IMG-20231118-WA0021

ಮತದಾನ ಜಾಗೃತಿ: ಕೊಪ್ಪಳದಲ್ಲಿ ಶಾಲಾ
ಕಾಲೇಜು ವಿದ್ಯಾರ್ಥಿಗಳಿಂದ ವಿಶೇಷ ಸಂದೇಶ

ಕರುನಾಡ ಬೆಳಗು ಸುದ್ದಿ
ಕೊಪ್ಪಳ ,19- ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ನವೆಂಬರ್ ೧೮ರಂದು ಹಬ್ಬದ ವಾತವರಣವಿತ್ತು. ಮತದಾರರ ಪಟ್ಟಿಯ ವಿಶೇಷ ಸಂಕ್ಷೀಪ್ತ ಪರಿಷ್ಕರಣೆ ೨೦೨೪ರ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಮತ್ತು ಜಿಲ್ಲಾ ಸ್ವೀಪ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳ ೫೦೦೦ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಬೆಳಿಗ್ಗೆ ಆರಂಭವಾದ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಡಗೋಡಿ ಅವರು ಚಾಲನೆ ನೀಡಿದರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಶಿಸ್ತಿನಿಂದ ಭಾಗಿಯಾಗಿ ಮತದಾನ ಜಾಗೃತಿಯ ಬಗ್ಗೆ ಮತ್ತು ಮತದಾರರ ಪಟ್ಟಿಯಲ್ಲಿ ಯುವ ಮತದಾರರು ಹೆಸರು ಸೇರ್ಪಡೆ ಮಾಡುವ ಬಗ್ಗೆ ವಿಶೇಷ ಸಂದೇಶ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಕಡಿ ಅವರು ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಸಂಕ್ಷೀಪ್ತ ಪರಿಷ್ಕರಣೆ ಹಿನ್ನಲೆಯಲ್ಲಿ ಭಾರತ ಚುನಾವಣ ಅಯೋಗದ ಮಹತ್ವಾಕಾಂಕ್ಷಿ ಯೋಜನೆಯಾದ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಅಡಿಯಲ್ಲಿ ಮತದಾದರರಲ್ಲಿ ಮತದಾನದ ಬಗ್ಗೆ ಅರಿವು, ಪ್ರೇರಣೆ, ಅನುಕೂಲತೆಗಳು, ಮತದಾರರ ಶಿಕ್ಷಣ, ಭಾಗವಹಿಸುವಿಕೆ ಮತ್ತು ಸಬಲೀಕರಣ, ಮಾಹಿತಿಯುಕ್ತ ಮತ್ತು ನೈತಿಕ ಚುನಾವಣೆಗಳಲ್ಲಿ ಭಾಗವಹಿಸುವ ಕುರಿತು ಜಾಗೃತಿ ಮೂಡಿಸುವ ಮೂಲಕ ಸಧೃಡ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಭದ್ರ ಬುನಾದಿ ನಿರ್ಮಿಸುವ ನಿಟ್ಟಿನಲ್ಲಿ ಯುವ ಮತದಾರರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಭಾರತದ ಸಂವಿಧಾನದಡಿಯಲ್ಲಿ ನಾವು ಹಲವಾರು ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಅದರಂತೆ ನಾವು ನಮ್ಮ ಕರ್ತವ್ಯಗಳನ್ನು ಸಹ ಪಾಲನೆ ಮಾಡಬೇಕು. ಅರ್ಹ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ತೊದಲಬಾಗಿ ಅವರು ಮಾತನಾಡಿ, ಮತದಾರರ ಪಟ್ಟಿಯಲ್ಲಿ ಯುವ ಮತದಾರರು ಹೆಸರನ್ನು ನೋಂದಾಯಿಸಬೇಕು. ಕಾಲೇಜಿನಲ್ಲಿ ೧೮ ವರ್ಷ ಪೂರೈಸಿದ ಎಲ್ಲಾ ಯುವಕ/ ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿ ಮತದಾನದ ಹಕ್ಕು ಪಡೆಯಬೇಕು. ನಿಮ್ಮ ಹೆಸರನ್ನು ನೋಂದಾಯಿಸಲು ನಮೂನೆ-೬ ಬಳಸಿಕೊಳ್ಳಬೇಕು. ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆಯಲು ನಮೂನೆ-೭ ಬಳಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿನ ಮಾಹಿತಿಯ ತಿದ್ದುಪಡಿಗಾಗಿ ನಮೂನೆ-೮ ಬಳಸಿಕೊಳ್ಳುವಂತೆ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಜಿಲ್ಲೆಯ ಎಲ್ಲಾ ಕಾಲೇಜಿನಲ್ಲಿ ಸ್ಥಾಪಿಸಿದ ಮತದಾರರ ಸಾಕ್ಷರತಾ ಸಂಘಗಳಿAದ ಜಿಲ್ಲೆಯ ಯಾವುದೇ ಮತದಾದರರು ಮತದಾನದಿಂದ ಹೊರಗುಳಿಯಬಾರದಂತೆ ಜಾಗೃತಿ ಮೂಡಿಸಲು ತಿಳಿಸಿದರು. ವಿದ್ಯಾರ್ಥಿಗಳಿಗೆ ಸ್ವೀಪ್ ಮತ್ತು ಮತದಾನದ ವಿಷಯವಾಗಿ ಪ್ರಶ್ನೋತ್ತರ ಮುಖಾಂತರ ಚುನಾವಣಾ ಜಾಗೃತ ಸಂಘದ ಮಹತ್ವ ತಿಳಿಸಿದರು.
