
ಮತದಾನ ಪ್ರಮಾಣ ಹೆಚ್ಚಳಕ್ಕೆ ಬಿಎಲ್ಓಗಳ ಪಾತ್ರ ಪ್ರಮುಖವಾದುದು : ರಾಹುಲ್ ಸಂಕನೂರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,31- ಮತದಾನದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡುವಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾದದ್ದು, ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಹಾಗೂ ಮತಗಟ್ಟೆಯಲ್ಲಿ ನೀಡಲಾಗಿರುವ ಸೌಲಭ್ಯಗಳ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಸಂಡೂರು ಇವರ ಸಂಯುಕ್ತಾಶ್ರಯದಲ್ಲಿ ಸಂಡೂರು ಪಟ್ಟಣದ ಎ.ಪಿ.ಎಂ.ಸಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ 95-ಸಂಡೂರು ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿ (BLO) ಗಳಿಗೆ ಹಾಗೂ ಮತದಾರ ಸಾಕ್ಷರತಾ ಕೇಂದ್ರದ ಸಂಚಾಲಕ ಶಿಕ್ಷಕರಿಗೆ ಹಮ್ಮಿಕೊಂಡಿದ್ದ “ತರಬೇತಿ ಕಾರ್ಯಾಗಾರ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡಲು ಯಾವುದೇ ಯೋಜನೆಗಳಿದ್ದಲ್ಲಿ ಅಥವಾ ಸಲಹೆಗಳಿದ್ದಲ್ಲಿ ರೂಪುರೇಷೆ ತಯಾರಿಸಿ, ಮತಗಟ್ಟೆಗಳಲ್ಲಿ ವಿಶೇಷ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಮತದಾನದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡಲು ಎಲ್ಲಾ ಬಿಎಲ್ಓ ಅಮೂಲ್ಯ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚುನಾವಣಾ ದಿನಾಂಕದವರೆಗೆ ವಿವಿಧ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮತದಾರರಲ್ಲಿ ಅರಿವು ಮೂಡಿಸಲು ಯೋಜಿಸಲಾಗಿದೆ. ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಲು ಪ್ರೇರೇಪಿಸಬೇಕು. ಶೇಕಡವಾರು ಮತದಾನ ನೂರಕ್ಕೆ ನೂರರಷ್ಟು ಸಾಧಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಮಾತನಾಡಿ, ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಕಾರ್ಯಸೂಚಿಗಳನ್ವಯ ವಿನೂತನ ಕಾರ್ಯ ಚಟುವಟಿಕೆಗಳೊಂದಿಗೆ ಜಿಲ್ಲೆಯ ಮತದಾನ ಪ್ರಮಾಣವನ್ನು ಹೆಚ್ಚಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.
ಸಂಡೂರು ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಷಡಕ್ಷರಯ್ಯ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ವಿಶೇಷ ಕಾರ್ಯ ಚಟುವಟಿಕೆಗಳೊಂದಿಗೆ ಮತದಾನ ಜಾಗೃತಿ ಮೂಡಿಸಿದಂತೆ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿಯೂ ಸಹ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಸರ್ವರು ವಿಶೇಷವಾಗಿ ಕಾಳಜಿ ವಹಿಸಬೇಕು ಎಂದು ಕೋರಿದರು.
ತಹಶೀಲ್ದಾರ್ ಅನಿಲ್ ಕುಮಾರ್ ಅವರು ಮಾತನಾಡಿ, ಯಾವೊಬ್ಬ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದಂತೆ ಬಿಎಲ್ಓ ಗಳು ಹಾಗೂ ಶಿಕ್ಷಕ- ವಿದ್ಯಾರ್ಥಿಗಳು ವಿಶೇಷ ಜವಾಬ್ದಾರಿಯೊಂದಿಗೆ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಐಆರ್ ಅಕ್ಕಿ, ತಾಲೂಕಿನ ಡಿಎಲ್ ಎಂ ಟಿ, ಟಿ ಎಲ್ ಎಂ ಟಿ, ಇಎಲ್ ಸಿಯ ಸದಸ್ಯರು ಮತ್ತು 253 ಮತಗಟ್ಟೆಗಳ ಬಿಎಲ್ಓ ಗಳು, ಸೂಪರ್ವೈಸರ್ ಗಳು ಉಪಸ್ಥಿತರಿದ್ದರು.