಿ 181 ಮಕ್ಕಳು ಗೈರು ಹಾಜರಾಗಿದ್ದಾರೆ. ಈ ಮಕ್ಕಳು ಬೇರೆ ಶಾಲೆಗಳಲ್ಲಿ ದಾಖಲಾಗಿದ್ದಾರೆ ಅಥವಾ ಶಾಲೆ ಬಿಟ್ಟು ಹೋಗಿದ್ದಾರೆ ಎಂಬುವುದರ ಕುರಿತು ಡಿಡಿಪಿಐ ಹಾಗೂ ಸಂಬಂಧ ಪಟ್ಟ ಬಿಇಓ ಅವರು ಶಾಲೆಗೆ ಭೇಟಿ ನೀಡಿ ಆಯೋಗಕ್ಕೆ ಸೂಕ್ತ ಮಾಹಿತಿಯನ್ನು ಸಲ್ಲಿಸಬೇಕು. ಈ ದಿಶೆಯಲ್ಲಿ ಅರ್ಹ ಮಕ್ಕಳು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಿಂದ ವಂಚಿತವಾಗಬಾರದು ಮತ್ತು ಶಾಲೆಯಿಂದ ಯಾವುದೇ ಮಕ್ಕಳು ಹೊರಗುಳಿಯದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
50 ಮಕ್ಕಳು ವಾಸವಿರುವ ಹೂವಿನಹಡಗಲಿಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ವಸತಿ ನಿಲಯದಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲದಿರುವುದು ಕಂಡು ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಹಗರಿಬೊಮ್ಮನಹಳ್ಳಿಯ ವಸತಿ ಶಾಲೆಯಲ್ಲಿ ಮಕ್ಕಳಿಗೆ ವಾರದಲ್ಲಿ ಒಂದು ಬಾರಿ ಮಾತ್ರ ಚಪಾತಿ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ. ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ವಸತಿ ನಿಲಯಗಳು ಹಾಗೂ ಶಾಲೆಗಳಲ್ಲಿ ಮೂಲಭೂತ ಸೌಲ್ಯಭ್ಯ ಕಲ್ಪಿಸಬೇಕು ಹಾಗೂ ಪ್ರಸ್ತುತ ಚಳಿಗಾಲವಿರುವುದರಿಂದ ಸೋಲಾರ್ ಮೂಲಕ ಮಕ್ಕಳಿಗೆ ಬಿಸಿ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದರು.
ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯದಂತೆ ಕ್ರಮ ಕೈಗೊಳ್ಳುವುದುರ ಜೊತೆಗೆ ಸೂಕ್ತ ಅರಿವು ಮೂಡಿಸಬೇಕು. ಗ್ರಾಮ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿಗಳ ರಚನೆಗೆ ತಾ.ಪಂ ಇಓ ಗಳು ಮತ್ತು ಪಿಡಿಓಗಳು ಸೂಕ್ತ ಕ್ರಮ ವಹಿಸಬೇಕು. ಬಾಲಕಾರ್ಮಿಕ ಪತ್ತೆಗಾಗಿ ಕಾರ್ಮಿಕ ಇಲಾಖೆ ಮತ್ತು ಬಾಲ ಕಾರ್ಮಿಕ ಯೋಜನೆಯಿಂದ ಅನೀರಿಕ್ಷಿತ ದಾಳಿಗಳನ್ನು ನಿಯಮಿತವಾಗಿ ಮಾಸಿಕವಾರು ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಅವರು ಮಾತನಾಡಿ, ವಸತಿ ಶಾಲೆ, ವಸತಿ ನಿಲಯಗಳಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಕ್ರಮ ವಹಿಸಬೇಕು. ವಸತಿ ಅಥವಾ ಶಾಲೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ, ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪುಸ್ತಕ ಬಿಡುಗಡೆ: ಎಸ್.ಎಸ್.ಎಲ್.ಸಿ ಮಕ್ಕಳ ಗುಣಾತ್ಮಕ ಫಲಿತಾಂಶಕ್ಕಾಗಿ ವಿಜಯನಗರ ಜಿಲ್ಲಾ ಪಂಚಾಯತ್, ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಸಿದ್ದಪಡಿಸಲಾದ `ಕಲಿಕಾ ಕಿರಣ’ ಪುಸ್ತಕವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಯುವರಾಜ ನಾಯ್ಕ್, ಹಗರಿಬೊಮ್ಮನಹಳ್ಳಿ ಬಿಇಓ ಮೈಲೇಶ್ ಬೇವೂರು ಸೇರಿದಂತೆ ಮತ್ತಿತರರಿದ್ದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಶಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾ ಎಸ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.