
ಮಾಡಿದ್ದುಣ್ಣೋ ಮಹಾರಾಯ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಅದೊಂದು ಬೇಕರಿ. ಆ ಬೇಕರಿಯ ಯಜಮಾನನಿಗೆ ಕೇಕ್ಗಳನ್ನು ತಯಾರಿಸಲು ಸಾಕಷ್ಟು ಪ್ರಮಾಣದ ಬೆಣ್ಣೆಯ ಅವಶ್ಯಕತೆ ಇತ್ತು. ಆದ್ದರಿಂದ ಎಮ್ಮೆಯನ್ನು ಕಟ್ಟಿದ ರೈತನೊಬ್ಬನೊಂದಿಗೆ ಆತ ಒಂದು ಒಪ್ಪಂದ ಮಾಡಿಕೊಂಡ. ಪ್ರತಿದಿನವೂ ತನಗೆ ಒಂದು ಕೆಜಿ ಬೆಣ್ಣೆ ಬೇಕಾಗುವುದೆಂದೂ ಆ ಬೆಣ್ಣೆಯ ಬದಲಾಗಿ ರೈತ ತಾನು ತಯಾರಿಸುವ ಒಂದು ಕೆಜಿ ಕೇಕನ್ನು ವಿನಿಮಯವಾಗಿ ಪಡೆಯಬೇಕು ಎಂಬುದು ಒಪ್ಪಂದದ ಭಾಗವಾಗಿತ್ತು. ಇದು ಹೀಗೆಯೇ ಬಹಳ ದಿನಗಳವರೆಗೆ ನಡೆಯುತ್ತಾ ಬಂದಿತು.
ಒಂದು ದಿನ ಬೇಕರಿಯ ಮಾಲೀಕನಿಗೆ ಬೆಣ್ಣೆಯ ತೂಕದಲ್ಲಿ ಸ್ವಲ್ಪ ವ್ಯತ್ಯಾಸವಿರುವುದು ಗಮನಕ್ಕೆ ಬಂದಿತು. ರೈತ ತನಗೆ ಮೋಸ ಮಾಡುತ್ತಿದ್ದಾನೆಂದು ತುಸು ಹೆಚ್ಛೇ ಸಿಟ್ಟಿನಿಂದ ಆತ ಪೂರ್ವಾಪರ ವಿಚಾರಿಸದೆ ಗ್ರಾಮದ ಪಂಚಾಯತಿದಾರರಲ್ಲಿ ದೂರು ನೀಡಿದ.
ಪಂಚಾಯತಿದಾರರು ರೈತನನ್ನು ಕರೆ ಕಳುಹಿಸಿದರು. ವಿಚಾರಿಸಲಾಗಿ ರೈತನು ನನ್ನ ಬಳಿ ಒಂದು ಕೆಜಿ ತೂಗುವ ತೂಕದ ಬಟ್ಟುಗಳು ಇಲ್ಲ… ಆದ್ದರಿಂದ ನಾನು ಬೇಕರಿಯವನು ನನಗೆ ಕೊಡುವ ಕೇಕಿನ ತೂಕದಷ್ಟೇ ಬೆಣ್ಣೆಯನ್ನು ತೂಗಿ ಆತನಿಗೆ ಕೊಡುವೆ ಎಂದು ಹೇಳಿದ. ಇದನ್ನು ಕೇಳಿ ಪಂಚಾಯಿತಿದಾರರು ಬೇಕರಿಯಾತನೆಡೆ ತುಸು ಕೋಪದಿಂದ ನೋಡಿದಾಗ ಬೇಕರಿಯಾತ ತಲೆ ತಗ್ಗಿಸಿ ನಿಂತುಕೊಂಡ.
ಅಸಲಿಗೆ ಬೇಕರಿಯಾತ ಕೆಲ ದಿನಗಳ ರೈತನಿಗೆ ಕಡಿಮೆ ತೂಕದ ಕೇಕುಗಳನ್ನು ಕೊಡಲಾರಂಭಿಸಿದ್ದ. ಇದರ ಅರಿವಿಲ್ಲದ ರೈತ ತೂಕದ ಬಟ್ಟುಗಳು ಇಲ್ಲದ ಕಾರಣ ಬೇಕರಿಯ ಮಾಲೀಕ ಕೊಡುವ ಕೇಕನ್ನು ಮನೆಗೆ ತಂದು ಅದೇ ತೂಕದ ಬೆಣ್ಣೆಯನ್ನು ಕೊಡಲಾರಂಭಿಸಿದ್ದ.