ಪ್ರತಿಜ್ಞಾ ವಿಧಿ: ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಟಿ ಕೃಷ್ಣಮೂರ್ತಿ ಅವರು ನೈತಿಕ ಚುನಾವಣೆಯ ಕುರಿತು ಪ್ರತಿಜ್ಞಾ ವಿದಿ ಬೋಧಿಸಿದರು.
ಚಿತ್ರೀಕರಣ: ಮುಖ್ಯ ಚುನಾವಣಾಧಿಕಾರಿಗಳ ಕಾರ್ಯಲಯದ ನಿರ್ದೇಶನದಂತೆ ಮೈ ಭಾರತ್ ಹೂನ್, ಹಮ್ ಭಾರತ್ ಕೆ ಮಾತಾಡತಾ ಹೈನ್ ಗೀತೆಯನ್ನು ಕನ್ನಡ ಭಾಷೆಯಲ್ಲಿ ಚಿತ್ರೀಕರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂಧ ಭಾಗಿಯಾದರು.
ವಿನೂತನ ನಕಾಶೆ: ಈ ಕಾರ್ಯಕ್ರಮ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪಳ ಇವರ ಮಾರ್ಗದರ್ಶನದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ದೈಹಿಕ ಶಿಕ್ಷಕರು ಮತ್ತು ಚಿತ್ರಕಲಾ ಶಿಕ್ಷರಿಂದ ವಿನೂತನ ಹಾಗೂ ಚಿತ್ತಾಕರ್ಷಕ ಭಾರತ ನಕಾಶೆಯನ್ನು ಬಿಡಿಸಲಾಗಿತ್ತು.
ನೃತ್ಯ ರೂಪಕ:ತಾಲೂಕು ಕ್ರೀಡಾಂಗಣ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹ್ಯಾಟಿಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ಮತದಾನದ ಜಾಗೃತಿ ಮೂಡಿಸುವ ನೃತ್ಯವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರಾದ ಶ್ರೀ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ದುಂಡಪ್ಪ ತುರಾದಿ, ತಹಶೀಲ್ದಾರ ಶ್ರೀ ವಿಠ್ಹಲ್ ಚೌಗಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಂಕ್ರಯ್ಯ ಟಿ. ಎಸ್., ತಾಲೂಕ್ ಮಟ್ಟದ ಅಧಿಕಾರಿಗಳು ಮತ್ತು ಇನ್ನೀತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕಾಳಿದಾಸ ಹೈಸ್ಕೂಲ್, ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆ, ಬಾಲಕರ ಸರ್ಕಾರಿ ಪ್ರೌಢಶಾಲೆ ಕೊಪ್ಪಳ, ಕುವೆಂಪು ಕನ್ನಡ ಪ್ರಾಥಮಿಕ ಶಾಲೆ ಕೊಪ್ಪಳ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ, ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್ ಸೇರಿದಂತೆ ಇನ್ನೀತರ ಶಾಲಾ ಕಾಲೇಜಿನ ಪ್ರಾಚಾರ್ಯರರು, ಮುಖ್ಯಾಧ್ಯಾಪಕರು ಮತ್ತು ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!