
ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ : ಅಪರಾಧಿಗೆ ಶಿಕ್ಷೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಆಂಜನೇಯ ಬೆಟ್ಟದಲ್ಲಿ ಎಳನೀರು ವ್ಯಾಪಾರ ಮಾಡಿಕೊಂಡಿದ್ದ ದೇವರಾಜ ಇವರ ಅಕ್ಕನ (ಮಹಿಳೆ) ಮೇಲೆ ಅಪರಾಧಿ ಬಸವರಾಜ ತಂದೆ ನಿಂಗಪ್ಪ ಕಂದಾರಿ ಈತನು ಎಳೆನೀರು ಕಡಿಯುವ ಮಚ್ಚಿನಿಂದ ಹಲ್ಲೆ ಮಾಡಿ ತೀವ್ರ ಸ್ವರೂಪದ ಗಾಯಗೊಳಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 6 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 15,000 ದಂಡ ವಿಧಿಸಿ ಕೊಪ್ಪಳದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.
ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯ ಆಂಜನೇಯ ಬೆಟ್ಟದಲ್ಲಿ ಎಳೆನೀರು ಮಾರಿಕೊಂಡು ವಾಸವಾಗಿದ್ದ ತನ್ನ ತಮ್ಮನ ಮನೆಯಲ್ಲಿ ಗಾಯಾಳು ದೇವಮ್ಮಳು ಇರುವಾಗ ಅಪರಾಧಿ ಬಸವರಾಜ ತಂದೆ ನಿಂಗಪ್ಪ ಕಂದಾರಿ ಇತನು ಅಂಗಡಿಯ ಪಕ್ಕದಲ್ಲಿರುವ ಮನೆಗೆ ಬರುವುದು ಹೋಗುವುದು ಮಾಡುತ್ತಿದ್ದು, ಗಾಯಾಳು ದೇವಮ್ಮಳು ಅಪರಾಧಿ ಬಸವರಾಜನಿಗೆ ನಮ್ಮ ಮನೆಗೆ ಬರಬೇಡ ಅಂತಾ ಹೇಳಿದ್ದು, ಆದರೆ ಪುನಃ ಅಪರಾಧಿ ಬಸವರಾಜನು ದಿ: 29-01-2015 ರಂದು ಮನೆಯ ಹತ್ತಿರ ಬಂದಿದ್ದು, ಬಾಧಿತಳು ದೇವಮ್ಮಳು ಯಾಕೇ ಮನೆಗೆ ಬಂದೀಯಾ ಅಂತಾ ಹೇಳಲು, ಅಪರಾಧಿ ಬಸವರಾಜ ತಂದೆ ನಿಂಗಪ್ಪ ಕಂದಾರಿ ಮನೆಗೆ ಬರಬೇಡ ಅಂತಾ ಯಾಕೆ ಹೇಳುತ್ತಿ ಎಂದು ಮಹಿಳೆಯೊಂದಿಗೆ ವಾದ ಮಾಡುತ್ತಾ ಅಪರಾಧಿ ಬಸವರಾಜ ಈತನು ಅಲ್ಲಿಯೇ ಅಂಗಡಿಯಲ್ಲಿದ್ದ ಎಳೆನೀರು ಕಡಿಯುವ ಮಚ್ಚನ್ನು ತೆಗೆದುಕೊಂಡು ದೇವಮ್ಮಳ ಎಡಗೈ, ಬಲಗೈಗೆ, ಮೂಗಿನ ಮೇಲೆ ಹಾಗೂ ಹಣೆಯ ಮೇಲೆ ಹೊಡೆದು ಗಾಯಗೊಳಿಸಿದ ಆರೋಪ ಸಾಭೀತಾಗಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 30-01-2015 ರಂದು ಪ್ರಕರಣ ದಾಖಲಾಗಿರುತ್ತದೆ. ಅಂದಿನ ತನಿಖಾಧಿಕಾರಿ ಗಂಗಾವತಿ ಡಿ.ಎಸ್.ಪಿ ವಿನ್‌ಸೆಂಟ್ ಶಾಂತಕುಮಾರ ಅವರು ತನಿಖೆ ಮಾಡಿ ಆರೋಪಿಯ ಮೇಲೆ ದೋಷಾರೋಪಣೆಪಟ್ಟಿ ಸಲ್ಲಿಸಿರುತ್ತಾರೆ.
ಈ ಪ್ರಕರಣದಲ್ಲಿ ಹನುಮನಹಳ್ಳಿ ಗ್ರಾಮದ ಅಪರಾಧಿ ಬಸವರಾಜ ತಂದೆ ನಿಂಗಪ್ಪ ಕಂದಾರಿ ಇತನ ಮೇಲಿರುವ ಆರೋಪಗಳು ಸಾಭೀತಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ ಅವರು 24-05-2024 ರಂದು ಅಪರಾಧಿಗೆ 6 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 15,000 ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಹಾಂತಪ್ಪ ಎ.ಪಾಟೀಲ, ನಾಗರಾಜ್ ಆಚಾರ್, ಸವಿತಾ ಎಂ ಸಿಗ್ಲಿ, ಟಿ.ಅಂಬಣ್ಣ ಹಾಗೂ ಪ್ರಧಾನ ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಮನೋಹರ ಅವರು ಪ್ರಕರಣ ನಡೆಸಿರುತ್ತಾರೆ ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.