ಪಂಚಾಯಿತಿದಾರರು ಬೇಕರಿಯ ಮಾಲೀಕನಿಗೆ ತಾನು ತಪ್ಪು ಮಾಡಿರುವುದಲ್ಲದೆ ರೈತನ ಮೇಲೆ ಆಪಾದನೆ ಹೊರಿಸಿದ ಕಾರಣ ಆತನಿಗೆ ತಪ್ಪು ದಂಡ ಹಾಕಿ ಸಾರ್ವಜನಿಕ ಸಭೆಯಲ್ಲಿ ರೈತನ ಕ್ಷಮೆ ಕೇಳುವಂತೆ ಆದೇಶ ನೀಡಿದರು.
ಕೂಡಲೇ ಪಂಚಾಯತಿಯ ಮತ್ತು ಊರಿನ ಜನಗಳ ಸಮ್ಮುಖದಲ್ಲಿ ಬೇಕರಿಯ ಮಾಲೀಕ ರೈತನ ಎರಡೂ ಕೈಗಳನ್ನು ಹಿಡಿದು ನಾನು ತಪ್ಪು ಮಾಡಿದೆ ಕ್ಷಮಿಸು ಎಂದು ಕ್ಷಮೆ ಯಾಚಿಸಿದನು.
ಕೂಡಲೇ ರೈತನು ಬೇಕರಿಯ ಮಾಲೀಕನಿಗೆ ತಪ್ಪು ಮಾಡುವುದು ಮನುಷ್ಯ ಸಹಜ ಗುಣ… ಆದರೆ ತಿದ್ದಿ ನಡೆಯುವವನು ಮನುಜನಾಗುತ್ತಾನೆ. ನಾವು ಮಾಡಿದ ಪುಣ್ಯದ ಕರ್ಮಗಳು ನಮ್ಮನ್ನು ಬೆಂಬಿಡದೆ ಕಾಯ್ದರೆ, ಪಾಪದ ಕರ್ಮಗಳು ನಮ್ಮನ್ನು ಬೆಂಬಿಡದೆ ಕಾಡುತ್ತವೆ. ಆದ್ದರಿಂದಲೇ ಭಗವಾನ್ ಶ್ರೀ ಕೃಷ್ಣನು ಕರ್ಮನ್ಯೆ ವಾಧಿಕಾರಸ್ತೆ ಮಾ ಫಲೇಶು ಕದಾಚನ ಎಂದು ಹೇಳಿರುವುದು. ನಿಮ್ಮ ನಿಮ್ಮ ಕರ್ಮಗಳನ್ನು ಕರ್ತವ್ಯಗಳನ್ನು ನೀವು ಮಾಡುತ್ತಾ ಹೋಗಿ ಫಲಾಫಲಗಳು ನೀಡುವವನು ಆ ಭಗವಂತ ಎಂದು ಹೇಳಿದಾಗ ಬದುಕಿನ ಬಹು ದೊಡ್ಡ ಸತ್ಯವೊಂದನ್ನು ಅರಿತವನಂತೆ ಬೇಕರಿಯ ಮಾಲೀಕ ಕಣ್ಣರಳಿಸಿ ಪಂಚಾಯತಿಯ ಪ್ರಮುಖರು ಮತ್ತು ಪುರಜನರ ಮುಂದೆ ಕೈಮುಗಿದು ತನ್ನ ತಪ್ಪನ್ನು ಕ್ಷಮಿಸುವಂತೆ ತಲೆ ಬಾಗಿ ಎಲ್ಲರಲ್ಲೂ ಕೇಳಿಕೊಂಡನು.
