
ಮತ ಜಾಗೃತಿಗೆ ಮಹಿಳಾ ಕ್ರಿಕೆಟ್ ಪಂದ್ಯಾವಳಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30- ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಕೋಟೆ ಪ್ರದೇಶದ ಸಂತಜಾನರ ಕಾಲೇಜು ಮೈದಾನದಲ್ಲಿ ಮಂಗಳವಾರ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಪಂದ್ಯಾವಳಿಗೆ ಚಾಲನೆ ನೀಡಿದ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಓ ಮಡಗಿನ ಬಸಪ್ಪ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಇದ್ದಂತೆ. ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಸುಭದ್ರಗೊಳಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮತದಾನ ಆಗುತ್ತಿದ್ದು, ತಪ್ಪದೆ ಮತ ಚಲಾಯಿಸಬೇಕು. ಕ್ರಿಕೆಟ್ ಆಡುವ ಮೂಲಕ ವಿನೂತನವಾಗಿ ಮತ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹಮ್ಮದ್ ಗೌಸ್.ಆರ್ ಅವರು ಮಾತನಾಡಿ, ಎಲ್ಲಾ ಕ್ರೀಡಾಪಟುಗಳು ತಪ್ಪದೇ ಮತ ಚಲಾಯಿಸಬೇಕು ಹಾಗೂ ತಮ್ಮ ಸುತ್ತಮುತ್ತಲಿನ ಎಲ್ಲಾ ಮತದಾರರನ್ನು ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ಲೆಕ್ಕಾಧಿಕಾರಿ ಶರಣಪ್ಪ, ತಾಪಂ ವ್ಯವಸ್ಥಾಪಕ ಬಚ್ಚಲಪ್ಪ.ವಿ.ಕೆ. ಸೇರಿದಂತೆ ಬಳ್ಳಾರಿ ಮತ್ತು ಕುರುಗೋಡು ಪೂರ್ವ, ಪಶ್ಚಿಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಳ್ಳಾರಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳು ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.
ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿವಿಧ ಗ್ರಾಮ ಪಂಚಾಯತಿಯ ಮಹಿಳಾ ಆಟಗಾರರು, ಸ್ಥಳೀಯ ಮಹಿಳೆಯರು ಭಾಗವಹಿಸಿದ್ದರು.