
ಮಮತೆಯ ತೊಟ್ಟಿಲಿಗಾಗಿ ನ್ಯಾಯಾಧೀಶರಿಂದ ಹುಡುಕಾಟ
ಕರುನಾಡ ಬೆಳಗು ಸುದ್ದಿ
ಗಂಗಾವತಿ,3- ಅನಾಥ ಮಕ್ಕಳನ್ನು ರಕ್ಷಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ `ಮಮತೆಯ ತೊಟ್ಟಿಲು’ ಎಂಬ ಯೋಜನೆಯನ್ನು ನಗರದಲ್ಲಿ ಅನುಷ್ಠಾನಗೊಳಿಸುವ ಉದ್ದೇಶಕ್ಕೆ ನಗರದ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರು ನಗರದಲ್ಲಿ ಸ್ಥಳ ಹುಡುಕಾಟ ನಡೆಸಿದರು.
ಯೋಜನೆ ಅನುಷ್ಠಾನಕ್ಕೆ ನಗರ ಗ್ರಾಮ ದೇವತೆ ದುರ್ಗಾ ದೇವಿ ಸನ್ನಿಧಾನ ಸೂಕ್ತವಾಗಿರುವ ಬಗ್ಗೆ ವಕೀಲರು ನೀಡಿದ ಮಾಹಿತಿ ಮೆರೆಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸದಾನಂದ ನಾಯಕ್ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ ಗಾಣಿಗೇರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಂಕಷ್ಠದಲ್ಲಿರುವ ಮಹಿಳೆಯರಿಂದ ಪರಿತ್ಯಕ್ತವಾಗುವ ಅನಾಥ ಮಕ್ಕಳನ್ನು ಈ ಮಮತೆಯ ಮಡಿಲು ಎಂಬ ತೊಟ್ಟಿಲಲ್ಲಿ ಹಾಕಿ ಹೋದರೆ ಆ ಮಗುವಿನ ರಕ್ಷಣೆ ಮತ್ತು ಜವಾಬ್ದಾರಿಯನ್ನು ಸಂಬಂಧಿತ ಇಲಾಖೆಗಳ ಮೂಲಕ ಸಕರ್ಾರ ನಿಭಾಯಿಸುವ ಉದ್ದೇಶಕ್ಕೆ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ.
ಈಗಾಗಲೆ ಕೊಪ್ಪಳ ಜಿಲ್ಲೆಯ ಹುಲಗಿ ದೇವಸ್ಥಾನದಲ್ಲಿ ಪ್ರಾಯೋಗಿಕವಾಗಿ ಮಮತೆಯ ತೊಟ್ಟಿಲು ಇಡಲಾಗಿದ್ದು, ಕೆಲವರು ತಮಗೆ ಬೇಡವಾದ ಮಕ್ಕಳನ್ನು ಆ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ. ಹೀಗಾಗಿ ಗಂಗಾವತಿ ಯಲ್ಲೂ ಈ ಯೋಜನೆ ಅನುಷ್ಠಾನಕ್ಕೆ ನಿರ್ದೇಶನ ಬಂದಿರುವ ಕಾರಣಕ್ಕೆ ಸ್ಥಳ ಪರಿಶೀಲನೆಗೆ ಬಂದಿದ್ದೇವೆ ಎಂದು ನ್ಯಾಯಾಧೀಶರು ಹೇಳಿದರು.
ದೇವಸ್ಥಾನ ಆವರಣದಲ್ಲಿರುವ ಕೆಲ ಸ್ಥಳಗಳನ್ನು ನ್ಯಾಯಾಧೀಶರು ಪರಿಶೀಲಿಸಿದರು. ಬಳಿಕ ದೇಗುಲದ ಮುಭಾಗದಲ್ಲಿರುವ ಪ್ರದೇಶ ಸೂಕ್ತವಾಗಿದೆ ಎಂದು ಸ್ಥಳೀಯ ಪ್ರಮುಖರು ವಿವರಣೆ ನೀಡಿದರು. ನೆಲದಿಂದ ಮೂರು ಅಡಿ ಎತ್ತರದಲ್ಲಿ ತೊಟ್ಟಿಲು ಇಡಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.
ಇದಕ್ಕೂ ಮುನ್ನ ದೇಗುಲಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಉಬಯ ನ್ಯಾಯಾಧೀಶರಿಗೆ ದೇವಸ್ಥಾನದ ಸಮಿತಿಯಿಂದ ಆಡಳಿತ ಮಂಡಳಿಯ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ್ ನೇತೃತ್ವದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಮಾಜಿಶಾಸಕ ಎಚ್.ಆರ್. ಶ್ರೀನಾಥ್, ಪ್ರಮುಖರಾದ ಉಗಮರಾಜ್ ಬೊಂಬ್, ಕೆ. ಚನ್ನಬಸಯ್ಯ ಸ್ವಾಮಿ, ಸುರೇಶ ಸಿಂಗನಾಳ, ಆಲಂಪಲ್ಲಿ ಜಗನ್ನಾಥ, ಸರ್ವೇಶ ವಸ್ತ್ರದ, ರಮೇಶ ನಾಯಕ ಹುಲಿಹೈದರ, ಸುರೇಶ ಗೌರಪ್ಪ, ಸಂಗಮೇಶ ಸುಗ್ರೀವಾ, ಚಿನ್ನುಪಾಟಿ ಪ್ರಭಾಕರ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ವಕೀಲರಾದ ಎಸ್.ಎನ್. ನಾಯಕ, ಎಚ್.ಎನ್. ಕುಂಬಾರ, ಎಂ.ಬಿ. ಪಾಟೀಲ್, ನಾಗರಾಜ ಗುತ್ತೇದಾರ ಇತರರಿದ್ದರು.