ನೋಡಿದಿರಾ ಸ್ನೇಹಿತರೆ, ಕಥೆ ಹಳೆಯದೇ ಆದರೆ ಅದು ನೀಡುವ ಪಾಠ ನಿತ್ಯ ನೂತನ. ತಪ್ಪು ಮಾಡಿದವ ಶಿಕ್ಷೆಯನ್ನು ಅನುಭವಿಸಿಯೇ ತೀರುತ್ತಾನೆ ಎಂಬುದಕ್ಕೆ ಈ ಕಥೆ ಒಂದು ಉದಾಹರಣೆ. ಆದ್ದರಿಂದಲೇ ನಮ್ಮ ಜನಪದರು ಮಾಡಿದ್ದುಣ್ಣೋ ಮಹಾರಾಯ ಎಂದು ಗಾದೆಗಳಲ್ಲಿ ಸಾರಿದ್ದಾರೆ.
ನಾವು ಈ ಜಗತ್ತಿಗೆ ಬರುವಾಗ ಏನನ್ನೂ ತಂದಿಲ್ಲ…. ಹೋಗುವಾಗ ಏನನ್ನೂ ಕೊಂಡೊಯ್ಯುವುದಿಲ್ಲ. ನಮ್ಮ ಬದುಕಿನ ಅವಶ್ಯಕತೆಗಳು ಕೂಡ ಅತ್ಯಲ್ಪ. ಹೊಟ್ಟೆ ತುಂಬ ಊಟ, ಕಣ್ತುಂಬ ನಿದ್ದೆ, ಮಾಡಲು ಕೈಯಲ್ಲಿ ಕೆಲಸ,ತಲೆಯ ಮೇಲೆ ಒಂದು ಪುಟ್ಟ ಸೂರು, ಒಳ್ಳೆಯ ಸಂಗಾತಿ ಮತ್ತು ಮಕ್ಕಳು, ನೆಮ್ಮದಿಯ ಜೀವನ ಇಷ್ಟು ಮಾತ್ರವೇ ಬದುಕಿಗೆ ಬೇಕಾಗಿರುವ ಮುಖ್ಯ ಸಂಗತಿಗಳು. ಅತಿಯಾದ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಎಷ್ಟಿದ್ದರೂ ಸಾಲದು. ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ, ಇಷ್ಟಿದ್ದರೆ ಇನ್ನಷ್ಟು ಬೇಕೆಂಬ ಆಸೆ. ಇನ್ನಷ್ಟು ಸಿಕ್ಕರೆ ಮತ್ತಷ್ಟು ಬೇಕೆಂಬ ಆಸೆ ಕೊನೆಗೆ ಆಸೆಯ ಭಾವ ಭೂತವಾಗಿ ನಮ್ಮನ್ನು ಕಾಡಿ ನಮ್ಮ ನೆಮ್ಮದಿಯನ್ನು ಕಸಿಯುವ ಮೂಲಕ ನಮ್ಮನ್ನು ದುಃಖಕ್ಕೆ ಈಡು ಮಾಡುತ್ತದೆ. ಆದ್ದರಿಂದಲೇ ಭಗವಾನ್ ಬುದ್ಧ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಸಾರಿದನು.
ಅತಿ ಹೆಚ್ಚು ದುಡಿದ ವ್ಯಕ್ತಿ ಕೂಡ
*ಮೂರು ಹೊತ್ತಿನ ಬದಲು ನಾಲ್ಕು ಹೊತ್ತು ಊಟ ಮಾಡಲಾರ….ಅಕಸ್ಮಾತ್ ಉಂಡರೂ ಅದನ್ನು ಅರಗಿಸಿಕೊಳ್ಳಲಾರ.
*ಐಷಾರಾಮಿ ಹಾಸಿಗೆ ಕೊಂಡರೂ ನಿದ್ದೆಯನ್ನು ಕೊಳ್ಳಲಾರ
*ಜಗತ್ತಿನ ಎಲ್ಲ ದುಬಾರಿ ವಸ್ತುಗಳನ್ನು ಕೊಂಡರೂ
ನೆಮ್ಮದಿಯನ್ನು ಕೊಳ್ಳಲಾರ.
ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಆಗಾಗ ಅತ್ತಿತ್ತ ಹರಿದಾಡುವ ಚಂಚಲ ಮನಸ್ಸನ್ನು
ನಿಗ್ರಹಿಸಿಕೊಳ್ಳುತ್ತಾ ನೆಮ್ಮದಿಯ ಬದುಕನ್ನು ಬಾಳೋಣ.